ಮೂಲ್ಕಿ(ಜ.೦೫, ಕುಲಾಲ್ ವರ್ಲ್ಡ್ ನ್ಯೂಸ್ ) : ಹುಟ್ಟಿನಿಂದ ಬಳುವಳಿ ಎಂಬಂತಿದ್ದ ಬಡತನದ ನಡುವೆ ಸಂಸಾರದ ನೊಗ ಹೊತ್ತು ಸಾಗುತ್ತಿರುವಾಗಲೇ ಅಪಘಾತವೆಂಬ ಅಲೆ ಅಪ್ಪಳಿಸಿ ಸುಂದರ ಸಂಸಾರದ ಸ್ಥಿತಿ ಶೋಚನೀಯವಾಗಿಸಿದ ಮೂಲ್ಕಿ ಸಮೀಪದ ಕಿಲ್ಪಾಡಿ ಬಳಿ ವಾಸವಾಗಿರುವ ಲಕ್ಷ್ಮಣ ಮೂಲ್ಯ ಅವರಿಗೆ `ಕುಲಾಲ ಜವನೆರ್ ತೋಕೂರು’ ವಾಟ್ಸಾಪ್ ಗ್ರೂಪಿನ ಸದಸ್ಯರು 18 ಸಾವಿರ ರೂ. ನೆರವು ನೀಡಿ ಸಾಂತ್ವನ ಹೇಳಿದ್ದಾರೆ. ಜನವರಿ ೫ರಂದು ಲಕ್ಷ್ಮಣ ಮೂಲ್ಯ ಅವರಿಗೆ ಗ್ರೂಪಿನ ಸದಸ್ಯರು ಸಂಗ್ರಹಿಸಿದ್ದ ಹಣವನ್ನು ಹಸ್ತಾ೦ತರ ಮಾಡಿದರು.
ಲಕ್ಷ್ಮಣ ಅವರ ಕಣ್ಣೀರ ಕಥೆ :
ಲಕ್ಷ್ಮಣ ಮೂಲ್ಯ(51ವರ್ಷ) ಅವರು ಮೂಲತಃ ಕಾಪು ಸಮೀಪದ ಬೆಳಪುವಿನವರು. ಅಲ್ಲಿನ ಪಂಚ ಮೂಲ್ಯ-ಪಲ್ಲು ಮೂಲ್ಯ ದಂಪತಿಗಳ ಮಗನಾದ ಇವರು ಕಳೆದ ಹತ್ತು ವರ್ಷಗಳಿಂದ ಕಿಲ್ಪಾಡಿ ಬಳಿ ಮನೆ ಮಾಡಿ ವಾಸವಾಗಿದ್ದಾರೆ.
ಲಕ್ಷ್ಮಣ ಮೂಲ್ಯ ಅವರಿಗೆ ವಿವಾಹವಾಗಿದ್ದು ಪತ್ನಿ ತುಳಸಿ, ಶಾಲೆಗೆ ಹೋಗಿತ್ತಿರುವ ಮೂವರು ಚಿಕ್ಕ ಮಕ್ಕಳಾದ ಲತೇಶ್, ಅನಿಲ್, ಕಾವ್ಯ ಇದ್ದಾರೆ. ಬೇರೆಯವರ ಕ್ಯಾಂಟೀನ್ ವೊಂದರಲ್ಲಿ ದುಡಿಯುತ್ತಾ ಇದ್ದ ಲಕ್ಷ್ಮಣ ಅವರು, ಸ್ವಂತ ಉದ್ಯೋಗ ನಡೆಸಿ ಸ್ವಾವಲಂಬಿ ಜೀವನ ನಡೆಸಬೇಕೆಂಬ ಛಲದಿಂದ ಎರಡು ವರ್ಷಗಳ ಹಿಂದೆ ಸಮೋಸ ವ್ಯಾಪಾರ ಆರಂಭಿಸಿದ್ದರು. ಮನೆಯಲ್ಲೇ ಸಮೋಸ ತಯಾರಿಸಿ ಅಂಗಡಿ-ಕ್ಯಾಂಟೀನ್ -ಹೋಟೆಲ್ ಗಳಿಗೆ ಸೈಕಲ್ ಮೂಲಕ ಲೈನ್ ಸೇಲ್ ಮಾಡುತ್ತಿದ್ದರು. ಈ ವ್ಯವಹಾರ ಚೆನ್ನಾಗಿ ನಡೆಯುತ್ತಾ ಒಳ್ಳೆ ಆದಾಯವಿತ್ತು. ನೆಮ್ಮದಿಯ ಜೀವನ ನಡೆಸುತ್ತಿದ್ದರು. ಇಂತಹ ವೇಳೆ ವಿಧಿಯ ಕ್ರೂರ ದೃಷ್ಟಿ ಈತನ ಮೇಲೆ ಬಿತ್ತೋ ಏನೋ, ಕಳೆದ ನವೆಂಬರ್ ತಿಂಗಳ 9ನೇ ತಾರೀಕಿನಂದು ತನ್ನ ವ್ಯಾಪಾರಕ್ಕೆಂದು ತೆರಳುತ್ತಿದ್ದ ವೇಳೆ ಕಾರ್ನಾಡ್ ಬಳಿ ಇವರ ಸೈಕಲ್ ಗೆ ಬೈಕೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆ ಅಪ್ಪಳಿಸಿದ ಇವರ ತಲೆಗೆ ಬಲವಾದ ಏಟು ತಗುಲಿ ಮೂಗು, ಕಿವಿಯಲ್ಲಿ ರಕ್ತ ಸುರಿದಿದೆ. ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಯಿತು. 45 ದಿನ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದ ಇವರ ತಲೆ ಆಪರೇಷನ್ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದು, ಸ್ವಲ್ಪ ಚೇತರಿಸಿಕೊಂಡ ಬಳಿಕ ಡಿಸ್ಚಾರ್ಜ್ ಆಗಿದ್ದು ಸದ್ಯ ಮನೆಯಲ್ಲಿದ್ದಾರೆ. ಆಸ್ಪತ್ರೆ ಚಿಕಿತ್ಸಾ ವೆಚ್ಚ ನಾಲ್ಕು ಲಕ್ಷ ರೂ ದಾಟಿತ್ತು, ಸಮೋಸ ಮಾರಿ ಗಳಿಸಿದ್ದ ಆದಾಯ ಜೊತೆ ಸಾಲಮೂಲ ಮಾಡಿ ಬಿಲ್ ಪಾವತಿ ಮಾಡಿದ್ದಾರೆ. ಇದೀಗ ತಲೆಯನ್ನು ಮೇಲೆತ್ತಲು ವಿಪರೀತ ನೋವು ಕಾಡುತ್ತಿದ್ದು, ಇದಕ್ಕೆ ಮತ್ತೊಂದು ಆಪರೇಷನ್ ನ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಲಕ್ಷ್ಮಣ ಅವರೊಬ್ಬರ ದುಡಿಮೆಯನ್ನೇ ಇಡೀ ಕುಟುಂಬ ಅವಲಂಬಿಸಿದ್ದು, ಇದೀಗ ಆದಾಯವಿಲ್ಲದೇ ಸ್ಥಿತಿ ಈ ಮಟ್ಟಕ್ಕೆ ತಲುಪಿದ್ದು ಅವರ ಮುಂದಿನ ಬದುಕಿಗೆ `ತೋಕೂರು ಕುಲಾಲ ಜವನೆರ್’ ಧನ ಸಹಾಯ ಮಾಡಿ ಮಾನವತೆಯನ್ನು ಮೆರೆದಿದ್ದಾರೆ.