(ಕುಲಾಲ್ ವರ್ಲ್ಡ್ ಡಾಟ್ ಕಾಮ್ Jan. 26, 2018)
ಮೊಬೈಲ್ ನಲ್ಲಿ ಸೆಲ್ಫೀ ಪರಿಚಯವಾದ ಮೇಲೆ ಈ ಸೆಲ್ಫೀ ಎನ್ನುವುದು ಹಲವರ ದಿನಚರಿಯ ಭಾಗವಾಗಿತ್ತು. ಸೆಲ್ಫೀ ತಗೋಳ್ಳೋದು ಫೇಸ್ಬುಕ್ಕಲ್ಲಿ, ಟ್ವಿಟ್ಟರಲ್ಲಿ ಪೋಸ್ಟ್ ಮಾಡೋದು. ಸೆಲ್ಫೀ ಪ್ರತಿಯೊಬ್ಬರಿಗೂ ಒಂಥರಾ ಕ್ರೇಜ್ ಆಗಿತ್ತು. ಫೇಸ್ಬುಕ್, ವಾಟ್ಸಪ್ ಕೂಡ ಅದೇ ಥರ ಜಾದೂ ಮಾಡಿತ್ತು. ಅವೆಲ್ಲಾ ಸಾಮಾನ್ಯ ಅಂತನ್ನಿಸಿದ ನಂತರ ಹೊಸದೇನೋ ಜರುಗಬೇಕಲ್ಲ ಅಂತ ಜಗತ್ತು ಕುತೂಹಲದಿಂದ ನೋಡುತ್ತಿರುವ ಹೊತ್ತಿಗೆ ಹೊಸತೊಂದು ಕ್ರೇಜ್ ಶುರುವಾಗಿದ್ದೇ ಡಬ್ ಸ್ಮಾಷ್.
ಡಬ್ ಸ್ಮಾಷ್ ಅನ್ನೋದು ಇತ್ತೀಚೆಗೆ ಟ್ರೆಂಡ್ ಒಂದು ಆಗ್ತಾ ಇದೆ. ಮಾತ್ರವಲ್ಲದೇ ಇದು ಹೆಚ್ಚು ಹೆಚ್ಚು ಪ್ರಚಾರಕ್ಕೆ ಬರುತ್ತಿದೆ. ಫೇಸ್ ಬುಕ್, ಇನ್ಸ್ಟಾಗ್ರಾಮ್ , ಟ್ವಿಟ್ಟರ್ ಎಲ್ಲೆಂದರಲ್ಲಿ ಸಾಮಾಜಿಕ ತಾಣಗಳಲ್ಲಿ ಇದು ಫೇಮಸ್ ಆಗುತ್ತಿದೆ. ಸೋಷಿಯಲ್ ನೆಟ್ವರ್ಕಿಂಗ್ನಲ್ಲಿರುವ ಬಹುತೇಕ ಯಂಗ್ಸ್ಟರ್ಗಳು ತಮ್ಮದೊಂದು ಡಬ್ ಸ್ಮ್ಯಾಶ್ ವೀಡಿಯೋವನ್ನು ಸೋಷಿಯಲ್ ನೆಟ್ವರ್ಕಿಂಗ್ ಸೈಟ್ಗಳಿಗೆ ಅಪ್ಲೋಡ್ ಮಾಡುತ್ತಿದ್ದಾರೆ. ಇದೊಂದು ಆ್ಯಪ್ ಆಗಿದ್ದು, ಇದರ ಮೂಲಕ ಯಾವುದೇ ಸಿನಿಮಾದ ಜನಪ್ರಿಯ ಡೈಲಾಗ್ ತೆಗೆದುಕೊಂಡು ನೀವು ಲಿಪ್ಸಿಂಕ್ ಮಾಡಿ ನಟಿಸಿದರೆ ಸಾಕು, ನಿಮ್ಮ ಮುಖ ಪರದೆಯ ಮೇಲೆ ಬರುತ್ತದೆ. ಇನ್ಯಾರದ್ದೋ ಹಿನ್ನೆಲೆ ಧ್ವನಿ ಕೇಳಿಸುತ್ತದೆ. ಫನ್ನಿ ಅಂದೆನಿಸುವ ಈ ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡು ಯುವ ಜನತೆ ಖುಷಿ ಪಡುತ್ತಿದೆ. ಈ ಡಬ್ ಸ್ಮಾಷ್ ಮೂಲಕವೇ ಹಲವರು ಪ್ರಸಿದ್ಧರಾಗಿದ್ದಾರೆ. ನಿವೇದಿತಾ ಗೌಡ ಎಂಬ ಹುಡುಗಿ ಡಬ್ ಸ್ಮ್ಯಾಷ್ ನಲ್ಲಿ ಮಿಂಚಿಯೇ `ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಇಂತಹ ಡಬ್ ಸ್ಮ್ಯಾಷ್ ನಲ್ಲಿ ಇತ್ತೀಚೆಗೆ ಸದ್ದು ಮಾಡುತ್ತಿರುವವರಲ್ಲಿ ಕರಾವಳಿಯ ಹುಡುಗಿ ಶ್ರಾವ್ಯಾ .ಸಿ .ಕುಲಾಲ್ ಕೂಡಾ ಒಬ್ಬರು.
ಶ್ರಾವ್ಯಾ ಅವರು ಹೆಚ್ಚಾಗಿ ತುಳು ಸಿನಿಮಾದ ಸನ್ನಿವೇಶಗಳನ್ನು ಆಯ್ದುಕೊಂಡು ಡಬ್ಸ್ಮ್ಯಾಶ್ ಮಾಡುವ ಮೂಲಕ ಪ್ರಸಿದ್ಧಿಗೆ ಬಂದಿದ್ದು, ಸಾಮಾಜಿಕ ತಾಣಗಳಲ್ಲಿ ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿ ಖುಷಿಪಟ್ಟಿದ್ದಾರೆ. ಡಬ್ ಸ್ಮಾಷ್ ನಲ್ಲಿ ಇವರ ಪರ್ಫೆಕ್ಟ್ ಲಿಪ್ ಮೂವ್ ಮೆಂಟ್ ಹಾಗೂ ಅದ್ಭುತ ಅಭಿನಯ ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡುವಂತೆ ಆಕರ್ಷಿಸುತ್ತದೆ. ಹೀಗಾಗಿಯೇ ನೂರಾರು ಮಂದಿ ಇವರ ಡಬ್ಸ್ಮ್ಯಾಶ್ ವೀಡಿಯೋವನ್ನು ಗೆಳೆಯರ ಜೊತೆ ಹಂಚಿ ಖುಷಿಪಡುತ್ತಿದ್ದಾರೆ.
ಬಹುಮುಖ ಪ್ರತಿಭೆಯ ಶ್ರಾವ್ಯಾ
ಕೇವಲ ಮನರಂಜನೆಗಾಗಿ ಡಬ್ ಸ್ಮಾಷ್ ಮಾಡಿ ಖುಷಿ ಪಡುವ ಶ್ರಾವ್ಯಾ ಕುಲಾಲ್ ಒಬ್ಬ ಬಹುಮುಖ ಪ್ರತಿಭೆ. ಮಂಗಳೂರಿನ ಕೊಲ್ಯ ಕನೀರ್ ತೋಟದ ದಿ. ಚಂದ್ರಹಾಸ ಕುಲಾಲ್ ಹಾಗೂ ಸಂಧ್ಯಾ ಅವರ ಪುತ್ರಿಯಾದ ಈಕೆ ಒಂದಲ್ಲ, ಎರಡಲ್ಲ ಹಲವಾರು ಪ್ರತಿಭೆಗಳ ಆಗರವಾಗಿದ್ದಾರೆ. ಭರತನಾಟ್ಯ, ಹಾಡುಗಾರಿಕೆ, ಆಟೋಟ , ಅಭಿನಯ.. ಹೀಗೆ ಎಲ್ಲದರಲ್ಲಿಯೂ ಈಕೆ ಎತ್ತಿದ ಕೈ. ಇವೆಲ್ಲದರಲ್ಲಿ ಶ್ರಾವ್ಯಾಗೆ ಬಾಲ್ಯದಿಂದಲೇ ವಿಶೇಷ ಆಸಕ್ತಿ. ಕೊಲ್ಯದ ಸಂತ ಜಾಯ್ಲಾಂಡ್ ಶಾಲೆಯಲ್ಲಿ ಕಲಿಯುತ್ತಿದಾಗಲೇ ಡಾನ್ಸ್, ಹಾಡು, ನಾಟಕಗಳಲ್ಲಿ ತೊಡಗಿಸಿಕೊಂಡಿದ್ದ ಇವರು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಲ್ಲದೆ ಮೋಸ್ಟ್ ಟಾಲೆಂಟೆಡ್ ಸ್ಟೂಡೆಂಟ್ ಎಂಬ ಪ್ರಶಸ್ತಿ ಗಳಿಸಿದ್ದಾರೆ. ಈಕೆಯ ಮಾವ ಎಚ್ ಕೆ ನಯನಾಡು (ಹರೀಶ್ ಕುಲಾಲ್ ನಯನಾಡು) ತುಳು