ಕಾಪು: ಸಹೋದರ ಹಾಗೂ ಸಹೋದರಿ ಇಬ್ಬರೂ ತೆವಳುತ್ತಲೇ ಸಾಗಿ ತಮ್ಮ ಜೀವ ಸವೆಸುತ್ತಿದ್ದರೂ, ತಾವು ಬೇರೆಯವರಿಗೆ ಹೊರೆ ಆಗದಿರಲೆಂದು ಬೀಡಿ ಕಟ್ಟಿ ಸಂಸಾರ ದೂಡುತ್ತಿರುವುದು ಸಮಾಜಕ್ಕೆ ಒಂದು ಮಾದರಿಯಾದರೆ, ಕೈಕಾಲು ಸರಿ ಇದ್ದರೂ ಸೋಮಾರಿ ಯಂತೆ ಜೀವನ ಸಾಗಿಸುತ್ತಿರುವವರಿಗೆ ಒಂದು ಪಾಠದಂತಿದೆ.
ಕಾಪು ಸಮೀಪದ ಮಜೂರು ಗ್ರಾಮದ ಪಾದೂರು ಕೂರಾಲು ಹರಕು ಗುಡಿಸಲಲ್ಲಿ ವಾಸ ಇರುವ ದಿ| ಅಪ್ಪಿ ಹಾಗೂ ಚಂದು ಮೂಲ್ಯ ದಂಪತಿಯ ನಾಲ್ಕು ಮಕ್ಕಳಲ್ಲಿ ಹುಟ್ಟಿ ನಿಂದಲೇ ಸಂಪೂರ್ಣ ಅಂಗವಿಕಲ ರಾಗಿರುವ ಹರೀಶ್ (42) ಮತ್ತು ಬೇಬಿ (38)ಯವರ ಕರುಣಾಜನಕ ಕಥೆ ಇದು.
ಹರೀಶ ತನ್ನ ಕಾಲಿನ ಸ್ವಾಧೀನತೆ ಕಳೆದುಕೊಂಡು ಬೆನ್ನು ಹಾಗೂ ಹೊಟ್ಟೆಯನ್ನು ಒಂದಾಗಿಸಿಕೊಂಡಿದ್ದರೆ, ಬೇಬಿ ತನ್ನ ಕಾಲಿನ ಸ್ವಾಧೀನ ಕಳೆದು ಕೊಂಡು ಎಡ ಕೈ ಮುರುಟಿದ ಸ್ಥಿತಿಯಲ್ಲಿದೆ. ಇವರ ಸಹೋದರ ವಿಠಲ ಇವರ ಸಂಸಾರಕ್ಕೆ ಸಹಾಯ ಮಾಡುವ ಮೊದಲೇ ಕ್ಯಾನ್ಸರ್ ರೋಗಕ್ಕೆ ಬಲಿ ಯಾಗಿದ್ದಾನೆ. ಇವರ ಸಹೋದರಿ ಪುಷ್ಪ ಮದುವೆಯಾಗಿ ಗಂಡನ ಮನೆಗೆ ತೆರಳಿದ್ದಾಳೆ. ಇವರನ್ನು ಮಗುವಿನಂತೆ ಸಲ ಹುತ್ತಿದ್ದ ತಾಯಿಯೂ ಎರಡು ವರ್ಷದ ಹಿಂದೆ ಇವರನ್ನು ಬಿಟ್ಟು ಮತ್ತೆ ಬಾರದ ಲೋಕಕ್ಕೆ ತೆರಳಿದಾಗ ಇವರ ಜೀವನದಲ್ಲಿ ಸಂಪೂರ್ಣ ಕತ್ತಲು ಕವಿದಿದ್ದು ನಿಜ. ಇದೀಗ ತನ್ನ ಅಣ್ಣ ಹಾಗೂ ಅಕ್ಕನ ಸೇವೆಗಾಗಿ ಕಿರಿಯ ಸಹೋದರಿ ಟೊಂಕ ಕಟ್ಟಿದ್ದಾಳೆ. ಮುಂಬೈಯಲ್ಲಿ ಕೆಲಸ ಮಾಡುತ್ತಿರುವ ತನ್ನ ಗಂಡನ ಮನವೊಲಿಸಿ ತನ್ನ ತಾಯಿಯ ಮನೆಗೆ ಬಂದು ಆಕೆ ಸೇರಿಕೊಂಡಿದ್ದಾಳೆ.
