ಬೆಳ್ತಂಗಡಿ(ಜ.೦೩, ಕುಲಾಲ್ ವರ್ಲ್ಡ್ ನ್ಯೂಸ್): ಫೆ. 4ರಂದು ಬೆಳ್ತಂಗಡಿಯ ಕುಲಾಲ- ಕುಂಬಾರರ ಹಕ್ಕೊತ್ತಾಯ ಸಮಿತಿಯ ವತಿಯಿಂದ ನಡೆಯುತ್ತಿರುವ ಬೃಹತ್ ಕುಲಾಲ- ಕುಂಬಾರರ ಹಕ್ಕೊತ್ತಾಯ ಸಮಾವೇಶದ ಸಿದ್ಧತೆಗಳು ಭರದಿಂದ ಸಾಗಿದ್ದು, ಆಯೋಜಿಸಲಾಗಿರುವ ಸಮಾವೇಶದಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯನ್ನು ಸಂಘಟಕರು ಹೊಂದಿದ್ದಾರೆ.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ರಾಜ್ಯಾದ್ಯಕ್ಷ ಡಾ.ಜಿ. ಪರಮೇಶ್ವರ್, ರಾಜ್ಯ ಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡಿಸ್, ಉಸ್ತುವಾರಿ ಸಚಿವ ರಮಾನಾಥ್ ರೈ, ಸಂಸದ ನಳಿನ್ ಕುಮಾರ್ ಕಟೀಲು, ಬೆಳ್ತಂಗಡಿ ಶಾಸಕ ವಸಂತ್ ಬಂಗೇರ , ಬಿಜೆಪಿ ಕಾರ್ಯದರ್ಶಿ ಸಿ ಟಿ ರವಿ ಮುಂತಾದ ರಾಜಕೀಯ ನೇತಾರರು ಅಲ್ಲದೆ ಕುಂಬಾರ ಸಮುದಾಯದ ಹಿರಿ-ಕಿರಿಯ ಮುಖಂಡರು ಸಮಾವೇಶದಲ್ಲಿ ಭಾಗವಹಿಸಲಿದ್ದು, ಇದಕ್ಕಾಗಿ ಬೆಳ್ತಂಗಡಿ ತಾಲೂಕು ಕ್ರೀಡಾಂಗಣ ಸಿದ್ಧಗೊಂಡಿದೆ.
ಅತೀ ಹೆಚ್ಚು ಸಮಾಜ ಬಾಂಧವರು ಭಾಗವಹಿಸುವ ನಿರೀಕ್ಷೆ ಇರುವುದರಿಂದ ಮೈದಾನದಲ್ಲಿ ಕುಳಿತುಕೊಳ್ಳಲು ಅನುಕೂಲವಾಗುವಂತೆ ಬೃಹತ್ ಪೆಂಡಾಲ್ ಅಳವಡಿಸಲಾಗುತ್ತಿದೆ. ತಾಲೂಕು ಮೈದಾನದಲ್ಲಿ 25 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಸಮಾವೇಶಕ್ಕೆ ಬರುವ ಎಲ್ಲರಿಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರನ್ನು ವಿತರಿಸಲಾಗುತ್ತದೆ. ಸಮಾರಂಭದ ವಿವಿಧ ತಯಾರಿ, ಉಸ್ತುವಾರಿಗಳ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲಾ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯಲು ಶ್ರಮಿಸಲಾಗುತ್ತಿದೆ. ದ. ಕ ಮತ್ತು ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಬರುವ ಸ್ವಜಾತಿ ಬಾಂಧವರಿಗೆ ಸ್ಥಳೀಯ ಕುಲಾಲ ಸಂಘಗಳ ವತಿಯಿಂದ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಸಮಾವೇಶದ ಮಾಹಿತಿ, ಆಮಂತ್ರಣವನ್ನು ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಹೆಚ್ಚು ಜನರಿಗೆ ತಲುಪುವಂತೆ ಪ್ರಚಾರ ಮಾಡಲಾಗಿರುವುದರಿಂದ ನಿರೀಕ್ಷೆಗೂ ಮೀರಿ ಜನ ಭಾಗವಹಿಸುವ ಸಾಧ್ಯತೆ ಇದೆ. ಸಮಾವೇಶಕ್ಕೂ ಮುನ್ನ ಬೆಳ್ತಂಗಡಿ ಅಯ್ಯಪ್ಪ ಮಂದಿರ ಬಳಿಯಿಂದ ತಾಲೂಕು ಕ್ರೀಡಾಂಗಣದ ವರೆಗೆ ಬೃಹತ್ ಹಕ್ಕೊತ್ತಾಯ ಜಾಥಾ ನಡೆಯಲಿದೆ.