ಡೀಕೇಶಿ ಹಿಂದುಳಿದವರ ಬೆಳವಣಿಗೆ ಸಹಿಸದ ಸಚಿವ: ಚೌಡಶೆಟ್ಟಿ ಆರೋಪ
ಬೆಂಗಳೂರು(ಡಿ. ೪, ಕುಲಾಲ್ ವರ್ಲ್ಡ್ ನ್ಯೂಸ್): ‘ತಮ್ಮ ರಾಜಕೀಯ ಬೆಳವಣಿಗೆ ಸಹಿಸದೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿರೋಧಿಸುತ್ತಲೇ ಬಂದಿದ್ದಾರೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಚೌಡಶೆಟ್ಟಿ ಆರೋಪಿಸಿದರು. ಕನಕಪುರ ಜೆಡಿಎಸ್ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ನಾಯಕರಾಗಿ, ವಾರಸುದಾರರಾಗಿ ಬೆಳೆದು ಬಂದವರು ಸಿದ್ದರಾಮಯ್ಯ. ಅವರು ಬೆಳೆದು ರಾಜ್ಯದ ಮುಖ್ಯಮಂತ್ರಿ ಆಗುತ್ತಿದ್ದಂತೆ ಎಲ್ಲಾ ಹಿಂದುಳಿದ ವರ್ಗಗಳನ್ನು ಮರೆತು ತಮ್ಮ ಸಮುದಾಯ ಮಾತ್ರ ರಾಜ್ಯದ ಆಯಕಟ್ಟಿನ ಜಾಗದಲ್ಲಿ ಪ್ರತಿಷ್ಠಾಪಿಸುತ್ತಿದ್ದಾರೆ ಎಂದು ದೂರಿದರು. ವೇದಿಕೆಗಳಲ್ಲಿ ಹಿಂದುಳಿದ ಜಾತಿಗಳ ಪರವಾಗಿ ಎಂದು ಭಾಷಣ ಮಾಡುವ ಕ್ಷೇತದ್ರ ಸಚಿವ ಶಿವಕುಮಾರ್ ಅವರು, ತಮಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗುವುದನ್ನು ತಪ್ಪಿಸಿದರು. ಕುಂಭಕಲಾ ಅಭಿವೃದ್ಧಿ ಮಂಡಳಿಗೆ ಶಿಪಾರಸು ಪತ್ರ ನೀಡುವಂತೆ ಮನವಿ ಮಾಡಿದರೂ ನೀಡಲಿಲ್ಲ. ಸಚಿವ ಜಾರ್ಜ್ ಶಿಪಾರಸು ಪತ್ರ ನೀಡಿದ್ದರು. ಶಿವಕುಮಾರ್ ಅವರಿಗೆ ಹೃದಯದಲ್ಲಿ ಹಿಂದುಳಿದವರ ಬಗ್ಗೆ ಅಭಿಮಾನ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಯಾವುದೇ ರಾಜಕೀಯ ಮತ್ತು ಅಧಿಕಾರದ ಲಾಭಕ್ಕಾಗಿ ನಾನು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿಲ್ಲ. ಜೆಡಿಎಸ್ನಲ್ಲಿ ಸ್ವಾಭಿಮಾನ ಇದೆ. ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ಕಾಣುತ್ತಾರೆ. ಸಮಾನವಾದ ಅಧಿಕಾರ ಕೊಟ್ಟು ಗೌರವಿಸುತ್ತಾರೆ. ರಾಷ್ಟ್ರೀಯ ಪಕ್ಷಗಳು ಹಿಂದುಳಿದವರಿಗೆ ಪಕ್ಷದ ಪ್ರಮುಖ ಹುದ್ದೆ ನೀಡಿ ಬೆಳಸುವುದಿಲ್ಲ’ ಎಂದು ದೂರಿದರು. ರಾಜ್ಯದಲ್ಲಿ ರಾಜಕೀಯದ ದಿಕ್ಕು ಬದಲಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟು ಪ್ರಾದೇಶಿಕ ಪಕ್ಷವಾದ ಜೆಡಿಎಸ್ನ್ನು ರಾಜ್ಯದ ಜನರು ಬೆಂಬಲಿಸುತ್ತಿದ್ದು ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ ಎಂದು ಜನ ಬಯಸಿದ್ದಾರೆ. 224 ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲಿಸಬೇಕು. ಕನಕಪುರದಲ್ಲಿ ವಿಶ್ವನಾಥ್ ಗೆದ್ದರೆ ಖಂಡಿತ ಅವರು ಮಂತ್ರಿಯಾಗುತ್ತಾರೆ ಎಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ನಾಗರಾಜು, ಮುಖಂಡರಾದ ಪುಟ್ಟರಾಜು, ಜೈರಾಮು, ಬಿ.ಎಸ್.ಗೌಡ, ಚಿನ್ನಸ್ವಾಮಿ, ಸ್ಟುಡಿಯೋಚಂದ್ರು, ಕೈಲಾಸ್ಮೂರ್ತಿ, ಆರ್.ಟಿ.ರಾಜಗೋಪಾಲ್, ದುರ್ಗಯ್ಯ, ಅನ್ವರ್, ಅಸ್ಲಾಂ, ಸರ್ಧಾರ್, ಸಂಪತ್ತು, ಅನಿಲ್, ಬೇಕುಪ್ಪೆರಮೇಶ್ ಉಪಸ್ಥಿತರಿದ್ದರು.
ಅಭಿವೃದ್ಧಿ ಕಾರ್ಯಕ್ಕೆ ಕುಮಾರಣ್ಣನಿಂದ ಚಾಲನೆ ಸಿಕ್ಕಿತ್ತು
ಇಂದು ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ಅಭಿವೃದ್ಧಿ ಆಗುತ್ತಿದೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಇದರ ಮೂಲವೇ ಜೆಡಿಎಸ್ ಮತ್ತು ಎಚ್.ಡಿ.ಕುಮಾರಸ್ವಾಮಿ. ಇಂದಿನ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಕುಮಾರಣ್ಣ ಮುಖ್ಯಮಂತ್ರಿಯಾಗಿದ್ದಾಗ ಕಾರ್ಯಕ್ರಮ ರೂಪಿಸಿ ಚಾಲನೆ ಕೊಟ್ಟಿದ್ದರು. ಅದರ ಫಲವಾಗಿ ಇವರು ಇಂದು ಕೆಲಸ ಮಾಡುತ್ತಿದ್ದಾರೆ. ನಾಳೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೇ ನಾವು ಮಾಡುತ್ತೇವೆ. ಕನಸಿನ ಕನಕಪುರದ ಚಿತ್ರಣವೇ ಬದಲಾಗುತ್ತದೆ. ಕ್ಷೇತ್ರದ ಜನತೆ ಈ ಭಾರಿ ನಮಗೂ ಒಂದು ಅವಕಾಶ ಕೊಟ್ಟು ನೋಡಲಿ ಎಂದು ಶಿವಕುಮಾರ್ ಚೌಡಶೆಟ್ಟಿ ಹೇಳಿದರು.