ರಂಗಭೂಮಿಯ ಪ್ರಸಿದ್ಧ ಕಲಾವಿದ. ಚಿಕ್ಕಂದಿನಿಂದಲೂ ಮಾವನ ನಟನೆಯನ್ನು ನೋಡುತ್ತಾ ಬೆಳೆದವರು ಶ್ರಾವ್ಯಾ. ಹೀಗಾಗಿ ಈ ಕ್ಷೇತ್ರದಲ್ಲೂ ವಿಶೇಷ ಆಸಕ್ತಿ ಹೊಂದಿದ್ದಾರೆ. ಹಲವು ವೇದಿಕೆಗಳಲ್ಲಿ ತನ್ನ ಪ್ರತಿಭೆಯನ್ನು ತೋರ್ಪಡಿಸಿದ ಶ್ರಾವ್ಯಾ ಪ್ರಶಂಶನೀಯ ಕಾರ್ಯಕ್ರಮಗಳನ್ನಿತ್ತು ಕಲಾರಸಿಕರ ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿದ್ದಾರೆ. ಇದಕ್ಕೆ ಈಕೆಗೆ ಸಿಕ್ಕ ಪ್ರಶಸ್ತಿ ಪುರಸ್ಕಾರಗಳೇ ಸಾಕ್ಷಿ.
ಪ್ರಸ್ತುತ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಓದುತ್ತಿರುವ ಶ್ರಾವ್ಯಾ, ನಾಟ್ಯ ಗುರು ಸುರೇಶ ಅತ್ತಾವರ ಅವರ ಬಳಿ ಭರತನಾಟ್ಯ ಅಭ್ಯಸಿಸಿ, ಜೂನಿಯರ್-ಸೀನಿಯರ್ ಪರೀಕ್ಷೆ ತೇರ್ಗಡೆಯಾಗಿದ್ದು, ಈಗ ಭರತನಾಟ್ಯ ವಿದ್ವತ್ ಕಲಿಕೆ ತಯಾರಿಯಲ್ಲಿ ತೊಡಗಿದ್ದಾರೆ.
ಭರತನಾಟ್ಯವಲ್ಲದೆ ಫಿಲಂ ಡಾನ್ಸ್ ನಲ್ಲೂ ಮೋಡಿ ಮಾಡುವ ಶ್ರಾವ್ಯಾ ಮಂಗಳೂರು ಕಂಕನಾಡಿಯ ಶೋ ಟೋಪ್ಪರ್ಸ್ ಡಾನ್ಸ್ ಕ್ರಿವ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ವೆಸ್ಟರ್ನ್ ಡಾನ್ಸ್ ಕಲಿಕೆಯನ್ನು ಮುಂದುವರಿಸುತ್ತಾ ಮುಂದೆ ಎಲ್ಲರೂ ಗುರುತಿಸಬಲ್ಲ ಡಾನ್ಸರ್ ಆಗಬೇಕು ಎಂಬ ಕನಸು ಹೊಂದಿದ್ದಾರೆ. ಇಂತಹ ಕನಸು ಕಂಗಳ ಉದಯೋನ್ಮುಖ ಪ್ರತಿಭೆ ಎಲ್ಲಾ ಕ್ಷೇತ್ರಗಳಲ್ಲಿ ಮಿಂಚಿ ಜನಮನ್ನಣೆ ಗಳಿಸಬೇಕಾದರೆ ಎಲ್ಲರ ಬೆಂಬಲ ಅಗತ್ಯ. ಇಂಥ ಬಹುಮುಖ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಅಲ್ಲವೇ ?
- ದಿನೇಶ್ ಇರ್ವತ್ತೂರು






