ಸಂಘಟನೆಗಳ ಅಂತ್ಯ ವಿಘಟನೆಗಳಲ್ಲಿ ಸಲ್ಲ : ಮಾಣಿಲ ಮೋಹನದಾಸ ಸ್ವಾಮೀಜಿ
____________________________________________________________________________________________________________
ಸಮಾವೇಶಗಳು ಚಳುವಳಿ ರೂಪವಾಗಲಿ : ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ
________________________________________________________________________________________________________________
ಹಿಂದುಳಿದ ವರ್ಗದ ಏಳಿಗೆಗೆ ಸರ್ಕಾರದ ಸಕಲ ಪ್ರಯತ್ನ : ಸಚಿವ ರಮಾನಾಥ ರೈ
_______________________________________________________________________________________________________
ಕುಂಬಾರರಲ್ಲಿ ಸಮರ್ಥ ನಾಯಕತ್ವ ಗುಣ : ಬಿಜೆಪಿ ಯುವ ಮುಖಂಡ ಹರೀಶ್ ಪೂಂಜಾ
ಬೆಳ್ತಂಗಡಿ(ಜ.೦೪, ಕುಲಾಲ್ ವರ್ಲ್ಡ್ ನ್ಯೂಸ್) : ಸಮಾವೇಶ ಅಧಿಕಾರ, ಸ್ಥಾನಮಾನಕ್ಕಾಗಿ ಅಲ್ಲ. ಹಕ್ಕನ್ನು ಪಡೆಯುವ ಉದ್ದೇಶಕ್ಕಾಗಿದೆ. ಕುಂಬಾರರ ಧ್ವನಿ ರಾಜ್ಯ ಸರಕಾರಕ್ಕೆ ಮುಟ್ಟುವಂತೆ ಇಂದಿನ ಸಮಾವೇಶ ನಡೆದಿದೆ ಎಂದು ಮಾಣಿಲ ೕಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಬೆಳ್ತಂಗಡಿ ತಾಲೂಕು ಕುಲಾಲ-ಕುಂಬಾರರ ಸಮಾವೇಶ ಮತ್ತು ಹಕ್ಕೋತ್ತಾಯ ಸಮಿತಿ ವತಿಯಿಂದ ನಡೆದ ತಾಲೂಕು ಸಮಾವೇಶ ಮತ್ತು ಹಕ್ಕೋತ್ತಾಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಸಮಾಜದ ಉನ್ನತಿಗಾಗಿ ಹೋರಾಡುವವರಿಗೆ ಪ್ರತಿಯೊಬ್ಬರು ಬಂಗಾವಲಾಗಿ ನಿಲ್ಲಬೇಕು, ಮೂಢನಂಬಿಕೆ ಬಿಟ್ಟು ಮೂಲನಂಬಿಕೆಯನ್ನು ಬೆಳೆಸಬೇಕು. ಜಾತಿ ಸಂಘಟನೆಗಳು ವಿಘಟನೆಯಲ್ಲಿ ಸಮಾಪ್ತಿಯಾಗಬಾರದು. ಸಮಗ್ರ ಹಿಂದೂ ಸಮಾಜಕ್ಕೆ ಆಧಾರ ಸ್ತಂಭವಾಗಿ ಇರಬೇಕು ಎಂದರು.
ಗುರುಪುರ ವಜ್ರದೇಹಿ ಮಠದ ಶ್ರೕ ರಾಜಶೇಖರಾನಂದ ಸ್ವಾಮೀಜಿ ಅವರು, ಇಂದಿನ ಸಮಾವೇಶ ಇದೊಂದು ಚಳವಳಿ. ಎಲ್ಲಿಯವರೆಗೆ ನಮ್ಮ ಹಕ್ಕುಗಳು ನಮಗೆ ಸಿಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲಬಾರದು. ರಾಜಕೀಯ ಅಸ್ತಿತ್ವ ಇಲ್ಲದಿದ್ದರೆ ನಮಗೆ ಯಾವುದೇ ಅನುದಾನವೂ ಸಿಗುವುದಿಲ್ಲ. ನಮ್ಮ ಹಕ್ಕನ್ನು ಪಡೆಯುವವರೆಗೆ ಹೋರಾಟ ಮುಂದುವರಿಸಬೇಕು. ಕುಂಬಾರರು ಹಿಂದೂ ಸಮಾಜದ ಅಂಗವಾಗಿ ಬೆಳೆದು ಬಂದಿದ್ದಾರೆ. ಸಮಷ್ಠಿ ಅಭಿವೃದ್ಧಿ ನಮ್ಮದಾಗಬೇಕು ಎಂದರು.
