‘ಕುಂಬಾರಿಕೆ ನನಗೆ ವೃತ್ತಿಯಷ್ಟೇ ಅಲ್ಲ: ನನ್ನ ಬದುಕಿನ ಸರ್ವಸ್ವ’ : ಹವರಾಲು ಪಂಜು ಕುಲಾಲ್
ಕುಲಾಲ್ ವರ್ಲ್ಡ್ ಡಾಟ್ ಕಾಮ್ (Dec. 26, 2017)
ಉಡುಪಿ: ಪ್ರಸ್ತುತ ಕುಂಬಾರಿಕೆ ನಶಿಸುತ್ತಿರುವ ಜಾತಿ ಆಧರಿತ ಮುಖ್ಯ ಉದ್ಯೋಗ. ಅಲ್ಯೂಮೀನಿಯಂ, ಸ್ಟೀಲ್ ಪಾತ್ರೆಗಳ ಭರಾಟೆಯ ಈ ದಿನಮಾನದಲ್ಲಿ ಕುಂಬಾರರ ಮಡಿಕೆ-ಕುಡಿಕೆಗಳು ಮೌಲ್ಯ ಕಳೆದುಕೊಳ್ಳುತ್ತಿರುವುದು ನಿಜ. ಬೇಡಿಕೆ ಕುಸಿತ, ಕಚ್ಛಾ ವಸ್ತುಗಳ ಕೊರತೆ, ಕಾರ್ಮಿಕರ ಅಭಾವ ಇನ್ನಿತರ ಹಲವು ಸಮಸ್ಯೆಗಳು ಕುಂಬಾರಿಕೆ ನಶಿಸುತ್ತಿರುವುದಕ್ಕೆ ಮೂಲ ಕಾರಣ. ಆದರೆ ಈ ಎಲ್ಲ ಹೊಡೆತಗಳನ್ನು ಎದುರಿಸಿಯೂ ಹುಟ್ಟಿನಿಂದ ಕಲಿತ ಕುಂಬಾರಿಕೆ ಕಾಯಕವನ್ನು ಬಿಡದೇ ಅದರಲ್ಲೆ ಬದುಕು ಸಾಗಿಸುತ್ತಿರುವ ಕೆಲವು ಅಪರೂಪದ ಕುಂಬಾರರು ನಮ್ಮ ನಡುವೆ ಇನ್ನೂ ಇದ್ದಾರೆ,. ಅಂತಹವರ ಸಾಲಿಗೆ ಸೇರುವ ಕುಂಬಾರಿಕೆಯನ್ನು ಬರೀ ವೃತ್ತಿಯನ್ನಾಗಿ ಕಾಣದೇ ‘ದೈವಿ ಕೆಲಸ ‘ಎಂಬ ಭಾವದೊಂದಿಗೆ ಆರಾಧಿಸಿಕೊಂಡು ಬದುಕುತ್ತಿರುವ ಹಿರಿಯ ಜೀವಿಯೇ ಉಡುಪಿ ತಾಲೂಕಿನ ಕಾವಡಿ ಗ್ರಾಮದ ಹವರಾಲು ಪರಿಸರದ ಪಂಜು ಕುಲಾಲ್ ಅವರು.
