ಕುಂದಾಪುರ ಕುಲಾಲ ಸಮಾಜ ಸುಧಾರಕ ಸಂಘದ 27ನೇ ವಾರ್ಷಿಕೋತ್ಸವ
ಕುಂದಾಪುರ(ಡಿ.೨೫, ಕುಲಾಲ್ ವರ್ಲ್ಡ್ ನ್ಯೂಸ್): “ಸಮುದಾಯದ ಪರವಾಗಿ ಧ್ವನಿ ಎತ್ತುವ ಉದ್ದೇಶದಿಂದ ಸಂಘಟನೆಗಳ ಅಗತ್ಯವಿದೆ. ಆದರೆ ಇಂಥ ಸಂಘಟನೆಗಳಲ್ಲಿ ರಾಜಕೀಯ ನುಸುಳದಂತೆ ಎಚ್ಚರಿಕೆ ವಹಿಸಬೇಕು” ಎಂದು ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಡಿ.೨೫ರಂದು ನಡೆದ ಕುಂದಾಪುರ ಕುಲಾಲ ಸಮಾಜ ಸುಧಾರಕ ಸಂಘದ 27ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, “ಮಹಿಳೆಯರು ಸಾಮಾಜಿಕ ಸೇವೆ ಹಾಗೂ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಕಿಕ್ಕಿರಿದು ಸೇರಿದ ಕುಲಾಲ ಸಮುದಾಯದ ಯುವಕ-ಯುವತಿಯವರನ್ನು ಕಂಡಾಗ ಮತ್ತಷ್ಟು ಸೇವೆ ಮಾಡಲು ಹುರುಪು ಬರುತ್ತದೆ.ಆದರೆ ಸಂಘಟನೆಗಳಲ್ಲಿ ಯಾವುದೇ ಪಕ್ಷದವರಿರಲಿ ಅದರಿಂದ ನಮ್ಮ ಜಾತಿ ಸಂಘಟನೆಯ ಒಗ್ಗಟ್ಟಿಗೆ ಧಕ್ಕೆ ಬಾರದಿರಲಿ” ಎಂದು ಆಶಿಸಿದರು.
ಮತ್ತೊಬ್ಬ ಮುಖ್ಯ ಅತಿಥಿ ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಮಾತನಾಡಿ, “ಸಾಂಸ್ಕೃತಿಕ ಹರಿಕಾ ರಾದ ಕುಂಬಾರರು ರಾಜಕೀಯ ನೇತಾರರಾಗಬೇಕು. ಫೆಬ್ರವರಿಯಲ್ಲಿ ಬೆಳ್ತಂಗಡಿಯಲ್ಲಿ ಜರುಗಲಿರುವ ಹಕ್ಕೊತ್ತಾಯ ಸಮಾವೇಶ ಹಾಗು ಮಂಗಳೂರಲ್ಲಿ ಜರುಗಲಿರುವ ಕುಂಭ ಮೇಳದಲ್ಲಿ ಕರಾವಳಿಯಲ್ಲಿ ಕುಲಾಲ- ಕುಂಬಾರರಿಗೆ ರಾಜಕೀಯ ಸ್ಥಾನಮಾನ ಕೊಡುವಂತೆ ಎಲ್ಲಾ ರಾಜಕೀಯ ಪಕ್ಷಗಳನ್ನ ಬಹಿರಂಗವಾಗಿ ಒತ್ತಾಯಿಸಲಾಗುವುದು. ಯುವವೇದಿಕೆಯ ನಾಯಕರು ಈ ಹಕ್ಕೊತ್ತಾಯದ ಮುಂಚೂಣಿಯಲ್ಲಿರುತ್ತಾರೆ” ಎಂದರು.
ಸಂಘದ ಗೌರವಾಧ್ಯಕ್ಷ ಡಾ. ಎಂ ವಿ ಕುಲಾಲ್ ಮಾತನಾಡಿ, “ಸಮಾಜಸೇವೆ -ಸಮುದಾಯದ ಸೇವೆಗಾಗಿ ಶ್ರಮಿಸಿತ್ತಿರುವ ಹಾಗು ರಾಜಕೀಯ ನೇತಾರರಾಗಿರುವ ಅಣ್ಣಯ್ಯ ಕುಲಾಲ್ ಹಾಗು ಕಸ್ತೂರಿ ಪಂಜರವರಿಗೆ ಮತ್ತಷ್ಟು ಮೇಲ್ಮಟ್ಟದ ರಾಜಕೀಯ ಸ್ಥಾನಮಾನ ಸಿಗುವಂತೆ ಎಲ್ಲ ಸಂಘ-ಸಂಘಟನೆಗಳು ಒತ್ತಾಯಿಸಬೇಕು ಎಂದರು.
ಸಂಘದ ಅಧ್ಯಕ್ಷ ನಿರಂಜನ ಸಲ್ವಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಕರಾವಳಿ ಯುವ ವೇದಿಕೆಯ ಅಧ್ಯಕ್ಷ ಸತೀಶ್ ಕುಲಾಲ್ ನಡೂರು, ಬಸವ ಕುಲಾಲ್ ಉಳ್ತೂರು, ದಿನೇಶ್ ಕುಲಾಲ್ ಮೊಳಹಳ್ಳಿ, ಸುರೇಶ ಕುಲಾಲ್ ಆಜ್ರಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಮಡಿಕೆ ಮಾಡುವ ಹಿರಿಯರಿಗೆ, ಸಾಧಕರಿಗೆ, ಹಿರಿಯ ಕಾರ್ಯಕರ್ತರಿಗೆ ಹಾಗೂ ಯಕ್ಷಗಾನ ಕಲಾವಿದರಿಗೆ ಸನ್ಮಾನಿಸಿ ಕ್ರೀಡಾ ಕೂಟದ ಯಶಸ್ವಿಗೆ ಶ್ರಮಿಸಿದ ಯುವ ವೇದಿಕೆಯ ನಾಯಕರನ್ನು ಗುರುತಿಸಿ ಗೌರವಿಸಲಾಯಿತು ಹಾಗೂ ಬಹುಮಾನ ವಿತರಣೆ ಮಾಡಲಾಯಿತು.