ಬೆಂಗಳೂರು(ಡಿ.೨೧, ಕುಲಾಲ್ ವರ್ಲ್ಡ್ ನ್ಯೂಸ್): ಕುಂಬಾರ ಸಮುದಾಯವನ್ನು 2 ಎ ವರ್ಗಕ್ಕೆ ಸೇರಿಸಿದ್ದು ದೇವೇಗೌಡರು. ನಾನೇ ಮಾಡಿದೆ ಎಂದು ಕೆಲವರು ಹೇಳುತ್ತಾರೆ. ಅವರ ಹೆಸರು ಹೇಳಿ ಬಾಯಿ ಹೊಲಸು ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್ ಮುಖಂಡ ಮಾಜಿ, ಸಚಿವ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ಇತ್ತೀಚೆಗೆ ಕುಂಬಾರ ಸಮಾಜದ ವತಿಯಿಂದ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜೆಡಿಎಸ್ನಲ್ಲಿದ್ದಾಗ ಸಿದ್ದರಾಮಯ್ಯನವರನ್ನು ಉಪಮುಖ್ಯಮಂತ್ರಿ ಮಾಡಿದ್ದರೂ, ಅವರು ದೇವೇಗೌಡರ ವಿರುದ್ಧ ಮಾತನಾಡುತ್ತಾರೆ. ಕನಕಪುರ ಅಭಿವೃದ್ಧಿ ಮಾಡಿದ್ದು ದೇವೇಗೌಡರು, ನಾನು ಹಾಗೂ ಕುಮಾರಸ್ವಾಮಿ. ನಿನ್ನೆ ಮೊನ್ನೆ ಬಂದವರು ‘ಅಭಿವೃದ್ಧಿ ಹರಿಕಾರರು’ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ದೇವೇಗೌಡರ ಆಡಳಿತದ ಪುಸ್ತಕ
ಪ್ರಧಾನಿಯಾಗಿದ್ದಾಗ ತಾವು ಕೈಗೊಂಡ ಅಭಿವೃದ್ಧಿ ಕೆಲಸಗಳೇನು ಎಂಬುದರ ಕುರಿತಾದ ಪುಸ್ತಕ ಡಿ.23ರಂದು ಬಿಡುಗಡೆಯಾಗಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ಜೆಡಿಎಸ್ ಕಚೇರಿಯಲ್ಲಿ ಕುಂಬಾರ ಸಮುದಾಯದ ಮುಖಂಡರು ಜೆಡಿಎಸ್ ಪಕ್ಷ ಸೇರ್ಪಡೆಯಾದ ಕಾರ್ಯಕ್ರಮದಲ್ಲಿ ಮಾತನಾಡಿ, ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದರೂ ರಾಜ್ಯಕ್ಕಾಗಿ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದೇನೆ. ಬಹಳಷ್ಟು ನೋವು ಅನುಭವಿಸಿದ್ದೇನೆ. ಪ್ರಧಾನಿಯಾಗಿದ್ದ ಅವಧಿಯ ಕೃತಿ ಬಿಡುಗಡೆಯಾಗುತ್ತದೆ, ಜೀವನಚರಿತ್ರೆಯೂ ಸಿದ್ಧವಾಗುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಗೆದ್ದರೆ ಬಡವರ ಸಂಕಷ್ಟ ಕೊನೆಯಾಗುತ್ತದೆ ಎಂದರು.
ಕುಂಬಾರ ಸಮುದಾಯದ ಮುಖಂಡ ಶಿವಕುಮಾರ ಚೌಡಶೆಟ್ಟಿ. ನಟಿ ವೇದಿಕಾ ಹಾಗೂ ತಾಯಿ ಆಶಾ ಹಾಗೂ ಅನೇಕ ಕುಂಬಾರ ಸಮುದಾಯದ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು .