ಬೆಂಗಳೂರು(ನ.೨೯, ಕುಲಾಲ್ ವರ್ಲ್ಡ್ ನ್ಯೂಸ್): ಸ್ವಂತ ಸೂರು ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಕುಂಬಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಪುರಭವನದ ಎದುರು ಸೇರಿದ್ದ ಪ್ರತಿಭಟನಾಕಾರರು, ಮಣ್ಣಿನ ಮಡಿಕೆಗಳನ್ನು ಪ್ರದರ್ಶಿಸಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಬಳಿಕ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಂಘದ ಸಂಸ್ಥಾಪಕ ಎ.ಜಿ.ನಾಗೇಶ್ ಮಾತನಾಡಿ, ‘ಕುಂಬಾರರು ಜೀವನಾಧಾರಕ್ಕಾಗಿ ಮಣ್ಣಿನ ಮಡಿಕೆ ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಆಧುನಿಕ ಯುಗದ ಬದುಕು ಅವರ ವೃತ್ತಿಯನ್ನು ಸರ್ವನಾಶ ಮಾಡಿದೆ. ಕುಂಬಾರರ ಕುಟುಂಬಗಳು ಬೀದಿಗೆ ಬಂದಿವೆ’ ಎಂದರು. ‘ನಗರ ಹಾಗೂ ಹಳ್ಳಿಗಳಲ್ಲಿ ಸಾಕಷ್ಟು ಕುಂಬಾರರಿಗೆ ವಾಸಿಸಲು ಮನೆಗಳಿಲ್ಲ. ಅವರಿಗೆ ನಿವೇಶನ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕಷ್ಟದಲ್ಲಿರುವ ಕುಂಬಾರರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಮೀಸಲಾತಿ ನೀಡಬೇಕು’ ಎಂದರು.
ಕಾರ್ಯದರ್ಶಿ ಮಂಜುನಾಥ್ ದ್ಯಾವಪಟ್ಟಣ ಮಾತನಾಡಿ, ಕುಂಬಾರರಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿಬೇಕು ಎಂದು ಒತ್ತಾಯಿಸಿದರು.