ಉಸ್ತುವಾರಿ ಸಚಿವ ರಮಾನಾಥ ರೈ ಅವರು, ಸಾಮಾಜಿಕ ನ್ಯಾಯಕ್ಕಾಗಿ ಬೇಡಿಕೆಗಳನ್ನಿಟ್ಟು ಹೋರಾಟ ಮಾಡುವುದು ಸಹಜ. ಹಿಂದುಳಿದ ವರ್ಗದವರು ಮುಂದೆ ಹೋಗಬೇಕಾದರೆ ಹಿಂದಿನ ಇತಿಹಾಸ ತಿಳಿದುಕೊಳ್ಳಬೇಕು ಮತ್ತು ಅದನ್ನು ಮರೆಯಬಾರದು. ಹಿಂದುಳಿದ ಎಲ್ಲಾ ಜಾತಿ ಸಂಘಟನೆಗಳಿಗೆ ರಾಜ್ಯ ಸರಕಾರ ಸೂಕ್ತ ಅನುದಾನ ಕೊಟ್ಟಿದೆ. ಇದರಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಸಮುದಾಯ ಭವನಕ್ಕೆ ಸರಕಾರದಿಂದ ಆರ್ಥಿಕ ಸಹಾಯ ನೀಡುವುದಾಗಿ ಭರವಸೆ ನೀಡಿದರು.
ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು, ಜಾತಿ ವ್ಯವಸ್ಥೆ, ಮೇಲು ಕೀಳು ಎನ್ನುವುದು ಮಾನವ ಹಕ್ಕು ಉಲ್ಲಂಘನೆ ಆಗುತ್ತದೆ. ಪ್ರಜಾಪ್ರಭುತ್ವದಲ್ಲಿ ಯಾರಿಗೂ ಹೆದರಬೇಕಾಗಿಲ್ಲ. ಯಾವುದೇ ಪಕ್ಷ ದವರಾಗಲಿ ಹಿಂದುಳಿದವರ ನೋವನ್ನು ಅರ್ಥ ಮಾಡಿಕೊಂಡವನಿಗೇ ಮತ ನೀಡಿ ಆರಿಸಬೇಕು ಎಂದ ಅವರು, ಕುಲಾಲ ಭವನಕ್ಕೆ ತನ್ನ ಸಾಂಸದರ ನಿಧಿಯಿಂದ ಅನುದಾನ ಒದಗಿಸುವ ಬಗ್ಗೆ ಭರವಸೆ ನೀಡಿದರು. ಶಾಸಕ ಕೆ. ವಸಂತ ಬಂಗೇರ , ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಮಾತನಾಡಿದರು.
ಸಮಾವೇಶ ಮತ್ತು ಹಕ್ಕೋತ್ತಾಯ ಸಮಿತಿ ಅಧ್ಯಕ್ಷ ಹರೀಶ ಕಾರಿಂಜ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ ಕಾರ್ಯಾಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ ಹಕ್ಕೋತ್ತಾಯ ಮಂಡಿಸಿದರು. ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ ಅಧ್ಯಕ್ಷ ಶಿವಕುಮಾರ್ ಚೌಡಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು.
ಶ್ರೀ ಕ್ಷೇತ್ರ ನಡುಬೊಟ್ಟು ಧರ್ಮದರ್ಶಿ ರವಿ ಎನ್., ಮಾಜಿ ಸಚಿವ ಕೆ. ಗಂಗಾಧರ ಗೌಡ, ನಗರ ಪಂಚಾಯಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಕಾಂಗ್ರೇಸ್ ರಾಜ್ಯ ಕಾರ್ಯದರ್ಶಿ ಪಿ. ವಿ. ಮೋಹನ್, ವೈದ್ಯಕೀಯ ಪ್ರಕೋಷ್ಠ ರಾಜ್ಯ ಪ್ರ.ಕಾರ್ಯದರ್ಶಿ ಶ್ರೀನಿವಾಸ ವೇಲು, ಜೆಡಿಎಸ್ ಕಾರ್ಮಿಕ ವಿಭಾಗ ಪ್ರಧಾನ ಕಾರ್ಯದರ್ಶಿ ಹುಚ್ಚೇ ಗೌಡ, ಜಿಲ್ಲಾ ಉಪಾಧ್ಯಕ್ಷ ಅಡ್ಕಾಡಿ ಜಗನ್ನಾಥ ಗೌಡ, ಕುಂಬಾರ ನೌಕರರ ಕ್ಷೇಮಾಭಿವೃದ್ಧಿ ಸಂಘ ರಾಜ್ಯಾಧ್ಯಕ್ಷ ಆರ್. ಶ್ರೀನಿವಾಸ, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಅಧ್ಯಕ್ಷ ಪದ್ಮಮೂಲ್ಯ ಅನಿಲಡೆ, ಕುಲಾಲ ಕುಂಬಾರ ಯುವ ವೇದಿಕೆ ರಾಜ್ಯಾಧ್ಯಕ್ಷ ತೇಜಸ್ವೀರಾಜ್, ದ.