ಬೆಂಗಳೂರು(ನ.೩೦, ಕುಲಾಲ್ ವರ್ಲ್ಡ್ ನ್ಯೂಸ್): ಪಕ್ಷದಲ್ಲಿ ಉನ್ನತ ಹುದ್ದೆಯನ್ನು ನೀಡುವುದಾಗಿ ಭರವಸೆ ಕೊಟ್ಟು ತಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಆ ಬಳಿಕ ಕಡೆಗಣಿಸಿದ್ದರಿಂದ ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ಸೇರಿದ್ದೇನೆ. ಪಕ್ಷ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಶ್ರಮಿಸುವ ನಿಟ್ಟಿನಲ್ಲಿ ಅಹಿಂದ ವರ್ಗಗಳನ್ನು ಸಂಘಟಿಸುವ ಸಲುವಾಗಿ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ಅಧ್ಯಕ್ಷ ಶಿವಕುಮಾರ್ ಚೌಡಶೆಟ್ಟಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳು ಸಂದರೂ ಹಿಂದುಳಿದ ಜನಾಂಗವಾಗಿರುವ ಕುಂಬಾರರಿಗೆ ರಾಜಕೀಯವಾಗಿ ಯಾವುದೇ ರಾಜಕೀಯ ಸ್ಥಾನಮಾನ ನೀಡಿರಲಿಲ್ಲ. ಇಂಥ ಸ್ಥಿತಿಯಲ್ಲಿ ಜೆಡಿಎಸ್ ವರಿಷ್ಠರು ತನ್ನನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಇದಕ್ಕಾಗಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿಗೆ ಹೋಲಿಸಿದಲ್ಲಿ ಜೆಡಿಎಸ್ ಹಿಂದುಳಿದ ವರ್ಗಕ್ಕೆ ಎಲ್ಲಾ ಹಂತಗಳಲ್ಲಿಯೂ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಅಹಿಂದ ವರ್ಗಗಳ ಮತವನ್ನು ಒಗ್ಗೂಡಿಸುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಪ್ರವಾಸ ಕೈಗೊಂಡು ರಾಜಕೀಯವಾಗಿ ನಿರ್ಗತಿಕವಾಗಿರುವ ೯೮ ತೀರಾ ಹಿಂದುಳಿದ ಸಮುದಾಯಗಳನ್ನು ಗುರುತಿಸಿ ಸಂಘಟಿಸುವ ಮೂಲಕ ಪಕ್ಷವನ್ನು ಬಲಗೊಳಿಸಲಾಗುವುದು ಎಂದು ಅವರು ವಿವರಿಸಿದರು.
ನಂಬಿಸಿ ಕೈಕೊಟ್ಟ ಕಾಂಗ್ರೆಸ್-ಬಿಜೆಪಿ :
ಕಾಂಗ್ರೆಸ್ ನಲ್ಲಿದ್ದ ಸಂದರ್ಭದಲ್ಲಿ ನನಗೆ ಬಿಎಂಟಿಸಿ ನಿರ್ದೇಶಕ ಹುದ್ದೆಯನ್ನು ಪ್ರಕಟಿಸಲಾಗಿತ್ತು. ಆದರೆ ಬಳಿಕ ಕ್ಷುಲ್ಲಕ ನೆಪ ನೀಡಿ ಮೂರೇ ದಿನದಲ್ಲಿ ಅದನ್ನು ಕಸಿದುಕೊಳ್ಳಲಾಯಿತು. ಆದರೂ ಇದನ್ನು ಸಹಿಸಿಕೊಂಡು ಪಕ್ಷದಲ್ಲಿ ಮುಂದುವರಿದೆ. ಸಾಕಷ್ಟು ಒತ್ತಡದ ಬಳಿಕ ಕುಂಬಾರ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷನನ್ನಾಗಿ ನೇಮಕ ಮಾಡಲಾಯಿತು. ಈ ಮಂಡಳಿ ದೇವರಾಜ ಅರಸು ನಿಗಮದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ವಶ್ವಕರ್ಮ ಅಭಿವೃದ್ಧಿ ನಿಗಮ ಮಾದರಿಯಲ್ಲಿ ಪ್ರತ್ಯೇಕಿಸಿ ಕುಂಬಾರರ ಅಭಿವೃದ್ಧಿ ನಿಗಮ ಮಾಡಿ , ಸಾಕಷ್ಟು ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಲಾಯಿತು. ಆದರೆ ನಮ್ಮ ಯಾವ ಬೇಡಿಕೆಯನ್ನು ಅವರು ಪೂರೈಸಲಿಲ್ಲ. ನಾಮಕಾವಸ್ತೆಗೆ ಅಧ್ಯಕ್ಷತೆ ನೀಡಿದ್ದರಿಂದ ಬೇಸತ್ತಿದ್ದಾಗ, ಮಾಜಿ ಸೀಎಂ ಯಡಿಯೂರಪ್ಪ ಅವರು ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡುವ ಭರವಸೆ ನೀಡಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಕೆ.ಪಿ ನಂಜುಂಡಿಯಂತೆ ಉನ್ನತ ಸ್ಥಾನ ನೀಡುವುದಾಗಿ ತಿಳಿಸಿದ್ದ ಅವರು, ನಂತರ ವಿವಿಧ ನೆಪ ನೀಡಿ ಕೈಕೊಟ್ಟರು. ಅಹಿಂದ ವರ್ಗಕ್ಕೆ ಪಕ್ಷದಲ್ಲಿ ಯಾವ ಸ್ಥಾನಮಾನವನ್ನೂ ಪಕ್ಷ ಕಲ್ಪಿಸಲಿಲ್ಲ ಎಂದು ಚೌಡಶೆಟ್ಟಿ ದೂರಿದರು.
ಜೆಡಿಎಸ್ ನಿಂದ ಭರವಸೆ :
ರಾಜಕೀಯ ಪಕ್ಷಗಳು ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮಾತ್ರ ಕುಂಬಾರ ಸಮುದಾಯದಂಥ ಹಿಂದುಳಿದ ವರ್ಗವನ್ನು ಬಳಸಿಕೊಂಡು, ಅಧಿಕಾರ ನೀಡುವ ವೇಳೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಇಂಥ ಸಂದರ್ಭದಲ್ಲಿ ಜೆಡಿಎಸ್ ಹೊಸ ಆಶಾಕಿರಣವಾಗಿದ್ದು, ನಮ್ಮ ಸಂಕಷ್ಟವನ್ನು ಸ್ವತಃ ತಿಳಿದ ದೇವೇಗೌಡ ಅವರು, ಕುಂಬಾರ ಸಮುದಾಯ ದೈವಾಂಶ ಸಂಭೂತವಾದ ಸಮುದಾಯ. ಇಂತಹ ಸಮುದಾಯಕ್ಕೆ ಅನ್ಯಾಯ ಸಲ್ಲದು ಎಂಬ ನಿಟ್ಟಿನಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿ ಬೆಂಬಲ ಸೂಚಿಸಿದ್ದಾರೆ. ಸಂಘದ ಪರವಾಗಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಡಿಸೇಂಬರ್ ೧೫ರಂದು ಬೆಂಗಳೂರು ಟೌನ್ ಹಾಲ್ ನಲ್ಲಿ ಸನ್ಮಾನ ಮಾಡಲಾಗುವುದು ಎಂದು ಶಿವಕುಮಾರ್ ಚೌಡಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕುಂಬಾರ ಮಹಾ ಸಂಘದ ಉಪಾಧ್ಯಕ್ಷ ಕೆ. ಮುನಿಯಪ್ಪ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ, ವೆಂಕಟರಾಜು, ಮತ್ತು ರಾಜಣ್ಣ ಅವರು ಉಪಸ್ಥಿತರಿದ್ದರು.