ಚಿತ್ರದುರ್ಗ(ನ.೨೪, ಕುಲಾಲ್ ವರ್ಲ್ಡ್ ನ್ಯೂಸ್) : ಸಾಮಾಜಿಕವಾದ ಬದ್ಧತೆಯನ್ನು ಮುಂದಿಟ್ಟುಕೊಂಡು ಬಸವಾದಿ ಶರಣರ ಮೌಲ್ಯಗಳನ್ನು ಆದರ್ಶಗಳನ್ನು ತೆಗೆದುಕೊಂಡು ಹೋಗಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರಕ್ಕೆ ಹೊಂದಿಕೊಂಡಂತೆ ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಇರುವ ಕುಂಬಾರ ಗುಂಡಯ್ಯ ಗುರುಪೀಠದಲ್ಲಿ ನಡೆದ ನೂತನ ಶ್ರೀಗಳಿಗೆ ಸಮಾಜಸೇವಾ ದೀಕ್ಷೆ ನೀಡಿ ಮಾತನಾಡಿದ ಶ್ರೀಗಳು, ೨೦ನೇ ಶತಮಾನದ ಅಂತ್ಯದಲ್ಲಿ ೨೧ನೇ ಶತಮಾನದ ಆರಂಭದಲ್ಲಿಯೂ ಬಸವಾದಿ ಶರಣರ ಹೆಜ್ಜೆಯನ್ನು ನೆನಪಿಸುವಂತಹ, ಅನುಷ್ಠಾನಗೊಳಿಸುವಂತಹ, ಅನುಸರಿಸುವಂತಹ ಕಾರ್ಯಗಳು ಐತಿಹಾಸಿಕ ಮಠವಾಗಿರುವ ಶ್ರೀಮುರುಘರಾಜೇಂದ್ರ ಮಠದ ಮೂಲಕ ಸಾಕಾರಗೊಳಿಸುತ್ತಿವೆ ಎಂದು ಹೇಳಲು ಸಂತೋಷವಾಗುತ್ತಿದೆ. ಮುರುಘಾ ಶರಣರು ಬರುವುದಕ್ಕಿಂತ ಮೊದಲು ಮಠ ಇತ್ತು, ಮುಂದೆಯೂ ಇರುತ್ತದೆ. ಆದರೆ ಬಸವಣ್ಣನವರ ತತ್ತ್ವಾದರ್ಶಗಳನ್ನು ಚಾಚೂತಪ್ಪದೇ ಅನುಸರಿಸುತ್ತಿವೆ.
ಬಸವಣ್ಣನವರ ಜೊತೆಯಲ್ಲಿ ಕುಲಹದಿನೆಂಟು ಜಾತಿಗಳು ಇದ್ದವು. ೨೧ನೇ ಶತಮಾನದಲ್ಲಿ ಶ್ರೀಮಠವು ೧೮ ಜಾತಿಗಳನ್ನು ಗುರುತಿಸುವ ಕೆಲಸ ಮಾಡಿದೆ. ಅವರಲ್ಲಿಯೇ ಉತ್ತಮ ಸಂಸ್ಕಾರ ಸಂಸ್ಕೃತಿ ಇರುವಂತಹ ವ್ಯಕ್ತಿಯನ್ನು ಗುರುತಿಸಿ, ಅವರಿಗೆ ಶಿಕ್ಷಣ ನೀಡಿ ಪರಮಾರ್ಥ ಚಿಂತನೆ ನೀಡಿ ಅದರೊಟ್ಟಿಗೆ ಕಾವಿದೀಕ್ಷೆ ಲಾಂಛನದೊಂದಿಗೆ ಸಮಾಜ ಸೇವಾ ದೀಕ್ಷೆಯನ್ನು ನೀಡಿ ಸಣ್ಣಪುಟ್ಟ ಸಮುದಾಯಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕು, ಸಂಸ್ಕಾರದಲ್ಲಿ ಎಲ್ಲಿಯೂ ಹಿಂದೆಬೀಳದೆ ಮುಂದುವರಿಯಬೇಕೆಂದು ನಾವುಗಳು ದೀಕ್ಷೆ ನೀಡಿದ್ದೇವೆ ಎಂದರು.
ಕುಂಬಾರ ಸಮಾಜವು ಉತ್ತಮ ಕಾಯಕ ಮಾಡುವಂತ ಸಮುದಾಯ. ಅವರು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಕರ್ನಾಟಕ ಹೊರತುಪಡಿಸಿ ಇತರೆಡೆಯೂ ಕುಂಬಾರ ಸಮುದಾಯವರು ಇದ್ದಾರೆ. ಅಂತಹವರನ್ನು ಕರೆದುಕೊಂಡು ಬಂದರೆ ಅಲ್ಲಿಯೂ ಪೀಠ ಸ್ಥಾಪನೆ ಮಾಡಿಸಿ ಸಮುದಾಯ ಉದ್ಧಾರಕ್ಕೆ ಶ್ರಮಿಸುವ ಕೆಲಸ ಮಾಡೋಣ ಎಂದು ಹೇಳಿದರು.
ದಾವಣಗೆರೆಯ ಶ್ರೀ ಬಸವಪ್ರಭು ಸ್ವಾಮಿಗಳು, ಮೇದಾರ ಗುರುಪೀಠದ ಸ್ವಾಮಿಗಳು, ಗೌರವಾಧ್ಯಕ್ಷ ಏಕಾಂತಪ್ಪ, ಅಧ್ಯಕ್ಷರಾದ ನರಸಿಂಹಪ್ಪ, ಕಾರ್ಯದರ್ಶಿ ಮೃತ್ಯುಂಜಯ, ಡಿ.ತಿಪ್ಪೇಸ್ವಾಮಿ, ಎನ್. ಚಂದ್ರಶೇಖರ್, ಕೆ.ಟಿ.ರಮೇಶ್, ಎಸ್.ಹನುಮಂತಪ್ಪ, ಉಪಾಧ್ಯಕ್ಷರಾದ ಈರಯ್ಯ ಹಾಗೂ ಸಮಾಜದ ಮುಖಂಡರುಗಳು ಇದ್ದರು.