ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕೆಲವರಿಗೆ ಪರಿಶ್ರಮವೇ ಉಸಿರು. ನಿರಂತರ ಶ್ರಮವನ್ನೇ ಅಪೇಕ್ಷಿಸಿ, ಅದನ್ನು ಸವಾಲಾಗಿ ಸ್ವೀಕರಿಸಿ, ಅದರ ಫಲವನ್ನು ಸಂತೃಪ್ತಿಯಿಂದ ಪಡೆಯುತ್ತಾರೆ. ಅಂತಹ ಓರ್ವ ಪರಿಶ್ರಮಿ ಹೆನ್ನಾಬೈಲ್ ಬಸವ ಕುಲಾಲ್. ಹೀಗೆ ಊರಿನ ಹೆಸರಿನೊಂದಿಗೆ ಬಸವ ಕುಲಾಲ್ ಎಂದರೆ ಯಾರಿಗೂ ತಿಳಿಯಲಿಕ್ಕಿಲ್ಲ. ‘ಐಸ್ಕ್ರೀಮ್ ಬಸವಣ್ಣ’ ಎಂದರೆ ಕುಂದಾಪುರ ಪರಿಸರದಲ್ಲಿ ಒಮ್ಮೆಲೆ ಗೊತ್ತಾಗುತ್ತದೆ. ಅಂಥಹ ಜನಪ್ರಿಯತೆಯನ್ನು ಬಸವಣ್ಣ ಪಡೆದುಕೊಂಡದಿದ್ದರೆ ಅದು ತನ್ನ ಐಸ್ಕ್ರೀಮ್ ವ್ಯಾಪಾರದಿಂದ..
ಅಂದಿನ ಕಾಲದಲ್ಲಿ ಐದು ಪೈಸೆಗೆರಡು ಐಸ್ಕ್ಯಾಂಡಿ ಬೆಲೆ ಇದ್ದಾಗಿನಿಂದ ಪ್ರಾರಂಭಗೊಂಡ ಬಸವಣ್ಣನ ಐಸ್ಕ್ರೀಮ್ ಯಶೋಗಾಥೆಗೆ ಈಗ ೪೦ರ ಹರೆಯ. ಸುದೀರ್ಘ ನಾಲ್ಕು ದಶಕಗಳಿಂದ ಬಸವಣ್ಣ ಎರಡು ಚಕ್ರದ ಐಸ್ಕ್ರೀಮ್ ಗಾಡಿಯೊಂದಿಗೆ ದಿನ ೨೦ ಕಿಲೋ ಮೋಟರ್ ಸುತ್ತುತ್ತಾರೆ. ಜನಗಳಿಗೆ ಐಸ್ಕ್ರೀಮ್ ನೀಡಿ ತನ್ನ ಜೀವನೋಪಾಯವನ್ನು ಕಂಡುಕೊಳ್ಳುತ್ತಾರೆ.
ಮೂಲತಃ ಸಣ್ಣ ಕೃಷಿ ಕುಟುಂಬದಲ್ಲಿ ಹುಟ್ಟಿದ ಬಸವಣ್ಣ ಶ್ರಮಜೀವಿ. ಕಷ್ಟವನ್ನು ಮೆಟ್ಟಿ ನಿಂತು ದಿನವೊಂದಕ್ಕೆ ೨೦ಕ್ಕೂ ಹೆಚ್ಚು ಮೈಲಿ ನಡಿಗೆಯನ್ನು ನೀರಾಯಾಸವಾಗಿ ಸ್ವೀಕರಿಸಿದವರು. ಮಳೆಗಾಲದ ನಾಲ್ಕು ತಿಂಗಳು ರಜೆ ಬಿಟ್ಟರೆ ಮತ್ತೆ ಎಂಟು ತಿಂಗಳು ಬಸವಣ್ಣ ತಮ್ಮ ಕಾಯಕದಲ್ಲಿ ಫುಲ್ ಬ್ಯುಸಿ. ಮಕ್ಕಳಿಗೆ ಐಸ್ಕ್ರೀಮ್ ಕೊಡುವುದರಲ್ಲಿ ಬಸವಣ್ಣನ ನಗುಮೊಗದ ಪಯಣ ಭರದಿಂದಲೇ ಸಾಗುತ್ತದೆ. ಕುಂದಾಪುರದ ಉಷಾ ಐಸ್ಕ್ರೀಮ್ನಿಂದ ಹೊರಟ ಬಸವಣ್ಣನ ಐಸ್ಕ್ರೀಮ್ ಗಾಡಿ ಕುಂದಾಪುರ, ಕೋಣಿ, ಬಸ್ರೂರು, ಮಾರ್ಗೋಳಿ, ಅನಗಳ್ಳಿ ಹೀಗೆ ಹತ್ತಾರು ಗ್ರಾಮೀಣ ಪ್ರದೇಶಗಳಲ್ಲಿ ಸುತ್ತಿ ಮತ್ತೆ ಕುಂದಾಪುರ ಸೇರುತ್ತದೆ.
