ಕಾಪು(ಡಿ.೦೧, ಕುಲಾಲ್ ವರ್ಲ್ಡ್ ನ್ಯೂಸ್) :ಅದೊಂದು ಚಿಕ್ಕ ಸಂಸಾರ ತನ್ನ ತಾಯಿ,ತನ್ನ ಎರಡು ಹೆಣ್ಣು ಮಕ್ಕಳು ಪತ್ನಿ ಅಮಿತಾರೊಂದಿಗೆ ಸುಖೀ ಸಂಸಾರ…ಇದೀಗ ಇಲ್ಲಿ ನಿತ್ಯವೂ ನೋವನ್ನ ನುಂಗಿ ಕುಳಿತ ಕುಟುಂಬ.. ಇದು ಕಾಪು ಸಮೀಪದ ಮಣಿಪುರ ಕಲ್ಮಂಜೆ ನಿವಾಸಿ ಶಾಂತ ಮೂಲ್ಯರ ಬದುಕಿನ ದುರಂತ ಕಥೆ..
ಕೆಳವರ್ಗ ಮಧ್ಯಮ ವರ್ಗವೆಂದು ಗುರುತಿಸಲ್ಪಟ್ಟ ಸಮಾಜದ ಎಲ್ಲಾ ವರ್ಗಗಳು ಆರ್ಥಿಕ ಸಬಲತೆಯತ್ತ ದೃಢ ಹೆಜ್ಜೆಯೂರುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಶಾಂತ ಮೂಲ್ಯರ ಬದುಕಿನ್ನೂ ಆರಕ್ಕೇರದ ಮೂರಕ್ಕಿಳಿಯದ ತ್ರಿಶಂಕು ಸ್ಥಿತಿಯಲ್ಲಿದೆ. ಬದುಕಿನುದ್ದಕ್ಕೂ ತಂದೆ-ತಾಯಿ ಒಡಹುಟ್ಟಿದವರನ್ನು ಬಡತನ ಸಂಕೋಲೆಯಿಂದ ಬಂಧಮುಕ್ತ ಮಾಡುವ ಪಣ ತೊಟ್ಟ ಮುಂಬೈ ಎಂಬ ಅದೃಷ್ಟ ನಗರಿಯಲ್ಲಿ ಹಗಳಿರುಳೆನ್ನದೆ ಕಠಿಣ ಪರಿಶ್ರಮದ ದುಡಿಮೆಯು ತನ್ನವರ ಉನ್ನತಿಗೆ ಮೆಟ್ಟಿಲುಗಳಾದವೇ ವಿನಃ ಶಾಂತ ಮೂಲ್ಯರ ಭವಿಷ್ಯಕ್ಕೆ, ಆರೋಗ್ಯಕ್ಕೆ ಯಾವ ಭದ್ರತೆಯನ್ನು ಕಲ್ಪಿಸಿಕೊಡಲಿಲ್ಲ.
ತನ್ನ ಮುಂದಿದ್ದ ನಿರ್ದಿಷ್ಟ ಗುರಿ ತಲುಪಿಯಾಯಿತು ಅನ್ನುವಾಗಲೇ ಶಾಂತ ಮೂಲ್ಯರಿಗೆ ತನಗೂ ಒಂದು ಬದುಕಿದೆ ಒಂದು ಕನಸಿದೆ ಅನ್ವೋ ನೆನಪಿಗೆ ಬಂದಿದ್ದು. ಕರಗಿ ಹೋದ ಕನಸಿನೆಡೆಯಿಂದ ಉದುರಿ ಚದುರಿದ ಬಯಕೆಗಳ ಹೆಕ್ಕಿ ಕಟ್ಟಿದ ಆಶಾಗೋಪುರದ ಒಡತಿಯಾದವರು ಅಮಿತಾ. ಅಲ್ಲಿಂದ ಜೀವನದ ಎರಡನೇ ಅಧ್ಯಾಯ ಪ್ರಾರಂಭ. ದಿನ ಬೆಳಗಾದರೆ ಸಮಸ್ಯೆಗಳ ಗೂಡಾದ ಮನಸ್ಸು , ಪರಿಹಾರ ಕಾಣದ ನೂರೊಂದು ಪ್ರಶ್ನೆಗಳ ಹಪಾಹಪಿ, ಅಪ್ಯಾಯತೆ, ಆತ್ಮೀಯತೆಯ ಒಂದು ಸಾಂತ್ವನ ನುಡಿಯಿಲ್ಲದೆ ನೊಂದು ಬೆಂದು ಬೆಂಗಾಡದ ಹೃದಯದಲ್ಲಿ ಪ್ರೀತಿಯ ಸೆಲೆಯೊಂದು ಸ್ಪುರಿಸಿದ್ದು ಮಡದಿ ಅಮಿತಾರವರ ಸಾಂಗತ್ಯದಿಂದ. ದಾಂಪತ್ಯ ಜೀವನದ ಫಲಶ್ರುತಿಯಾದ ಎರಡು ಪುಟ್ಟ ಮಕ್ಕಳ ಕಿಲ ಕಿಲ ನಗು ಶಾಂತ ಮೂಲ್ಯರಲ್ಲಿ ಮತ್ತಷ್ಟು ಗಂಭೀರತೆಯನ್ನು ಜವಾಬ್ದಾರಿಯನ್ನು ಹೆಚ್ಚಿಸಿದ ಕ್ಷಣ. ಮುಂಬೈಯ ಪಾನ್ ಬೀಡಾ ಅಂಗಡಿಗೆ ವಿದಾಯ ಹೇಳಿ ಊರಲ್ಲಿ ಕ್ಯಾಂಟೀನ್ ಒಂದನ್ನು ನಡೆಸುತ್ತಾ ಮಿತ ಆದಾಯದಲ್ಲಿ ಉತ್ತಮ ಜೀವನದ ಅಮಿತ ಕನಸುಗಳ ಹಣೆಯ ತೊಡಗಿದರು ಶಾಂತ ಮೂಲ್ಯರು. ಎಲ್ಲವೂ ಚೆನ್ನಾಗಿದೆ ಅನ್ನುವಾಗಲೇ ಒಂದು ದಿನ ಕಾಡಿದ ಅನಾರೋಗ್ಯ ಸಮಸ್ಯೆಯು ನಿತ್ಯ ನಿರಂತರವಾದ ಪರಿಣಾಮದ ಗಂಭೀರತೆ ಎಷ್ಟಿತ್ತೆಂದರೆ ಅದು ಶಾಂತ ಮೂಲ್ಯರ ಬದುಕನ್ನೇ ಆಪೋಶನ ತೆಗೆದು ಕೊಂಡಿತ್ತು. ತನ್ನೆರಡು ವೈಫಲ್ಯಗೊಂಡ ಕಿಡ್ನಿಗಳಿಗಾಗಿ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಬೇಕಾದ ಅನಿವಾರ್ಯತೆಯಷ್ಟು .
ಒಡ ಹುಟ್ಟಿದ ತಂಗಿಯರ ಮದುವೆ ತಮ್ಮಂದಿರ ಓದಿಗಾಗಿ ಮನೆಯ ಹಿರಿ ಮಗನಾಗಿ ಜವಾಬ್ದಾರಿ ಹೊತ್ತು ತನ್ನ ಬದುಕನೆಲ್ಲಾ ಸವೆದು ತನ್ನವರ ಬದುಕಿಗೆ ಸ್ಥಿರತೆ ಕಲ್ಪಿಸುವ ಧಾವಂತದಲ್ಲಿ ಹಣೆಯ ಮೇಲೆ ಮೂಡುವ ನೆರಿಗೆಗಳು, ತಲೆಯ ಮೇಲೆ ಅಲ್ಲೊಂದು ಇಲ್ಲೊಂದು ಇಣುಕುವ ಬೆಳ್ಳಿ ಕೂದಲುಗಳು ಕಣ್ಣಿಗೆ ಗೋಚರಿಸುದೇ ಇಲ್ಲ. ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಷ್ಟು ವ್ಯವಧಾನ ಇರುವುದಿಲ್ಲ. ಯಾರಾದರೂ ತೀರಾ ಆಪ್ತರು ಏನಯ್ಯಾ .. ಎಲ್ಲ ಮನೆ ಮನೆ ಅಂದ್ಕೋತಿಯಾ ನಿನಗಂತ ಏನು ಇಲ್ವಾ ಅಂತ ಪ್ರಶ್ನೆ ಹಾಕಿದಾಗ.. ನನ್ನದೇನು ? ಮನೆಯ ಹಿರಿ ಮಗನಾಗಿ ಜವಬ್ದಾರಿ ಗೌರವ ಮುಖ್ಯ, ಮತ್ತೆಲ್ಲಾ ದೇವರಿದ್ದಾನೆ ಅನ್ನೋ ಒಂದು ಕಾಣದ ಶಕ್ತಿಯ ಮೇಲಿನ ಅಚಲ ನಂಬಿಕೆಯ ಮಾತು.
ಇಂದಿನ ಶಾಂತ ಮೂಲ್ಯರ ಸ್ಥಿತಿಯಲ್ಲಿ ದಾನಿಗಳೇ ದೇವರಾಗಿದ್ದಾರೆ. ಕಾಪು ಕುಲಾಲ ಯುವ ವೇದಿಕೆಯ ವತಿಯಿಂದ ಶಾಂತ ಮೂಲ್ಯರ ಸಂಕಷ್ಟಕ್ಕೆ ಧನ ಸಹಾಯದ ಮೂಲಕ ಅವರ ದೇವರಿದ್ದಾನೆ ಅನ್ನೋ ಅಚಲ ನಂಬಿಕೆಯನ್ನು ಜೀವಂತವಿರಿಸಿ ದಾನಿ ದೇವರುಗಳ ಹುಡುಕುತ್ತಾ…
ಧನ ಸಹಾಯ ಮಾಡುವ ದಾನಿಗಳಿಗಾಗಿ ಶಾಂತ ಮೂಲ್ಯರವರ ಖಾತೆ ಸಂಖ್ಯೆ…
Shantha Moolya
SB A/c no: 01692210005756
IFSC Code : SYNB0000169
Branch:Manipura Dendoorkatte
Phone No: 8722019011