ಮಂಗಳೂರು(ಫೆ.೦೭, ಕುಲಾಲ್ ವರ್ಲ್ಡ್ ನ್ಯೂಸ್): ಕುಲಾಲ ಸಮುದಾಯದ ಉದ್ಯಮಿ, ಕರ್ನಾಟಕ ರಕ್ಷಣಾ ವೇದಿಕೆಯ ದ.ಕ ಜಿಲ್ಲಾ ಅಧ್ಯಕ್ಷ ಅನಿಲ್ ದಾಸ್ ಅವರಿಗೆ ಭೂಗತ ಪಾತಕಿ ಕಲಿ ಯೋಗೀಶ ಫೋನ್ ಮೂಲಕ ಕೊಲೆ ಬೆದರಿಕೆ ಒಡ್ಡಿದ ಕುರಿತು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಕೆಲವು ಸಮಯಗಳಿಂದ ಅನಿಲ್ ದಾಸ್ ಅವರಿಗೆ ಕಲಿ ಯೋಗೀಶನ ಹೆಸರಿನಲ್ಲಿ ಕರೆ ಮಾಡಿರುವ ವ್ಯಕ್ತಿ, ಮೊದಲು 25 ಲಕ್ಷ ನೀಡುವಂತೆ ಹೇಳಿದ್ದು, ಇದನ್ನು ನಿರ್ಲಕ್ಷಿಸಿದ್ದರಿಂದ ಕಳೆದ ಜ . ೧ರಂದು ಮೊಬೈಲ್ ಗೆ ಕರೆ ಮಾಡಿ 50 ಲಕ್ಷ ನೀಡಬೇಕು ಇಲ್ಲದಿದ್ದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಉದ್ಯಮದಲ್ಲಿ ಕೋಟಿಗಟ್ಟಲೆ ಹಣ ಸಂಪಾದಿಸಿದ್ದಿ, ಅಲ್ಲದೆ ಐಷಾರಾಮಿ ಆಡಿ ಕಾರಿನಲ್ಲಿ ಓಡಾಡುತ್ತೀಯ, ನಿನ್ನ ಎಲ್ಲ ವ್ಯವಹಾರಗಳ ಮಾಹಿತಿ ನನ್ನ ಬಳಿ ಇದೆ ಎಂಬ ರೀತಿಯಲ್ಲಿ ಮಾತನಾಡಿರುವ ಕಲಿ ಯೋಗೀಶನ ಕಾಟ ದಿನೇ, ದಿನೇ ಅತಿಯಾಗಿದ್ದರಿಂದ ಫೋನ್ ಕಾಲ್ ರೆಕಾರ್ಡ್ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಗೆ ಪ್ರತಿಕ್ರಿಯೆ ನೀಡಿರುವ ಅನಿಲ್ ದಾಸ್ `ನಾನು ಕಡು ಬಡತನದಲ್ಲಿ ಅತಿ ಕಷ್ಟದಲ್ಲಿ ಬೆಳೆದು ಬಂದಿದ್ದು, ಸ್ವ ಶ್ರಮದಿಂದ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದೇನೆ. ಜೀವನದಲ್ಲಿ ಉಂಟಾದ ಸೋಲುಗಳನ್ನು ಸವಾಲುಗಳನ್ನಾಗಿ ಸ್ವೀಕರಿಸಿ ಒಂದು ಮಟ್ಟಕ್ಕೆ ಬಂದು ನಿಂತು, ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಅರ್ಪಿಸುವ ಮನೋಭಾವ ನನ್ನದು. ಸ್ವಂತಕ್ಕಾಗಿ ಮಾಡಿದ್ದು ಕಡಿಮೆ. ಆದ್ದರಿಂದ ಅನೇಕ ಮಂದಿಗೆ ನೆರವಾಗಿದ್ದೇನೆ. ಇದು ನೋಡುವವರಿಗೆ ಕಣ್ಣು ಕುಕ್ಕುವಂತೆ ಮಾಡಿದ್ದು, ನಮ್ಮ ಕಷ್ಟ ಇತರರಿಗೆ ಅರ್ಥವಾಗುವುದಿಲ್ಲ. ಉದ್ಯಮ, ಓಡಾಡುವ ಕಾರಿಗಾಗಿ ಬ್ಯಾಂಕ್ ಸಾಲ ಇದೆ. ಈ ತಲೆನೋವುಗಳ ಮಧ್ಯೆ ಇಂತಹ ವ್ಯಕ್ತಿಗಳ ಕಾಟ. ಇದನ್ನು ಫೋನ್ ಮಾಡಿದ ವ್ಯಕ್ತಿಗೂ ಹೇಳಿದ್ದೇನೆ. ಜೀವ ಬೆದರಿಕೆಗೆ ಬಗ್ಗುವುದಿಲ್ಲ. ಆಯುಷ್ಯ ನೀಡುವವ ದೇವರು. ಅಷ್ಟು ವರ್ಷ ಪ್ರಾಮಾಣಿಕವಾಗಿ ಬದುಕುವುದು ಮುಖ್ಯ” ಎಂದಿದ್ದಾರೆ.
ಕಲಿ ಯೋಗೀಶನ ಕುರಿತು ಈ ಹಿಂದೆ ಕೋಕಾ ಕಾಯ್ದೆ ಸಹಿತ ಹಲವು ಪ್ರಕರಣ ದಾಖಲಾಗಿದ್ದು, ಇತ್ತೀಚೆಗಷ್ಟೇ ಕಾರ್ಸ್ಟ್ರೀಟ್ನಲ್ಲಿರುವ ಎಂ.ಸಂಜೀವ ಶೆಟ್ಟಿ ಸಿಲ್ಕ್ಸ್ ಆ್ಯಂಡ್ ಸಾರೀಸ್ ವಸ್ತ್ರ ಮಳಿಗೆಯಲ್ಲಿ ಸಿಬ್ಬಂದಿ ಮೇಲೆ ಶೂಟೌಟ್ ಮಾಡಿಸಿದ್ದು ಕೂಡಾ ಈತನೇ ಎಂಬುದಾಗಿ ತಿಳಿದು ಬಂದಿದೆ. ಅನಿಲ್ ದಾಸ್ ಅವರಿಗೆ ಎರಡು ವರ್ಷಗಳ ಹಿಂದೆಯೇ ಇಂತಹ ಕೊಲೆ ಬೆದರಿಕೆ ಕರೆಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸ್ವ ರಕ್ಷಣೆಗಾಗಿ ಬಂದೂಕು ಪರವಾನಿಗೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.