ಕ. ಜಿಲ್ಲಾಧ್ಯಕ್ಷ ಜಯಶ್ ಗೋವಿಂದ್, ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕುಲಾಲ್ ನಡೂರು, ತಾಲೂಕು ಅಧ್ಯಕ್ಷ ಲೋಕೇಶ್ ಕುಲಾಲ್, ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲ ಮಾತೃ ಸಂಘ ಅಧ್ಯಕ್ಷ ಸುಜಿರ್ ಕುಡುಪು, ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಬಂಗೇರ, ಪ್ರದೇಶ ಕಾಂಗ್ರೇಸ್ ಸದಸ್ಯ ಆರ್. ಕೆ. ಪೃಥ್ವಿರಾಜ್ ಎಡಪದವು, ನಂದಿನಿ ಮಜ್ಜಿಗೆ ಎಂ. ಡಿ. ಆರ್. ಸ್ವಾಮಿ, ಬಂಟ್ವಾಳ ನಗರ ಸಭೆ ಮಾಜಿ ಅಧ್ಯಕ್ಷೆ ಯಶೋಧ ಕೃಷ್ಣಪ್ಪ ಕುಲಾಲ್, ಕರ್ನಾಟಕ ರಕ್ಷ ಣಾ ವೇದಿಕೆ ದ.ಕ. ಜಿಲ್ಲಾಧ್ಯಕ್ಷ ಅನಿಲ್ ದಾಸ್, ಬೈಂದೂರು ವಲಯ ಅರಣ್ಯಾಧಿಕಾರಿ ಮಂಜಪ್ಪ ಮೂಲ್ಯ, ಕಾರ್ಕಳ ಕೃಷಿ ಸಹಾಯಕ ನಿರ್ದೇಶಕ ಡಾ. ಜಯರಾಜ್ ಪ್ರಕಾಶ್, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯ ಕಾರ್ಯಕ್ರಮ ಐ ಪಾಸ್ ಇಂಡಿಯಾ ವ್ಯವಸ್ಥಾಪಕ ಗೋಪಾಲ್ ಕುಲಾಲ್ ಗೋವಿಂದತೋಟ ಉಪಸ್ಥಿತರಿದ್ದರು.
ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ದೇವಸ್ಥಾನದ ಬಳಿಯಿಂದ ತಾಲೂಕು ಕ್ರೀಡಾಂಗಣದವರೆಗೆ ಬೃಹತ್ ಹಕ್ಕೋತ್ತಾಯ ಜಾಥಾವನ್ನು ಚಲನಚಿತ್ರ ನಟ, ಸ್ಥಾಪಕಾಧ್ಯಕ್ಷ ರು, ಬರ್ಕೆ ಫ್ರೆಂಡ್ಸ್ ಮಂಗಳೂರು ಸ್ಥಾಪಕಾಧ್ಯಕ್ಷ ಯಜ್ಞೇಶ್ ಕುಲಾಲ್ ಉದ್ಘಾಟಿಸಿದರು.
ಸಭಾಕಾರ್ಯಕ್ರಮ ನಿರ್ವಹಣಾ ಸಮಿತಿ ಅಧ್ಯಕ್ಷ ಮೋಹನ ಬಂಗೇರ ಸ್ವಾಗತಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್. ಪದ್ಮ ಕುಮಾರ್ ಪ್ರಸ್ತಾವಿಸಿದರು. ಜಗನ್ನಾಥ್ ವಂದಿಸಿದರು. ನವೀನ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.
—————————– —————————— ————————
ಹಕ್ಕೋತ್ತಾಯಗಳು: ಬೆಳ್ತಂಗಡಿ ತಾಲೂಕು ಕುಲಾಲ/ಕುಂಬಾರರ ಸಮಾವೇಶ ಮತ್ತು ಹಕ್ಕೊತ್ತಾಯ ಸಮಿತಿ ನೇತೃತ್ವದಲ್ಲಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕರೆ, ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ, ರಾಜ್ಯಕುಂಬಾರರ ಮಹಾಸಂಘ, ರಾಜ್ಯಕುಂಬಾರ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ನಡೆದ ಸಮಾವೇಶದಲ್ಲಿ ಏಳು ಅಂಶಗಳ ಹಕ್ಕೊತ್ತಾಯವನ್ನು ಮಂಡಿಸಲಾಯಿತು.