ಈ ಅಜ್ಜನಿಗೆ ವರ್ಷ ಎಂಬತೈದರ ಮೇಲಾಗಿದೆ. ಅವರು ಕುಂಬಾರಿಕೆ ವೃತ್ತಿಗಿಳಿದು ಬರೋಬ್ಬರಿ ಎಪ್ಪತ್ತು ವರ್ಷ ಸಂದಿದೆ. ಹಲವು ಅಡೆತಡೆ, ಸಾಲ-ಸೋಲಗಳ ಮಧ್ಯೆಯೂ ತಾನು ಹುಟ್ಟಿನಿಂದ ಕಲಿತ ಕುಂಬಾರಿಕೆ ವೃತ್ತಿಯನ್ನು ಅವರು ಇನ್ನೂ ಬಿಟ್ಟಿಲ್ಲ. ಇವತ್ತಿಗೂ ತಾನಾಯ್ತು ತನ್ನ ಕೆಲಸವಾಯ್ತು ಎಂಬಂತೆ ಮುಗ್ದವಾಗಿ ಬದುಕುವ, ಸಣ್ಣ ಪೋಟೋಗೆ ಪೋಸು ನೀಡುವುದಕ್ಕೂ ನಾಚುವ, ಯಾವುದೇ ಪ್ರಚಾರದ ಹಮ್ಮು-ಬಿಮ್ಮುಗಳಿಲ್ಲದ ಸೀದಾ ಸಾಧಾರಣ ಬದುಕಿನ ಪ್ರೇಮಕ್ಕೆ, ಇವರ ಪ್ರಾಮಾಣಿಕ ವೃತ್ತಿ ನಿಷ್ಟೆಗೆ ಎಂತಹವರು ತಲೆಬಾಗಲೇಬೇಕು. ಕಾಯಕವೇ ಕೈಲಾಸ ಎನ್ನುತ್ತಾ ತನ್ನ ಕುಂಬಾರಿಕೆ ವೃತ್ತಿಯನ್ನು ಉತ್ಕಟವಾಗಿ ಪ್ರೀತಿಸುತ್ತಾ ದಿನಪೂರ್ತಿ ಮಣ್ಣನ್ನು ತುಳಿಯುತ್ತಾ, ಮುದ್ದೆ ಮಾಡಿ ಕಲಸುತ್ತಾ, ರಾಟೆಗೆ ಹೊಯ್ದು ಮಡಿಕೆ ಮಾಡುತ್ತಾ ಮಣ್ಣಿನೊಂದಿಗೆ ಬದುಕುವ ನಿಜವಾದ ಮಣ್ಣಿನ ಮಗನೇ ಹವರಾಲು ಪಂಜು ಕುಲಾಲ್ ಅವರು.
ಪಂಜು ಕುಲಾಲ್ ಹುಟ್ಟುವಾಗ ದೇಶಕ್ಕಿನ್ನೂ ಸ್ವಾತಂತ್ರ್ಯವೇ ಬಂದಿರಲಿಲ್ಲ. ಕುಂದಾಪುರ ತಾಲೂಕಿನಲ್ಲಿ ಕುಲಾಲ ಸಮುದಾಯದ ಹೆಬ್ಬಾಗಿಲು ಎಂದೇ ಕರೆಸಿಕೊಳ್ಳುವ ವಕ್ವಾಡಿ ಪರಿಸರದಲ್ಲಿ ಹುಲ್ಲಿನ ಮನೆಯಲ್ಲಿ ಶೀನ ಹಾಂಡ ಮತ್ತು ಸಿದ್ದು ಕುಲಾಲ್ ದಂಪತಿಗಳ ಐದು ಮಕ್ಕಳಲ್ಲಿ ಕಿರಿಯ ಪುತ್ರನಾಗಿ ಇವರು ಜನಿಸಿದರು. ಕುಟುಂಬದ ಮೂಲ ಉದ್ಯೋಗವೇ ಕುಂಬಾರಿಕೆ ಆಗಿತ್ತಾದ್ದರಿಂದ ಹತ್ತರ ಪ್ರಾಯದಲ್ಲೆ ಕುಂಬಾರಿಕೆಯನ್ನು ಅಪ್ಪಯ್ಯನಿಂದ ಕಲಿತು ಬದುಕಿನ ವೃತ್ತಿಯನ್ನಾಗಿ ಮಾಡಿಕೊಂಡವರು. ಇದ್ದ ಅಲ್ಪ-ಸ್ವಲ್ಪ ಕೃಷಿ ಭೂಮಿಯೂ ಇವರ ಬದುಕಿಗೆ ಆಸರೆಯಾಗಿ ನಿಂತದ್ದು ಸತ್ಯ.
