ಬಂಟ್ವಾಳ (ಡಿ.೨೦, ಕುಲಾಲ್ ವರ್ಲ್ಡ್ ನ್ಯೂಸ್): ಸಂತೋಷ-ಸಂಕಷ್ಟಗಳು ಮಾನವ ಜೀವನದ ಎರಡು ಮುಖಗಳು. ಬದುಕಿನಲ್ಲಿ ಏಳು-ಬೀಳುಗಳು ಸಾಮಾನ್ಯ. ಕೆಲವೊಮ್ಮೆ ಬದುಕಿನ ಸಂಕಷ್ಟಗಳು ಬಂದು ಹೋದರೆ, ಇನ್ನು ಕೆಲವೊಮ್ಮೆ ಜೀವನ ಸಂಕಷ್ಟಗಳು ಕುಟುಂಬದ ಇಡೀ ಬದುಕನ್ನೇ ತಲ್ಲಣಗೊಳಿಸುತ್ತವೆ. ಬಡತನ ಹಾಗೂ ಕಾಯಿಲೆ ಒಟ್ಟೊಟ್ಟಾಗಿ ಒಂದು ಕುಟುಂಬವನ್ನು ಬಾಧಿಸುತ್ತಿರುವ ಕರುಣಾಜನಕ ಕಥೆ ಇಲ್ಲಿದೆ..
ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ನೇರಳಕಟ್ಟೆ ನಿವಾಸಿ ಸಾವಿತ್ರಿ ಮತ್ತು ನಾರಾಯಣ ಕುಲಾಲ್ ದಂಪತಿಯದು ಕಡು ಬಡಕುಟುಂಬ. ಇವರ ಪುತ್ರ 13 ವರ್ಷದ ಗಗನ್ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಆದರೆ ಮುಂದಿನ ವಿದ್ಯಾಭ್ಯಾಸ ಮತ್ತು ಬಾಲಕನ ಭವಿಷ್ಯವೇ ಅತಂತ್ರ ಸ್ಥಿತಿಯಲ್ಲಿದ್ದು, ಈತನ ಕಿಡ್ನಿ ವೈಫಲ್ಯಕ್ಕಾಗಿ ಲಕ್ಷಾಂತರ ಹಣ ವ್ಯಯಿಸಿದ ಈತನ ಪಾಲಕರು ಕಂಗಾಲಾಗಿದ್ದಾರೆ. ಮಾರಕ ರೋಗದಿಂದ ಬಳಲುತ್ತಿರುವ ಕರುಳ ಕುಡಿ ಒಂದೆಡೆಯಾದರೆ ಮತ್ತೊಂದೆಡೆ ಕಿತ್ತು ತಿನ್ನುತ್ತಿರುವ ಬಡತನ ಈ ಕುಟುಂಬದ ನೆಮ್ಮದಿಯನ್ನೇ ಅಲುಗಾಡಿಸಿದೆ.
ಗಗನ್ ಚಿಕ್ಕಂದಿನಿಂದಲೇ ಬಹಳ ಚುರುಕಿನ ಹುಡುಗ. ನೇರಳಕಟ್ಟೆಯ ಸರಕಾರೀ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಗಗನ್ ಗೆ ಐದನೇ ವಯಸ್ಸಿಗೆ ಜ್ವರಭಾದೆ ಕಾಣಿಸಿಕೊಂಡಿದ್ದು, ಸ್ಥಳೀಯ ವೈದ್ಯರು ಕೊಟ್ಟ ಔಷಧಿ ನೀಡಲಾಯಿತು. ಆ ಬಳಿಕ ಮುಖವೆಲ್ಲ ಬಾತುಕೊಂಡಿದ್ದು, ಪೂರ್ಣ ನಿಶ್ಯಕ್ತನಾಗಿ ಕುಳಿತುಬಿಟ್ಟ ಬಾಲಕನನ್ನು ನೋಡಿ ಗಾಬರಿಗೊಂಡ ಮನೆಯವರು ಮಂಗಳೂರಿನ ಆಸ್ಪತ್ರೆಗೆ ಕರೆತಂದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ವೈದ್ಯರು ಗಗನ್ ಗೆ ಒಂದು ಕಿಡ್ನಿ ವೈಫಲ್ಯವಾಗಿರುವುದನ್ನು ಪತ್ತೆ ಹಚ್ಚಿದರು. ಇದಾಗಿ ಏಳು ವರ್ಷಗಳು ಉರುಳಿದ್ದು, ಈತನ ಚಿಕಿತ್ಸೆ, ಔಷಧಿಗಾಗಿ ಈ ಕುಟುಂಬ ಕೂಡಿಟ್ಟ ಹಣ-ಸಾಲಮೂಲ ಅಂತ ಒಟ್ಟು 14 ಲಕ್ಷ ರೂ. ಗೂ ಅಧಿಕ ಖರ್ಚು ಮಾಡಿದೆ. ಈ ಮಧ್ಯೆ ಗಗನ್ ನ ದೇಹ ತೂಕ ವಿಪರೀತ ಏರಿಕೆಯಾಗಿದ್ದು, ಪ್ರಸ್ತುತ ಬಾಲಕನ ಸ್ಥಿತಿ ತುಂಬಾ ಚಿಂತಾಜನಕವಾಗಿದೆ.
