ಕಾರ್ಕಳ(ಜ.೧೨, ಕುಲಾಲ್ ವರ್ಲ್ಡ್ ನ್ಯೂಸ್): ಹೊಸದಾಗಿ ಪತ್ರಿಕಾರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಕುಲಾಲ ಸಮುದಾಯದ ಮಹಿಳೆಯೊಬ್ಬರಿಗೆ ಕಾರ್ಕಳದ ಕೆಲ ಸ್ಥಾಪಿತ ಹಿತಾಸಕ್ತಿಗಳು ನಿರಂತರ ಕಿರುಕುಳ ನೀಡುತ್ತಾ ತೊಡರುಗಾಲು ಹಾಕುತ್ತಿರುವ ಬಗ್ಗೆ ಕಾರ್ಕಳ ಕುಲಾಲ ಸುಧಾರಕ ಸಂಘಕ್ಕೆ ದೂರು ನೀಡಿದ್ದಾರೆ.
ಮಿಯ್ಯಾರಿನ ವಸಂತ ಕುಮಾರ್ ಅವರ ಪತ್ನಿ ರೇಖಾ ಕುಲಾಲ್ ಅವರೇ ದೂರುದಾರರು. ಇವರು ಇತ್ತೀಚೆಗಷ್ಟೇ ಹೊಸ ಪತ್ರಿಕೆಯನ್ನು ಆರಂಭಿಸುವ ಸಲುವಾಗಿ ಪತ್ರಿಕಾ ನಿಯಮದಂತೆ ಜಿಲ್ಲಾಧಿಕಾರಿ ಮೂಲಕ ದೆಹಲಿಯ ಆರ್ ಎನ್ ಐಗೆ ಅರ್ಜಿ ಸಲ್ಲಿಸಿದ್ದರು. ಆರ್ ಎನ್ ಐ `ಬಿಂಬಧ್ವನಿ’ ಎಂಬ ಪತ್ರಿಕಾಶಿರೋನಾಮೆ ಹೊಂದಲು ಅನುಮತಿ ನೀಡಿದ್ದು, ಅದರಂತೆ ಪತ್ರಿಕೆ ಆರಂಭಿಸಿದ್ದರು. ಆದರೆ ಮಹಿಳೆಯೊಬ್ಬರು ಪತ್ರಿಕೆ ಆರಂಭಿಸುವುದನ್ನು ಸಹಿಸದ ಕಾರ್ಕಳದ ಕಾಂಗ್ರೆಸ್ ಧುರೀಣರೊಬ್ಬರು ತಮ್ಮ ಕೆಲವು ಬಂಟರ ಮೂಲಕ ನಿರಂತರ ಕಿರುಕುಳ ನೀಡುತ್ತಿರುವುದಲ್ಲದೆ, ಪತ್ರಿಕಾರಂಗದಲ್ಲಿ ಕಳೆದ ೨೫ ವರ್ಷಗಳಿಂದ ತೊಡಗಿಕೊಂಡಿರುವ ರೇಖಾ ಅವರ ಪತಿ ವಸಂತ್ ಅವರ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸಿ, ತೇಜೋವಧೆ ನಡೆಸುತ್ತಿದ್ದಾರೆ. ಈ ಬಗ್ಗೆ ವಸಂತ್ ಅವರು ಇಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಿಂದ ಮುಚ್ಚಳಿಕೆ ಬರೆಸಿಕೊಂಡಿದ್ದರು. ಆ ಬಳಿಕವೂ ಇವರ ಕಿರುಕುಳ ನಿರಂತರವಾಗಿ ಮುಂದುವರಿಯುತ್ತಿದೆ. ಈ ಬಗ್ಗೆ ರಾಜ್ಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಲಾಗುತ್ತಿದೆ ಎಂದು ರೇಖಾ ಅವರು ತಿಳಿಸಿದ್ದಾರೆ.