ಕುಂಬಾರಿಕೆ ಕಾಯಕಕ್ಕೆ ಪತ್ನಿಯ ಸಹಕಾರ ಅಮೋಘ..!
ಪಂಜು ಕುಲಾಲ್ ಎಂದೂ ಶಾಲೆಯ ಮುಖವನ್ನು ಕಂಡವರೇ ಅಲ್ಲ. ಇಪ್ಪತ್ತನೆಯ ವಯಸ್ಸಿನಲ್ಲಿ ಹವರಾಲು ಪರಿಸರದ ಮಡಿಕೆ ಮಾಡುವ ಕುಟುಂಬದ ಹೆಣ್ಣು ಮಗಳು ಸೋಮು ಅವರನ್ನು ಕೈಹಿಡಿದು ಸಂಸಾರದ ನೊಗವನ್ನು ಹೆಗಲಿಗೆ ಏರಿಸಿಕೊಂಡವರು. ಹವರಾಲಿನ ಹೆಂಡತಿ ಮನೆಯಲ್ಲೇ ವಾಸ್ತವ್ಯ ಮಾಡಿಕೊಂಡು ಅಲ್ಲಿಂದಲೇ ಕುಂಬಾರಿಕೆ ಕಾಯಕಕ್ಕೆ ಇಳಿದ ಪಂಜು ಕುಲಾಲ್ ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿದವರು ಸಹದರ್ಮಿಣಿ ಸೋಮು ಅವರು.
ಕುಂಬಾರಿಕೆಯ ಕಚ್ಚಾ ವಸ್ತುವಾದ ಜೇಡಿಮಣ್ಣಿನಲ್ಲಿರುವ ಕಲ್ಲು-ಕಸಕಡ್ಡಿಯನ್ನು ತೆಗೆದು ನೀರನ್ನು ಬೆರೆಸಿ ಮಣ್ಣನ್ನು ಹದಗೊಳಿಸುವ ಕೆಲಸ ಸೋಮು ಅವರದ್ದು. ನಂತರ ಸಿದ್ಧವಾದ ಜೇಡಿ ಮಣ್ಣನ್ನು ರಾಟೆ/ಸಗ್ರಿಯಲ್ಲಿಟ್ಟು ಮಡಿಕೆ-ಕುಡಿಕೆಗಳನ್ನು ಸೃಷ್ಟಿಸುವ ಕಾಯಕ ಪಂಜು ಕುಲಾಲ್ ಅವರದ್ದು. ರಾಟೆಯನ್ನು ತಿರುಗಿಸುವುದು, ಮಡಿಕೆಯನ್ನು ಒಣಗಿಸುವುದು, ಒಪ್ಪ ಓರಣವಾಗಿ ಜೋಡಿಸಿಡುವುದು ಎಲ್ಲ ಕೆಲಸವೂ ಪತ್ನಿ ಸೋಮು ಅವರದ್ದು. ಮಣ್ಣಿನ ಹಣತೆ, ಧೂಪ, ಅಳಿಗೆ, ಬಾವಡಿ, ಕಾವಲಿ, ಮುಚ್ಚಳ, ಹೂವಿನ ಕುಂಡ, ಮಣ್ಣಿನ ಹರಿ ಸೇರಿದಂತೆ ಗ್ರಾಹಕರಿಗೆ ಅಗತ್ಯವಿರುವ ಮಣ್ಣಿನ ಎಲ್ಲ ಪರಿಕರಗಳನ್ನು ನಿರ್ಮಿಸಿಕೊಡುವಲ್ಲಿ ಪಂಜು ಕುಲಾಲ್ ಸಿದ್ಧಹಸ್ತರು.