ಕೂಲಿ ಕೆಲಸ ಮಾಡುತ್ತಿರುವ ಗಗನ್ ತಂದೆ ನಾರಾಯಣ, ಬೀಡಿಕಟ್ಟಿ ಸಂಸಾರ ನಿಭಾಯಿಸುತ್ತಿರುವ ಸಾವಿತ್ರಿ ಅವರಿಗೆ ಇಬ್ಬರು ಪುತ್ರರು. ಹಿರಿಯ ಮಗ ಹರ್ಷಿತ್ ಪ್ರಥಮ ಪಿಯುಸಿ ಓದುತ್ತಿದ್ದಾನೆ. ಈ ಕುಟುಂಬ ಕಿರಿ ಮಗ ಗಗನ್. ಈತನ ಆಸ್ಪತ್ರೆ ಮತ್ತು ಔಷಧಿಗಳ ಖರ್ಚಿಗಾಗಿ ಪ್ರತಿ ತಿಂಗಳು ಕನಿಷ್ಠವೆಂದರೂ ಹತ್ತು ಸಾವಿರ ರೂ. ಅಗತ್ಯವಿದೆ. ಕಿಡ್ನಿಯನ್ನು ಔಷಧಿ -ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದು ವೈದ್ಯರು ತಿಳಿಸಿದ್ದು, ಅದಕ್ಕೆ ಲಕ್ಷಗಟ್ಟಲೆ ಹಣದ ಅವಶ್ಯಕತೆ ಇದೆ. ದುಡಿದ ಹಣ ಅಂದಂದಿಗೆ ಖರ್ಚು ಮಾಡುತ್ತಾ ಕಷ್ಟದಿಂದ ಜೀವನ ನಡೆಸುತ್ತಿರುವ ಈ ಬಡ ಕುಟುಂಬಕ್ಕೆ ಇಷ್ಟೊಂದು ಹಣ ಭರಿಸಲು ಸಾಧ್ಯವಾಗುತ್ತಿಲ್ಲ. ಮೇಲಾಗಿ ಮಗುವಿನ ಜೀವ ಕಾಪಾಡಬೇಕಾಗಿದೆ. ಮುಂದೇನು ಎಂದು ತಿಳಿಯದೆ ದಿಕ್ಕು ಕಾಣದಂತಾಗಿರುವ ಗಗನ್ ಕುಟುಂಬಕ್ಕೆ ಹೃದಯವಂತ ದಾನಿಗಳು ಹಣದ ಸಹಾಯ ನೀಡಿ ಮಾನವೀಯತೆ ಮೆರೆಯಬೇಕು ಎಂದು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.
ಬಾಲಕನ ಪ್ರಾಣ ರಕ್ಷಿಸುವ ಹಿನ್ನೆಲೆಯಲ್ಲಿ ಸಮಾಜ ಬಾಂಧವರು, ಸಂಘ-ಸಂಸ್ಥೆ ಮತ್ತು ದಾನಿಗಳು ಮಾನವೀಯತೆ ಮೆರೆಯಬೇಕಾಗಿದೆ. ಬಾಲಕನನ್ನು ಪ್ರಾಣಾಪಾಯದಿಂದ ಕಾಪಾಡಲು ನೆರವು ನೀಡಲು ಇಚ್ಛಿಸುವವರು ಗಗನ್ ತಾಯಿಯ ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು.
Savithri
Vijaya Bank
Mani Branch (Rajalaxmi Building, Mani, BANTWAL)
SB a/c No: 114301011003249
IFSC code – VIJB0001143
ಚಿತ್ರ -ವರದಿ : ನರೇಶ್ ಕೆ.ಟಿ, ಬೆಳ್ತಂಗಡಿ
ಮಾಹಿತಿ : ಹೇಮಂತ್ ಕುಮಾರ್ ಕಿನ್ನಿಗೋಳಿ