ತಾನು ಪತ್ರಿಕೆಯ ಶಿರೋನಾಮೆಯನ್ನು ಎಲ್ಲಾ ಪ್ರಕ್ರಿಯೆ ಮೂಲಕ ಕಾನೂನು ಸಮ್ಮತವಾಗಿ ಪಡೆದಿದ್ದರೂ ಆ ಶಿರೋನಾಮೆ ತಮ್ಮ ಮಾಲೀಕತ್ವದ ಪತ್ರಿಕೆಯ ಶಿರೋನಾಮೆಯನ್ನು ಹೋಲುತ್ತದೆ ಎಂದೆಲ್ಲಾ ತರಕಾರು ಎಬ್ಬಿಸಿ ತಮ್ಮ ಹಣದ ಪ್ರಭಾವದಿಂದ ರೇಖಾರವರ ಪತ್ರಿಕಾ ಶಿರೋನಾಮೆಯನ್ನು ರದ್ದುಪಡಿಸುವ ಷಡ್ಯಂತ್ರ ರೂಪಿಸಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿಯೇ ಎಲ್ಲಾ ಪ್ರಕ್ರಿಯೆಗಳು ನಡೆದಿದ್ದರೂ ಕೂಡ ಸತತ ಎಂಟು ಹತ್ತು ತಿಂಗಳಿನಿಂದ ಪತ್ರಿಕಾ ಶಿರೋನಾಮೆ ಸಿಗದಂತೆ ಯಕಃಶ್ಚಿತ್ ಒಬ್ಬ ಮಹಿಳೆಯ ಎದುರು ತೊಡೆ ತಟ್ಟಿ ಯುದ್ಧಕ್ಕೆ ನಿಂತ ಉದ್ಯಮಿ/ಕಾಂಗ್ರೆಸ್ ನಾಯಕರು ತಮ್ಮ ಶತಾಯ ಗತಾಯ ಪ್ರಯತ್ನದ ನಡುವೆಯೂ ಸತ್ಯಕ್ಕೆ ಜಯ ಸಿಕ್ಕಾಗ ಹತಾಶ ಮನೋಭಾವದಿಂದ ತಮ್ಮ ಮಾಲೀಕತ್ವದ ಪತ್ರಿಕೆಯಲ್ಲಿ ರೇಖಾ ದಂಪತಿಗಳ ವಿರುದ್ಧ ಕನಿಷ್ಠ ಪದ ಪ್ರಯೋಗಿಸಿ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನವನ್ನು ಮಾಡುತಿದ್ದಾರೆ ಎಂದು ದೂರಿರುವ ರೇಖಾ ಅವರು, ಮುನಿಯಾಲಿನ ಉದ್ಯಮಿ ನಡೆಸಿದ ರಸ್ತೆ ಕಾಮಗಾರಿಯಲ್ಲಿದ್ದ ಲೋಪ ದೋಷಗಳ ಬಗ್ಗೆ ತಮ್ಮ ಪತ್ರಿಕೆಯಲ್ಲಿ ವರದಿ ಮಾಡಿದ್ದರಿಂದ ಸೇಡು ತೀರಿಸಲು ಇಂಥ ನೀಚ ಕೃತ್ಯಕ್ಕೆ ಇಳಿದಿದ್ದಾರೆ. ಇವರ ಕಿರುಕುಳದಿಂದ ಬೇಸತ್ತು ಕುಲಾಲ ಸಂಘಕ್ಕೆ ದೂರು ನೀಡುತ್ತಿದ್ದು, ಕಾನೂನು ಸಮ್ಮತವಾಗಿ ಪತ್ರಿಕೆ ನಡೆಸಲು ತನಗೆ ನೈತಿಕ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದಾರೆ.
ಇವರ ದೂರಿನ ಬಗ್ಗೆ ಜ.14ರಂದು ಸಭೆ ನಡೆಸಿ, ಮುಂದಿನ ತೀರ್ಮಾನ ಕೈಕೊಳ್ಳಲಾಗುವುದು ಎಂದು ಕುಲಾಲ ಸಂಘದ ಪ್ರಮುಖರು ತಿಳಿಸಿದ್ದಾರೆ.