ಕುಂದಾಪುರದ ಸಂತೆ ಮಡಿಕೆಯ ಮುಖ್ಯ ಮಾರುಕಟ್ಟೆ:
ಪ್ರತಿ ಶನಿವಾರ ನಡೆಯುವ ಕುಂದಾಪುರದ ಸಂತೆಯೇ ಪಂಜು ಕುಲಾಲ್ ಅವರ ಕುಂಬಾರಿಕೆಗೆ ಮುಖ್ಯ ಮಾರುಕಟ್ಟೆ. ಸ್ವತಃ ಇವರ ಮನೆಗೆ ಬಂದು ಮಡಿಕೆಯನ್ನು ಖರೀದಿಸುವವರು ಉಂಟು. ಹಿಂದೆಲ್ಲ ಊರಿಂದೂರಿಗೆ ತಲೆಯ ಮೇಲೆ ಮಡಿಕೆಗಳನ್ನು ಹೊತ್ತು ಸಾಗುತ್ತಿದ್ದರಂತೆ. ಆಮೇಲೆ ಎತ್ತಿನ ಗಾಡಿ, ಈಗ ಪ್ರಸ್ತುತ ಟೆಂಪೂದಲ್ಲಿ ಕುಂದಾಪುರದ ಮಾರುಕಟ್ಟೆಗೆ ಮಡಿಕೆ ಸಾಗಿಸುತ್ತಾರೆ. ಕುಂದಾಪುರ ತಾಲೂಕಿನ ಎಲ್ಲೆಡೆ ಇವರ ಮಡಿಕೆಗಳಿಗೆ ಬೇಡಿಕೆ ಇತ್ತು. ಈಗಲೂ ಮಡಿಕೆ ಕುಡಿಕೆಗಳ ಅಗತ್ಯ ಬಿದ್ದಾಗ ಇವರನ್ನು ಅರಸಿಕೊಂಡು ಬರುವ ಗಿರಾಕಿಗಳು ತಾಲೂಕಿನಾದ್ಯಂತ ಇದ್ದಾರೆ.
ಕುಂಬಾರಿಕೆ ಲಾಭದಾಯಕವೇ?
ಪಂಜು ಕುಲಾಲ್ ಅವರಿಗೆ ಕುಂಬಾರಿಕೆಯೇ ಬದುಕಿನ ಸರ್ವಸ್ವ. ಪವಿತ್ರ ಕಾಯಕ. ಹಿಂದೆಲ್ಲಾ ಕುಂಬಾರಿಕೆ ಲಾಭವಾಗಿಯೇ ಇತ್ತು. ಆದರೆ ಬದಲಾದ ಇವತ್ತಿನ ಕಾಲದಲ್ಲಿ ಬೇಡಿಕೆ ಕುಸಿತದಿಂದ, ಹೆಚ್ಚಳವಾದ ಕಚ್ಚಾ ವಸ್ತುಗಳ ಬೆಲೆಯಿಂದ, ಸಾಗಾಟ ವೆಚ್ಚದಿಂದ ಕುಂಬಾರಿಕೆ ಅಷ್ಟೇನೂ ಲಾಭವಾಗಿ ಇಲ್ಲ ಎಂಬುದು ಅಜ್ಜನ ಪ್ರಾಮಾಣಿಕ ಅನಿಸಿಕೆ.
