ಬಾಗಲಕೋಟೆ(ಡಿ.೦೯, ಕುಲಾಲ್ ವರ್ಲ್ಡ್ ನ್ಯೂಸ್): ಬೇರೆ ಬೇರೆ ಜಾತಿಯವರು ಪರಸ್ಪರ ಪ್ರೀತಿಸಿ ಮದುವೆಯಾದರು ಎಂಬ ಕಾರಣಕ್ಕೆ ನವದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮರ್ಯಾದೆಗೇಡು ಹೆಸರಿನಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ.
ಹುನಗುಂದ ತಾಲ್ಲೂಕು ಕೈರವಾಡಗಿ ಗ್ರಾಮದ ಹೆಸ್ಕಾಂ ಲೈನ್ಮನ್ ಸಂಗಮೇಶ ಕುಂಬಾರ ಹಾಗೂ ಅದೇ ಊರಿನ ಕುರುಬ ಸಮುದಾಯದ ಹನುಮವ್ವ ಸರೂರ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಮನೆಯವರಿಂದ ವಿರೋಧ ಇದ್ದುದರಿಂದ ಮೂರು ತಿಂಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದ ಈ ಜೋಡಿ, ಸಮೀಪದ ಅಮೀನಗಡದಲ್ಲಿ ಮನೆ ಮಾಡಿಕೊಂಡು ದಾಂಪತ್ಯ ಬದುಕು ಆರಂಭಿಸಿತ್ತು.
ಪೂಜೆಗೆಂದು ಕರೆಸಿ ಕೊಲೆ:
ಕಾರ್ತೀಕೋತ್ಸವದ ನಿಮಿತ್ತ ಕಬ್ಬಿನ ತೋಟದಲ್ಲಿ ಪೂಜೆ ಇಟ್ಟುಕೊಂಡಿರುವುದಾಗಿ ಹೇಳಿ ಡಿ.2ರಂದು ದಂಪತಿಯನ್ನು ಹನುಮವ್ವನ ಅಪ್ಪ ಹನುಮಂತ ಸರೂರ ಊರಿಗೆ ಕರೆಸಿಕೊಂಡಿದ್ದಾರೆ. ತೋಟದಲ್ಲಿ ಪೂಜೆಯ ನಂತರ ಇಬ್ಬರಿಗೂ ಊಟ ಮಾಡಿಸಿದ್ದಾರೆ. ನಂತರ ತನ್ನ ಸಹೋದರ ಗಂಗಪ್ಪ, 16 ವರ್ಷದ ಮಗ ಯಲ್ಲಪ್ಪ, ಮತ್ತೊಬ್ಬ ಅಳಿಯ ಯಲ್ಲಪ್ಪ ನಾಗರಾಳ, ಸ್ನೇಹಿತ ಚನ್ನಬಸಯ್ಯನೊಂದಿಗೆ ಸೇರಿ ಮಗಳ ಮುಂದೆಯೇ ಅಳಿಯನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ನಂತರ ಹೆಣವನ್ನು ಕಾರಿನಲ್ಲಿ ಅಮೀನಗಡ– ಐಹೊಳೆ ರಸ್ತೆಗೆ ಒಯ್ದಿದ್ದಾರೆ. ಅಲ್ಲಿ ಮಗಳ ಮೇಲೂ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಇಬ್ಬರ ಶವವನ್ನೂ ರಸ್ತೆಯ ಮೇಲೆ ಹಾಕಿ ಶವಗಳ ಮೇಲೆ ಟ್ರ್ಯಾಕ್ಟರ್ ಹಾಯಿಸಿದ್ದಾರೆ. ಅವರು ತಂದಿದ್ದ ಬೈಕ್ ಅಲ್ಲಿಯೇ ಬೀಳಿಸಿ ಅಪಘಾತವೆಂಬಂತೆ ಬಿಂಬಿಸಲು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಶನಿವಾರ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಬಂಧಿಸಿ ಕರೆತರಲಾಗಿದೆ.
‘ಮದುವೆ ನಂತರ ಮಗಳು– ಅಳಿಯನ ನಡುವೆ ಸಂಬಂಧ ಸರಿ ಇರಲಿಲ್ಲ. ಹಾಗಾಗಿ ಆತನನ್ನು ಕೊಂದೆವು. ವಿಧವೆ ಮಗಳನ್ನು ಮನೆಗೆ ಕರೆದೊಯ್ದರೆ ಊರಿನಲ್ಲಿ ಅಪಮಾನ ಎಂದು ನಿರ್ಧರಿಸಿ ಆಕೆಯನ್ನೂ ಕೊಲೆ ಮಾಡಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದ್ದಾರೆ.