ಬೆಂಗಳೂರು(ಫೆ.೦೬, ಕುಲಾಲ್ ವರ್ಲ್ಡ್ ನ್ಯೂಸ್) :ಸವಿತಾ ಸಮಾಜ, ಕುಂಬಾರರು, ಮಡಿವಾಳರು ಸಾಮಾಜಿಕ ನ್ಯಾಯದಿಂದ ವಂಚಿತವಾಗಿದ್ದಾರೆ. ಈ ಸಮುದಾಯಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡುವ ಸೌಲಭ್ಯಗಳನ್ನು ಒದಗಿಸಬೇಕು ಎಂದು ರಾಜ್ಯ ಸವಿತಾ ಸಮಾಜದ ಅಧ್ಯಕ್ಷ ಕೃಷ್ಣಮೂರ್ತಿ ಒತ್ತಾಯಿಸಿದರು.
ಕರ್ನಾಟಕ ಹಿಂದುಳಿದ ವರ್ಗ, ದಲಿತ ಹಾಗೂ ಅಲ್ಪಸಂಖ್ಯಾತರ ಜಂಟಿ ಕ್ರಿಯಾ ವೇದಿಕೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳು’ ವಿಚಾರಸಂಕಿರಣದಲ್ಲಿ ಮಾತನಾಡಿದರು. ಸವಿತಾ ಸಮಾಜ, ಕುಂಬಾರರು, ಮಡಿವಾಳರನ್ನು ಪ್ರವರ್ಗ 2ಎಗೆ ಸೇರಿಸಲಾಗಿದೆ. ಆದರೆ, ಇದರಲ್ಲಿ 108 ಜಾತಿಗಳಿವೆ. ಕೆಲವು ಪ್ರಬಲ ಜಾತಿಗಳೂ ಇವೆ.ಈ ಸಮುದಾಯಗಳಿಗೆ ಎಸ್ ಸಿ/ಎಸ್ಟಿ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದ ಅವರು ‘ಕ್ಷೌರ ಮತ್ತು ನಾದಸ್ವರಕ್ಕೆ ಸವಿತಾ ಸಮಾಜದವರ ಸೇವೆ ನಿತ್ಯ ಅಗತ್ಯವಿದೆ. ಆದರೆ, ನಮ್ಮನ್ನು ಬಳಸಿ ಬಿಸಾಡುವಂತೆ ಇಡೀ ಸಮಾಜ ನಡೆಸಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.