* ಕುಲಾಲ/ಕುಂಬಾರರಿಗೆ ಸಾಮಾಜಿಕ ನ್ಯಾಯದ ನೆಲೆಯಲ್ಲಿರಾಜಕೀಯ ಸ್ಥಾನಮಾನಕೊಡಬೇಕು.
* ಕುಂಭಕಲಾ ಅಭಿವೃದ್ಧಿ ನಿಗಮವನ್ನು ದೇವರಾಜುಅರಸು ನಿಗಮದಿಂದ ಬೇರ್ಪಡಿಸಿ ಪ್ರತ್ಯೇಕ ಕುಂಬಾರರ ಅಭಿವೃದ್ಧಿ ನಿಗಮ ಮಾಡಿ ಕನಿಷ್ಠ ರೂ. 200 ಕೋಟಿಅನುದಾನ ನೀಡಿ ನಿಗಮಕ್ಕೆ ಕುಂಬಾರ ಸಮಾಜದ ಬಾಂಧವರನ್ನು ಅಧ್ಯಕ್ಷ ರನ್ನಾಗಿ ನಿಯುಕ್ತಗೊಳಿಸಬೇಕು.
* ತಾಲೂಕು ಮೂಲ್ಯರಯಾನೆಕುಂಬಾರರ ಸೇವಾ ಸಂಘ ಗುರುವಾಯನಕೆರೆಇದಕ್ಕೆ ಸರಕಾರದ ವತಿಯಿಂದ ನಿವೇಶನ ಮತ್ತು ಸುಸಜ್ಜಿತ ಸಭಾ ಭವನ, ಅನ್ನಛತ್ರವನ್ನುರೂ. 5 ಕೋಟಿ ಅನುದಾನದಲ್ಲಿ ನಿರ್ಮಾಣ ಮಾಡಿ ಕೊಡಬೇಕು.
* ಮಡಕೆ ಮಾಡುವ ಕುಲಾಲ-ಕುಂಬಾರರಿಗೆ ತಾಲೂಕಿನ ವಿವಿಧ ಕಡೆಗಳಲ್ಲಿ ಅತ್ಯಾಧುನಿಕ ಮಾದರಿಯ ಯಂತ್ರೋಪಕರಣ ಹಾಗೂ ಶೆಡ್ ನಿರ್ಮಾಣ ಮಾಡಿಕೊಡಬೇಕು ಮತ್ತು ಅದಕ್ಕೆ ಬೇಕಾದ ಆವೆ ಮಣ್ಣಿನ ನಿವೇಶನ ಗುರುತಿಸಿ ತಾಲೂಕು ಸಂಘಕ್ಕೆ ಹಸ್ತಾಂತರಿಸಬೇಕು.
* ಸಾಮಾಜಿಕ ಮತ್ತು ಶೈಕ್ಷ ಣಿಕ ಹರಿಕಾರ ಸರ್ವಜ್ಞರ ನೆನಪಿಗಾಗಿ ಸರ್ವಜ್ಞ ಅಧ್ಯಯನ ಪೀಠ ಮತ್ತು ಸರ್ವಜ್ಞ ಪ್ರಾಧಿಕಾರವನ್ನು ರಚಿಸಿ ಕುಂಬಾರ ಸಮುದಾಯದ ಸಂಪನ್ಮೂಲ ವ್ಯಕ್ತಿಗಳನ್ನು ಅದರ ಮುಖ್ಯಸ್ಥರನ್ನಾಗಿ ನೇಮಿಸಬೇಕು.
* ಮಡಕೆ ಮಾಡುವ 60 ವರ್ಷ ಮೇಲ್ಪಟ್ಟಕುಂಬಾರ ಸಮುದಾಯದವರಿಗೆ ಸರಕಾರದ ವತಿಯಿಂದ ಪಿಂಚಣಿ ನೀಡಬೇಕು.
* ರಾಜ್ಯದ ಪ್ರತೀ ವಿಧಾನಸಭಾ ಕ್ಷೇತ್ರದ ಕೇಂದ್ರ ಭಾಗದಲ್ಲಿ ತಾಲೂಕು ಸಂಘಗಳಿಗೆ ನಿವೇಶನ ಮತ್ತು ಸುಸಜ್ಜಿತ ಸಭಾಭವನ ಮತ್ತು ಮೂಲ ಸೌಕರ್ಯ ಒದಗಿಸಿಕೊಡಬೇಕು