ಕಾಪು ಕುಲಾಲ ಸಂಘದ 5ನೇ ವಾರ್ಷಿಕ ಮಹಾಸಭೆ-ಸನ್ಮಾನ-ಪ್ರತಿಭಾ ಪುರಸ್ಕಾರ
ಕಾಪು (ಡಿ. ೧೭, ಕುಲಾಲ್ ವರ್ಲ್ಡ್ ನ್ಯೂಸ್): ಧಾರ್ಮಿಕ, ಶೈಕ್ಷಣಿಕ ರಂಗಗಳಲ್ಲಿ ಸಾಧನೆ ಮಾಡುತ್ತಿರುವ ಕುಲಾಲ ಸಮಾಜ ಸಾತ್ವಿಕ ಸಮಾಜವಾಗಿದ್ದು, ಈ ಸಮುದಾಯದ ಹಿತರಕ್ಷಣೆಗೆ ಸದಾ ಬದ್ಧವಾಗಿರುವುದಾಗಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಡಿ.17ರಂದು ಇರಂದಾಡಿ ನಿತ್ಯ ಸಹಾಯ ಮಾತಾ ಹಿರಿಯ ಪ್ರಾಥಮಿಕ ಶಾಲೆಯ ಸಂಭಾಗಣದಲ್ಲಿ ನಡೆದ ಕುಲಾಲ ಸಂಘ (ರಿ) ಕಾಪು ವಲಯ ಇರಂದಾಡಿ ಉಡುಪಿ ಇಲ್ಲಿನ ೫ನೇ ವಾರ್ಷಿಕ ಮಹಾಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ಪೆರ್ಡೂರು, ನಾನಿಲ್ತಾರ್ ಕುಲಾಲ ಸಂಘಗಳಿಗೆ ಸರಕಾರ ಅನುದಾನ ನೀಡಲಾಗಿದೆ. ಹಾಗೆಯೇ ಕಾಪು ಸಂಘದ ಬಹುದಿನದ ಬೇಡಿಕೆಯಾದ ಸಮುದಾಯ ಭವನಕ್ಕಾಗಿ ನಿವೇಶನ ಕೊಡಿಸುವ ನಿಟ್ಟಿನಲ್ಲಿ ಕಂದಾಯ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿಜೆಪಿ ನಾಯಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸ್ಕಿಲ್ ಇಂಡಿಯಾ ಕಾರ್ಯಕ್ರಮದಲ್ಲಿ ಕುಂಬಾರಿಕೆಯನ್ನ ಸೇರಿಸದೇ ಕುಂಬಾರರಿಗೆ ಅನ್ಯಾಯವಾಗಿದೆ. ಅದಕ್ಕಾಗಿ ಡಾ ಅಣ್ಣಯ್ಯ ಕುಲಾಲ್ ಸಹಿತ ಸಮುದಾಯದ ಇತರ ನಾಯಕರನ್ನು ಕೇಂದ್ರ ಸಚಿವ ಅನಂತ್ ಕುಮಾರ ಹೆಗ್ಡೆಯವರ ಭೇಟಿ ಮಾಡಿಸಿ, ಕುಂಬಾರಿಕೆಯನ್ನ ಸ್ಕಿಲ್ ಇಂಡಿಯಾ ಪ್ರೋಗ್ರಾಮ್ ಗೆ ಸೇರಿಸಿ ರಾಜ್ಯ ಹಾಗು ರಾಜ್ಯ ಮಟ್ಟದಲ್ಲಿ ಅವನತಿಯತ್ತ ಹೋಗುತ್ತಿರುವ ಕುಂಬಾರಿಕೆಯನ್ನ ಉಳಿಸಲು ಪ್ರಯತ್ನ ಮಾಡಿ ಇಡಿ ರಾಷ್ಟ್ರದ ಕುಂಬಾರರಿಗೆ ನ್ಯಾಯ ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಕುಲಾಲ್ ಬೊಬ್ಬೆಟ್ಟು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಸಂತಿ ಮಧ್ವರಾಜ್, ಸುರೇಶ ಶೆಟ್ಟಿ ಗುರ್ಮೆ, ಯೋಗೀಶ್ ಶೆಟ್ಟಿ, ಫಾದರ್ ಲಾರೆನ್ಸ್ ಡಿಸೋಜ, ಎ.ಎನ್ ಕುಲಾಲ್, ಸಂತೋಷ್ ಕುಲಾಲ್ ಪಕ್ಕಾಲ್, ಸತೀಶ್ ಕುಲಾಲ್ ನಡೂರು, ಜಯ ಎಸ್ ಅಂಚನ್, ರಾಘು ಎ. ಮೂಲ್ಯ, ಸುಜಾತ ಕುಲಾಲ್ ಪಾದೆಬೆಟ್ಟು ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ದಿಕ್ಸೂಚಿ ಭಾಷಣಗೈದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು , ಕುಲಾಲ ಸಮುದಾಯಕ್ಕೆ ಮರೀಚಿಕೆಯಾದ ಸಾಮಾಜಿಕ ನ್ಯಾಯ, ಕುಲಾಲರ ಕುಲ ಕಸುಬಿನ ಏರಿಳಿತ, ಅವಕಾಶ ವಂಚಿತ ಪ್ರತಿಭೆಗಳ ನೋವು ನಿರಾಸೆಯ ಕುರಿತು ತಮ್ಮದೇ ಆದ ಮೊನಚು ಮಾತಿನ ಶೈಲಿಯಲ್ಲಿ ಮಾತನಾಡಿ ಅತಿಥಿಗಳ ಗಮನಸೆಳೆದರು.
ಕಾರ್ಯಕ್ರಮದ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಚಿಕಿತ್ಸೆಗೆ ನೆರವು
ಕಾರ್ಯಕ್ರಮದಲ್ಲಿ ಆಕಸ್ಮಿಕ ಅಪಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಶಾಂತ್ ಕುಲಾಲ್ ಎಂಬ ಯುವಕನ ವೈದ್ಯಕೀಯ ವೆಚ್ಚಕ್ಕೆ `ಕುಲಾಲ ಚಾವಡಿ’ ವಾಟ್ಸಪ್ ಗ್ರೂಪ್ ವತಿಯಿಂದ ಸಂಗ್ರಹಿಸಿದ 16,151/-ರೂಪಾಯಿಯನ್ನು ಅವರ ಸಂಬಂಧಿಕರಿಗೆ ಹಸ್ತಾ೦ತರಿಸಲಾಯಿತು. ಈ ಸಂದರ್ಭ ಗ್ರೂಪ್ ಅಡ್ಮಿನ್ ಸಂತೋಷ್ ಕುಲಾಲ್ ಪದವು, ರಂಜಿತ್ ಕುಲಾಲ್ , ಹೇಮಂತ್ ಕುಲಾಲ್, ಉದಯ್ ಕುಲಾಲ್ ಕಳತ್ತೂರು, ಅರುಣ್ ಕುಲಾಲ್, ಸತೀಶ್ ಕಜ್ಜೋಡಿ ಮೊದಲಾದವರು ಉಪಸ್ಥಿರಿದ್ದರು.