ಈಗ ಬಸವಣ್ಣನಿಗೆ ೬೬ ವರ್ಷ. ಯೌವನದ ಕಾಲದಲ್ಲಿ ಐಸ್ಕ್ರೀಮ್ ಗಾಡಿ ಹಿಡಿದವರು ಮತ್ತೆ ಬಿಡಲೇ ಇಲ್ಲ. ‘ಆ ಕಾಲ ತುಂಬಾ ಕಷ್ಟವಿತ್ತು. ೫ಪೈಸೆಗೆ ೨ ಐಸ್ಕ್ಯಾಂಡಿ ಬರುತ್ತಿತ್ತು. ಆ ಕಾಲಕ್ಕೆ ಐಸ್ಕ್ರೀಮ್ ಎಂದರೇ ಕ್ಯಾಂಡಿ ಮಾತ್ರವಾಗಿತ್ತು’ ಎಂದು ೪೦ ವರ್ಷಗಳ ಗತಪೂರ್ವವನ್ನು ಮೆಲುಕು ಹಾಕುವ ಬಸವಣ್ಣ, ಆಗ ಒಟ್ಟು ೨೦ ರೂಪಾಯಿ ವ್ಯಾಪಾರ ಆದ್ರೆ ಅದೇ ದೊಡ್ಡದು. ಅದರಲ್ಲಿ ೫-೬ ರೂ.ಲಾಭ ಅಂತ ಉಳಿತ್ತಿತ್ತು ಎನ್ನುತ್ತಾರೆ. ಈಗ ಕ್ಯಾಂಡಿಯ ಸ್ಥಾನದಲ್ಲಿ ನೂತನ ನಮೂನೆಯ ಐಸ್ಕ್ರಿಮ್ಗಳು ಬಂದಿವೆ. ಆಗ ನಾನು ಐಸ್ಕ್ರಿಮ್ ಕೊಡುತ್ತಿದ್ದ ಮಕ್ಕಳು ಇಂದು ಮದುವೆಯಾಗಿ ಅವರ ಮಕ್ಕಳು ಕೂಡಾ ನನ್ನಿಂದ ಐಸ್ಕ್ರೀಮ್ ತಗೆದುಕೊಳ್ಳುತ್ತಿದ್ದಾರೆ. ಜನರ ವಿಶ್ವಾಸ, ಪ್ರೀತಿಯೇ ನನಗೆ ಸ್ಪೂರ್ತಿ ಎನ್ನುತ್ತಾರೆ.
ಇಂದು ಐಸ್ಕ್ರೀಮ್ ವ್ಯಾಪಾರಕ್ಕೆ ದ್ವಿಚಕ್ರ, ತ್ರಿಚಕ್ರ, ಚತುಃಷಕ್ರಗಳ ವಾಹನಗಳು ಬಂದಿವೆ. ಆದರೆ, ಬಸವಣ್ಣ ಮಾತ್ರ ಎರಡು ಗಾಲಿಯ ದೂಡುಗಾಡಿಯಲ್ಲೇ ಇದ್ದಾರೆ. ದಿನ ಹೊಸಂಗಡಿಯಿಂದ ಬಂದು ವ್ಯಾಪಾರ ಮಾಡುವ ಬಸವಣ್ಣನ ಕಾರ್ಯವೈಖರಿಯನ್ನು ಗುರುತಿಸಿ, ಸಂಘಟನೆಗಳು ಸನ್ಮಾನಿಸಿದ್ದು ಇದೆ. ಪತ್ನಿ,ಇಬ್ಬರು ಪುತ್ರಿಯರು, ಇಬ್ಬರು ಪುತ್ರರೊಂದಿಗಿನ ಚೆಂದದ ಸಂಸಾರ ಬಸವಣ್ಣನವರದ್ದು.
ಬಸವಣ್ಣ ಐಸ್ಕ್ರೀಮ್ ಕೊಡುವ ವಾತ್ಸಲ್ಯವೇ ವಿಶೇಷವಾದುದು. ಪ್ರೀತಿಯಿಂದ ಮಾತನಾಡಿಸಿ, ಏನು ಬೇಕೋ ಅದನ್ನು ಕೊಡುತ್ತಾರೆ. ಸುಮಾರು ೩೫-೪೦ ವರ್ಷಗಳ ಹಿಂದೆ ಬಸವಣ್ಣನ ಐಸ್ಕ್ರೀಮ್ ಗಾಡಿ ಎಷ್ಟು ಹೊತ್ತಿಗೆ ಬರುತ್ತದೆ ಎಂದು ಕಾದು ಕುಳಿತ್ತಿದ್ದ ಶಾಲಾ ಮಕ್ಕಳು ಇಂದು, ತಂದೆ ತಾಯಿಗಳಾಗಿದ್ದಾರೆ. ಬಸವಣ್ಣನ ಐಸ್ಕ್ರೀಮ್ ಗಾಡಿ ಕಂಡಾಗ ಅವರಿಗೂ ಬಾಲ್ಯ ನೆನಪಾಗುತ್ತದೆ. ತಾವು ಬದಲಾಗಿದ್ದೇವೆ. ಆದರೆ ಬಸವಣ್ಣ ಮಾತ್ರ ಹಾಗೆಯೇ ಇದ್ದಾರೆ. ಅದೇ ಮಮತೆ, ಅದೇ ಪ್ರೀತಿಯ ಕರೆ ಇವರಲ್ಲಿದೆ. ಐಸ್ ಕೊಟ್ಟು ಕೂಲ್ ಮಾಡುವ ಬಸವಣ್ಣನಿಗೆ ಒಂದು ಹ್ಯಾಟ್ಸ್ ಆಫ್ ಹೇಳಲೆ ಬೇಕು ಅಲ್ಲವೇ?
(ಮಾಹಿತಿ ಕೃಪೆ : ಕರಾವಳಿ ಕರ್ನಾಟಕ )