ಜೇಡಿಮಣ್ಣು ಕುಂಬಾರಿಕೆಯ ಮೂಲ ಬಂಡವಾಳ. ಆದರೆ ಅದಿವತ್ತು ತುಂಬಾ ದುಬಾರಿ. ‘ಐಸಾಲೆ’ಯಲ್ಲಿ ಮಡಿಕೆಗಳನ್ನು ಹದವಾಗಿ ಬೇಯಿಸಲು ಕಟ್ಟಿಗೆಯೂ ಅತೀ ಮುಖ್ಯ. ಸುಮಾರು ಹದಿನೈದು ಗಂಟೆಗಳ ಕಾಲ ಹದವಾದ ಬೆಂಕಿಯಲ್ಲಿ ಮಡಿಕೆಯನ್ನು ಬೇಯಿಸಿದರಷ್ಟೇ ಗುಣಮಟ್ಟದ ಮಡಿಕೆಗಳು ಸಿದ್ಧವಾಗುತ್ತವೆ. ಆದರೆ ಕಟ್ಟಿಗೆಯ ಬೆಲೆಯೂ ಇಂದು ತುಂಬಾ ದುಬಾರಿ. ಮಡಿಕೆಯನ್ನು ಜೋಪಾನವಾಗಿ ಸಾಗಿಸಲು ಸಾಗಾಟ ವೆಚ್ಚ, ಒಡೆಯದಂತೆ ರಕ್ಷಿಸಲು ಬೇಕಾಗುವ ಹುಲ್ಲು, ಕಾರ್ಮಿಕರ ಸಂಬಳ, ಮಾರುಕಟ್ಟೆ ಕುಸಿತ, ಗ್ರಾಹಕರ ನಿರ್ಲಕ್ಷ್ಯ ಕುಂಬಾರಿಕೆಯ ಮೇಲೆ ಪರಿಣಾಮ ಬೀರಿದೆ. ಬೇಡಿಕೆ ದಿನದಿಂದ ದಿನ ಕುಸಿಯುತ್ತಿರುವುದರಿಂದ ಕುಂಬಾರಿಕೆಯನ್ನು ಮುನ್ನಡೆಸುವುದು ತೀರಾ ಕಷ್ಟ ಎನ್ನುವುದು ಪಂಜು ಕುಲಾಲ್ ಅಭಿಮತ.
ಪಂಜು ಕುಲಾಲ್ ಏನೆನ್ನುತ್ತಾರೆ ?
‘ನನ್ನ ಅಪ್ಪಯ್ಯನಿಂದ ನನಗೆ ಬಳುವಳಿಯಾಗಿ ಬಂದ ಕುಂಬಾರಿಕೆ ವೃತ್ತಿ ನನಗೆ ಬರೀ ವೃತ್ತಿಯಲ್ಲ. ಅದು ಸರ್ವಸ್ವ. ಎಂದಿಗೂ ನನಗೆ ಇದರ ಮೇಲೆ ತುಂಬು ಗೌರವ ಇದೆ. ಆದರೆ ನನ್ನ ನಂತರ ಈ ಕುಂಬಾರಿಕೆ ವೃತ್ತಿ ನಶಿಸಬಹುದು. ನನ್ನ ಮಕ್ಕಳ್ಯಾರು ಇದನ್ನು ಕಲಿತಿಲ್ಲ.. ನಾನು ಕಲಿಯುವಂತೆ ಒತ್ತಾಯ ಮಾಡುವುದೂ ಇಲ್ಲ. ಕಾರಣ ಕುಂಬಾರಿಕೆಯಿಂದ ಬದುಕು ಸಾಗಿಸುವುದು ಮುಂದೆ ಕಷ್ಟ.’ ಎನ್ನುತ್ತಾರೆ ಪಂಜು ಕುಲಾಲ್ ಅವರು.
ಎಂಬತೈದರ ಇಳಿವಯಸ್ಸಿನಲ್ಲೂ ಯಾವುದೇ ತಂತ್ರಜ್ಞಾನದ ಸಹಕಾರ ಇಲ್ಲದೇ ದೈಹಿಕ ಶ್ರಮದಿಂದಲೇ ಕುಂಬಾರಿಕೆ ಮಾಡಿಕೊಂಡು ಬರುತ್ತಿರುವ ಈ ಅಜ್ಜನ ವೃತ್ತಿ ನಿಷ್ಟೆಗೆ, ಅಜ್ಜಿಯ ತುಂಬು ಸಹಕಾರಕ್ಕೆ ನಾವು ತಲೆಬಾಗಲೇ ಬೇಕು. ಕುಂಬಾರಿಕೆಯ ಈ ಹಿರಿಯ ಜೀವಿಗಳಿಗೊಂದು ಹ್ಯಾಟ್ಸಾಪ್ ಅನ್ನೊಣವೇ?
ಮಾಹಿತಿ: ಶಶಿಕಲಾ ಮಂಜುನಾಥ್ ಬೇಳಂಜೆ.
ಬರಹ: ಮಂಜುನಾಥ್ ಹಿಲಿಯಾಣ.