ಕಾರ್ಕಳ(ಡಿ.೦೯, ಕುಲಾಲ್ ವರ್ಲ್ಡ್ ನ್ಯೂಸ್): ಅಜೆಕಾರಿನ ಜ್ಯೋತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕವಿತಾ ಕುಲಾಲ್ ಅವರು ಕರ್ನಾಟಕ ರಾಜ್ಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿ ದ್ದಾರೆ. ಈ ಮೂಲಕ ಒರಿಸ್ಸಾದ ಕಟಕ್ ನಲ್ಲಿ ನಡೆಯಲಿರುವ 17 ವರ್ಷದೊಳಗಿನ ಹುಡುಗಿಯರ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ. ಕ್ರೀಡೆಯಲ್ಲಿ ತೊಡಗಿಸಿಕೊಂಡ ಕೆಲವೇ ವರ್ಷಗಳ ಅವಧಿಯಲ್ಲೇ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ಪ್ರತಿಭಾವಂತ ಬಾಲ ಕ್ರೀಡಾಪಟು ಕವಿತಾ ಜ್ಯೋತಿ ವಿದ್ಯಾಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.
ಅಜೆಕಾರು ಗ್ರಾಮದ ದೆಪ್ಪುತ್ತೆ ಸುಕೇಶ್ ನಿಲಯದ ಬಾಲಕೃಷ್ಣ ಕುಲಾಲ್- ಬೇಬಿ ದಂಪತಿಯ ಸುಪುತ್ರಿಯಾದ ಕವಿತಾ ಆಟೋಟ ಸ್ಪರ್ಧೆಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಸಕ್ರಿಯವಾಗಿದ್ದರು. ಅಜೆಕಾರು ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಜ್ಯೋತಿ ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವ ವೇಳೆಯೇ ಜಿಲ್ಲಾ ಮಟ್ಟ, ತಾಲೂಕು, ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ, ಪುರಸ್ಕಾರ ಗೆದ್ದಿದ್ದಾಳೆ. ಇದರಿಂದಾಗಿಯೇ ಬಡಕುಟುಂಬದ ಈಕೆಗೆ ಪ್ರಸ್ತುತ ಕ್ರೀಡಾ ಕೋಟಾದಲ್ಲಿ ಶಿಕ್ಷಣ ಪಡೆಯುವ ಅವಕಾಶ ಲಭಿಸಿದೆ.
2014ರಿಂದ 2017 ರವರೆಗೆ ಉಡುಪಿ ಜಿಲ್ಲೆಯಿಂದ ಕಬಡ್ಡಿಯಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ದೇಶಾದ್ಯಂತ ಕ್ರೀಡಾ ಪ್ರತಿಭಾನ್ವೇಷಣೆಗಾಗಿ ಕೇಂದ್ರ ಸರ್ಕಾರ ಘೋಷಿಸಿದ್ದ ‘ಖೇಲೋ ಇಂಡಿಯಾ ’ 2016ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 17 ವರ್ಷದೊಳಗಿನ ಹುಡುಗಿಯರ ಒಳಗಿನ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ನಡೆದ ಕ್ಯಾ೦ಪ್ ನಲ್ಲಿ ವಿವಿಧ ಜಿಲ್ಲೆಗಳ ೨೫ ಮಂದಿ ಸ್ಪರ್ಧಿಗಳಲ್ಲಿ ಕರ್ನಾಟಕ ರಾಜ್ಯ ಕಬಡ್ಡಿ ತಂಡಕ್ಕೆ ೧೨ ಮಂದಿ ಆಯ್ಕೆಯಾಗಿದ್ದು, ಇವರಲ್ಲಿ ಕವಿತಾ ಕೂಡ ಒಬ್ಬರು. ಆ ಮೂಲಕ ಒರಿಸ್ಸಾದಲ್ಲಿ ನಡೆಯುವ 44ನೇ ರಾಷ್ಟ್ರೀಯ ಜ್ಯೂನಿಯರ್ಸ್ ಕ್ರೀಡಾಕೂಟದಲ್ಲಿ ಆಡುವ ಸುವರ್ಣ ಅವಕಾಶ ಈಕೆಗೆ ಲಭಿಸಿದೆ.
ಕಬಡ್ಡಿಯಲ್ಲಿ ಕವಿತಾರಿಗಿದ್ದ ಅಪಾರ ಆಸಕ್ತಿಯನ್ನು ಗಮನಸಿದ ದೈಹಿಕ ಶಿಕ್ಷಕರಾದ ಚೇತನ್ ಕುಮಾರ್ ಹಾಗೂ ರಮೇಶ್ ಸುವರ್ಣ ಈ ಕ್ರೀಡೆಯಲ್ಲಿ ಮುಂದುವರೆಯಲು ಬೇಕಾದ ಮಾರ್ಗದರ್ಶನ ಮಾಡುತ್ತಿದ್ದಾರೆ. ಈಕೆಯ ಪ್ರತಿಭೆಯನ್ನು ಕಾರ್ಕಳ ಕುಲಾಲ ಸಂಘ ಗುರುತಿಸಿ ಸನ್ಮಾನಿಸಿದೆ.
ಅಪ್ಪಟ ದೇಶಿಯ ಕ್ರೀಡೆಯಾದ ಕಬಡ್ಡಿಗೆ ಈಗ ಸುವರ್ಣ ಕಾಲ. ಟಿ.ವಿಯ ಮುಂದೆ ಕುಳಿತು ಕಬಡ್ಡಿಯ ರೋಮಾಂಚನ ಕ್ಷಣಗಳನ್ನು ನೋಡುವಾಗ ಮೈ ಜುಂ ಎಂದೆನಿಸುವುದು ಸುಳ್ಳಲ್ಲ. ಈ ಪಂದ್ಯಗಳಲ್ಲಿ ಭಾಗವಹಿಸಲು ಅಪಾರ ಶ್ರಮ, ಕಠಿಣ ಅಭ್ಯಾಸ ಬೇಕು. ಕಡುಬಡತನದಲ್ಲಿ ಆ ಮಹತ್ವದ ಗುರಿ ಸಾಧಿಸಬೇಕೆಂಬ ಆಸೆ ಕನಸಿನೊಂದಿಗೆ ಕವಿತಾ ಈ ದಿಸೆಯಲ್ಲಿ ಮುಂದುವರಿಯುತ್ತಿದ್ದಾಳೆ. ಈಕೆಯ ಕ್ರೀಡಾ ಪಯಣಕ್ಕೆ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಶುಭ ಕೋರುತ್ತದೆ.
ಚಿತ್ರ-ಮಾಹಿತಿ: ಚೇತನ್ ಕುಮಾರ್ ಅಜೆಕಾರ್