ಬೀಡಿಯೇ ಇವರಿಗೆ ಮೂಲಾಧಾರ:
ತಮ್ಮ ಅಕ್ಕಳಿಗೆ ನಮ್ಮಿಂದ ತೊಂದರೆ ಆಗದಿರಲೆಂದು ಅಣ್ಣ-ತಂಗಿಯರಿಬ್ಬರೂ ಬೀಡಿ ಕಟ್ಟುವಿಕೆ ಯತ್ತ ತಮ್ಮ ಮುಖ ಮಾಡಿದ್ದಾರೆ. ಹರೀಶ ಬೀಡಿ ಎಲೆ ಕತ್ತರಿಸಿ ತಂಗಿಗೆ ಬೀಡಿ ಕಟ್ಟಲು ಸಹಾಯ ಮಾಡಿಕೊಡುತ್ತಿದ್ದರೆ, ತಂಗಿ ತನ್ನ ಮುರುಟಿದ ಕೈಯಲ್ಲಿಯೇ ಬೀಡಿಯನ್ನು ಸುರುಳಿ ಮಾಡಿ ನೂಲು ಸುತ್ತಿ ಬೀಡಿಯನ್ನು ಕಟ್ಟುತ್ತಿದ್ದಾಳೆ.
ಅಣ್ಣ ತಂಗಿ ಸೇರಿ ದಿನವೊಂದಕ್ಕೆ 500 ಬೀಡಿ ಕಟ್ಟುತ್ತಿದ್ದು, ಕಟ್ಟಿದ ಬೀಡಿ ಯನ್ನು ಕಿರಿಯ ಸಹೋದರಿ ಪುಷ್ಪ ಬೀಡಿ ಬ್ರಾಂಚಿಗೆ ಕೊಂಡೊಯ್ಯಲು ಸಹಕಾರ ಮಾಡುತ್ತಾರೆ. ಹಿರಿಯ ಸಹೋದರಿ ಮತ್ತು ಸಹೋದರಿಗೆ ಊಟ, ತಿಂಡಿ ಮತ್ತಿತರ ಅತ್ಯಾವಶ್ಯಕತೆಯನ್ನು ಪೂರೈಸುವುದರಲ್ಲಿಯೇ ಆಕೆ ಕೃಥಾರ್ತತೆ ಪಡೆಯುತ್ತಾಳೆ.
ಸರಕಾರದಿಂದ ನೆರವು:
ಅಂಗವಿಕಲತೆಗಾಗಿ ಹಿಂದೆ ಸರಕಾರದಿಂದ ೪೦೦ ರೂಪಾಯಿ ಮಾಸಿಕ ಭತ್ಯೆ ಬರುತ್ತಿದ್ದು, ಇದೀಗ ಮಾಸಿಕ ಒಂದು ಸಾವಿರ ರುಪಾಯಿ ಬರುತ್ತಿದೆ.
ಸಹೃದಯವಂತ ದಾನಿಗಳು ಇವರಿಗೆ ನೆರವು ನೀಡ ಬಯಸಿದ್ದರೆ, ಕಾಪುವಿನ ಸಿಂಡಿಕೇಟ್ ಬ್ಯಾಂಕ್ ಶಾಖೆಯ (ಹರೀಶ್) 01252210021722 ಮತ್ತು (ಬೇಬಿ) 01252210021718 ಖಾತೆಗೆ ಹಣ ವರ್ಗಾಯಿಸಬಹುದು.
* ಬಾಲಕೃಷ್ಣ ಉಚ್ಚಿಲ