ಉಪ್ಪಿಯನ್ ಬರಿ ಸಮಸ್ಯೆ ಪರಿಹಾರಕ್ಕೆ ಶ್ರಮ
ಕುಲಾಲ ಸಮಾಜದಲ್ಲಿ ಬೇರೂರಿರುವ ಉಪ್ಪಿಯನ್ ಬರಿ ಸಮಸ್ಯೆ ಕುಲಾಲ್ ವರ್ಲ್ಡ್ ಡಾಟ್ ಕಾಮ್ ನಲ್ಲಿ ಪ್ರಕಟಗೊಂಡ ಲೇಖನಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಮುಖ್ಯ ಅತಿಥಿಗಳಾದ ಮುಂಬಯಿ ಕುಲಾಲ ಸಂಘದ ರಘು ಮೂಲ್ಯ ಹಾಗೂ ಬೆಂಗಳೂರು ಕುಲಾಲ ಸಂಘದ ಮುಖಂಡರಾದ ಎ. ಎನ್. ಕುಲಾಲ್, ಸಮಾಜದಲ್ಲಿ ಬೇರೂರಿರುವ ತಪ್ಪು ನಂಬಿಕೆಯನ್ನು ಹೋಗಲಾಡಿಸುವ ಸಲುವಾಗಿ ಮುಂಬರುವ ದಿನಗಳಲ್ಲಿ ಚಿಂತನಾ ಕೂಟ ಏರ್ಪಡಿಸಿ ಜಾಗೃತಿ ಮೂಡಿಸುವುದಾಗಿ ಹೇಳಿದರು.
ಕುಂಬಾರಿಕೆಯಲ್ಲಿ ಹೊಸತನಕ್ಕೆ ಶ್ರಮಿಸಬೇಕು
ಕುಂಬಾರಿಕೆಯಲ್ಲಿ ಹೊಸತನ ತರುವ ಬಗ್ಗೆ ಚಿಂತನೆ ನಡೆಯಬೇಕು. ಆ ಮೂಲಕ ಕುಂಬಾರಿಕೆಯನ್ನ ಉಳಿಸಬೇಕು. ಕುಂಬಾರರ ನೋವು ನಲಿವನ್ನು ಕುಂಬಾರ ನಾಯಕರ ಬಳಿ ಚರ್ಚಿಸಿ ಕೇಳಬೇಕೇ ಹೊರತು ಇದನ್ನು ಐಎಎಸ್ ಅಧಿಕಾರಿಗಳು ತೀರ್ಮಾನ ಮಾಡುವುದಲ್ಲ. ಇದು ನಮ್ಮ ನಾಯಕ ಕುಮಾರ ಸ್ವಾಮಿಯವರ ಸಿದ್ಧಾಂತ. ಕುಂಬಾರ ಸಮುದಾಯದ ನೋವನ್ನ ಪಕ್ಷದ ವರಿಷ್ಠರಿಗೆ ಮುಟ್ಟಿಸಲಾಗುವುದು.
ಯೋಗೀಶ್ ಶೆಟ್ಟಿ, ಜೆಡಿಎಸ್ ಉಡುಪಿ ಜಿಲ್ಲಾ ಅಧ್ಯಕ್ಷ
ಅಣ್ಣಯ್ಯರನ್ನು ಪಡೆದಿರುವುದು ಕುಲಾಲ ಸಮುದಾಯ ಪುಣ್ಯ
ನಾನು ಬಂಟ ಸಮುದಾಯದವನಾದರೂ ಡಾ.ಅಣ್ಣಯ್ಯ ಕುಲಾಲ್ ರವರ ದಿಕ್ಸೂಚಿ ಭಾಷಣದಿಂದ ಅವರ ಅಭಿಮಾನಿಯಾಗಿ ಬಿಟ್ಟೆ. ಇಂತಹ ನೇರ ನಡೆ ನುಡಿಯ ಮೂಲಕ ರಾಜಕಾರಣಿಗಳನ್ನ ತರಾಟೆಗೆ ತೆಗೆದುಕೊಳ್ಳುವ ನೇರ, ದಿಟ್ಟ, ನಿರಂತರ ಹೋರಾಟದ ನಾಯಕರು ಎಲ್ಲಾ ಜಾತಿಯಲ್ಲಿ ಇರಬೇಕು. ಇಂತಹ ನಾಯಕರನ್ನ ಪಡೆದಿರುವ ಕುಲಾಲ ಸಮುದಾಯ ಪುಣ್ಯ ಮಾಡಿದೆ.
ಧೀರಜ್ ಶೆಟ್ಟಿ, ಕುತ್ಯಾರ್ ಗ್ರಾಂ ಪಂಚಾಯತ್ ಅಧ್ಯಕ್ಷರು