ಮಂಗಳೂರು(ಜ.೦೮, ಕುಲಾಲ್ ವರ್ಲ್ಡ್ ನ್ಯೂಸ್) : ಹತ್ಯೆ, ಕೊಲೆ ಯತ್ನ ಪ್ರಕರಣಗಳ ಮಧ್ಯೆಯೂ ಮಾನವೀಯತೆಯ ತೋರಿಸುತ್ತಿರುವ ಘಟನೆಗಳೂ ನಿರಂತರವಾಗಿ ನಡೆಯುತ್ತಿವೆ. ಜಾತಿ, ಮತದ ಭೇದವನ್ನು ಬದಿಗಿಟ್ಟು ಮಾನವೀಯತೆಯ ಆಧಾರದಲ್ಲಿ ಸಹಾಯ ಹಸ್ತ ಚಾಚಿದ ಅನೇಕ ಉದಾಹರಣೆಗಳು ಇದೀಗ ಚರ್ಚೆಯ ವಿಷಯವಾಗಿವೆ.
ದೀಪಕ್ ರಾವ್ ಕೊಲೆ, ಬಶೀರ್ ಕೊಲೆಯ ಯತ್ನ ಪ್ರಕರಣಗಳಲ್ಲಿ ಮಾನವೀಯತೆಯ ದರ್ಶನವಾಗಿದೆ. ದೀಪಕ್ ರಾವ್ ಪ್ರಕರಣದಲ್ಲಿ ಮಜೀದ್ ಅವರು ನೆರವಿಗೆ ಧಾವಿಸಿದ್ದರೆ, ಬಶೀರ್ ಅವರ ಪ್ರಕರಣದಲ್ಲಿ ಶೇಖರ್ ಕುಲಾಲ್ ಮತ್ತು ರೋಹಿತ್ ನೆರವಿನ ಹಸ್ತ ಚಾಚಿದ್ದಾರೆ.
ದೀಪಕ್ ರಾವ್ ಹತ್ಯೆ ನಡೆದ ಬುಧವಾರ ರಾತ್ರಿ ಕೊಟ್ಟಾರ ಚೌಕಿ ಬಳಿ ಹಲ್ಲೆಗೆ ಒಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಶೀರ್ ಅವರನ್ನು ರಕ್ಷಿಸುವ ಮೂಲಕ ಶೇಖರ್ ಕುಲಾಲ್ ಮತ್ತು ರೋಹಿತ್ ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ. ಇಬ್ಬರೂ ಆಂಬುಲೆನ್ಸ್ ಚಾಲಕರು. ರಾತ್ರಿ ಕೊಟ್ಟಾರ ಚೌಕಿ ಮಾರ್ಗವಾಗಿ ಹೋಗುತ್ತಿದ್ದಾಗ, ಬಶೀರ್ ಅವರು ತೀವ್ರ ಗಾಯಗೊಂಡಿದ್ದರು. ಹತ್ತಿರ ಹೋಗಿ ನೋಡಿದಾಗ ತೀವ್ರ ರಕ್ತಸ್ರಾವ ಆಗುತ್ತಿತ್ತು. ಕೂಡಲೇ ಅವರನ್ನು ಸಮೀಪದ ಎ.ಜೆ. ಆಸ್ಪತ್ರೆಗೆ ದಾಖಲಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಶೇಖರ್ ಕುಲಾಲ್ , ‘ಮನುಷ್ಯನೊಬ್ಬನ ಜೀವ ರಕ್ಷಿಸಲು ಯತ್ನಿಸಿದ ಸಂತೃಪ್ತಿ ನಮಗಿದೆ. ಬಶೀರ್ ಅವರ ಮನೆಯವರೂ ನಮಗೆ ಧನ್ಯವಾದ ತಿಳಿಸಿದ್ದಾರೆ. ಬೆಳಿಗ್ಗೆ ನಾನೂ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ. ಅವರು ಸಾವನ್ನಪ್ಪಬಹುದು ಎಂದು ಗ್ರಹಿಸಿರಲಿಲ್ಲ ಎಂದು ತಿಳಿಸಿದರು.
‘ಅಂತಹ ಸಮಯದಲ್ಲಿ ಯಾರೂ, ಏನಾಗಿದೆ ಎಂದು ಯೋಚನೆ ಮಾಡುತ್ತ ಕುಳಿತುಕೊಳ್ಳುವುದಿಲ್ಲ. ಇದಕ್ಕೂ ಮೊದಲು ಅನೇಕ ಘಟನೆಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದೇನೆ. ಬುಧವಾರ ರಾತ್ರಿ 10 ಗಂಟೆಯ ಸುಮಾರಿಗೆ ಬಶೀರ್ ಅವರು ರಸ್ತೆಯಲ್ಲಿ ನರಳಾಡುತ್ತಿದ್ದರು. ನನ್ನ ಜತೆಗಿದ್ದ ರೋಹಿತ್ ಜತೆಗೆ ಸೇರಿ, ಆಸ್ಪತ್ರೆಗೆ ಸೇರಿಸಿದೆವು. ಅವರು ಚೇತರಿಸಿಕೊಳ್ಳುವರೆಂಬ ನಂಬಿಕೆ ಇತ್ತು. ನಮ್ಮ ನಂಬಿಕೆ ಹುಸಿಯಾಗಿದ್ದರೂ ಜೀವ ಉಳಿಸಲು ಯತ್ನಿಸಿದ ತೃಪ್ತಿ ಇದೆ ’ ಎಂದು ಹೇಳುವಾಗ ಅವರಲ್ಲಿ ಮಾನವೀಯತೆ ಎದ್ದು ಕಾಣುತ್ತಿತ್ತು.