ಮಂಗಳೂರು(ಜ.೧೮, ಕುಲಾಲ್ ವರ್ಲ್ಡ್ ನ್ಯೂಸ್): ಕುಂಬಾರಿಕೆಯನ್ನು ಕೌಶಲ್ಯ ಯೋಜನೆಯಡಿ ಸೇರಿಸಬೇಕೆಂಬ ಮನವಿಯನ್ನು ಕೇಂದ್ರ ಕೌಶಲ್ಯ ಸಚಿವರಾದ ಅನಂತ್ ಕುಮಾರ್ ಹೆಗ್ಡೆ ಅವರಿಗೆ ನೀಡಲಾಯಿತು.
ಹೆಗ್ಡೆ ಅವರನ್ನು ಭೇಟಿ ಮಾಡಿದ ಬಿಜೆಪಿ ನಾಯಕ, ರಾಜ್ಯ ಅರೋಗ್ಯ ಪ್ರಕೋಷ್ಠದ ಸಹ ಸಂಚಾಲಕರಾದ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಕುಂಬಾರ ಸಮುದಾಯವನ್ನು ಹಾಗು ಆ ಸಮುದಾಯದ ಮೂಲ ವೃತ್ತಿಯಾದ ಕುಂಬಾರಿಕೆಯನ್ನು ಕೌಶಲ್ಯ ಯೋಜನೆಯಡಿ ಸೇರಿಸಿ ನಶಿಸುತ್ತಿರುವ ಅರೋಗ್ಯ-ಪರಿಸರ ಸ್ನೇಹಿ ಕುಂಬಾರಿಕೆಯನ್ನ ಪ್ರೋತ್ಸಹಿಸಬೇಕೆಂದು ಕರ್ನಾಟಕದ 20 ಲಕ್ಷ ಕುಂಬಾರರ ಪರವಾಗಿ ಹಾಗು ರಾಷ್ಟ್ರದ ಕೋಟಿಗಟ್ಟಲೆ ಪ್ರಜಾಪತಿ ಕುಂಭಕಾರ ಸಮುದಾಯದ ಪರವಾಗಿ ವಿನಂತಿಸಿದರು.
ಈ ವೇಳೆ ಮಾತನಾಡಿದ ಸಚಿವರು ಈಗಾಗಲೇ ಈ ಬಗ್ಗೆ ಹಲವು ಮನವಿ ಬಂದಿದ್ದು, ಕುಂಬಾರಿಕೆಯನ್ನು ಕೌಶಲ್ಯ ಯೋಜನೆಯಡಿ ಸೇರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯ ಸರಕಾರದ ಪಟ್ಟಿಗೆ ಸೇರಿಸುವ ಕುರಿತು ರಾಜ್ಯ ಸರಕಾರಕ್ಕೆ ಸೂಚನೆ ಕೊಡಲಾಗುವುದು. ಅಲ್ಲದೇ ರಾಜ್ಯ ಸರಕಾರ ಕೂಡಾ ಈ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.
ಮಂಗಳೂರಿನ ಸಂಸದರಾದ ನಳಿನ್ ಕುಮಾರ ಕಟೀಲ್, ಮಂಗಳೂರು ದಕ್ಷಿಣ ಹಾಗು ಉತ್ತರದ ಬಿಜೆಪಿ ಅಧ್ಯಕ್ಷರುಗಳಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ಮುಂತಾದವರು ಈ ಸಂದರ್ಭ ಜೊತೆಗಿದ್ದರು.