ಮಂಗಳೂರು(ನ.೧೯, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಪೋಷಕರು, ಶಿಕ್ಷಕರು ಮಕ್ಕಳಲ್ಲಿ ಚಿಕ್ಕಂದಿನಲ್ಲಿಯೇ ಕ್ರೀಡಾ ಮನೋಭಾವ ಬೆಳೆಸಿ, ಪ್ರೋತ್ಸಾಹಿಸಿದರೆ ಅವರಲ್ಲಿ ಅಡಗಿರುವ ಸ್ತುಪ್ತ ಪ್ರತಿಭೆ ಹೊರಬಂದು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಹೀಗೆ ಬಾಲ್ಯದಲ್ಲೇ ವಾಲಿಬಾಲ್ ಕ್ರೀಡೆ ಬಗ್ಗೆ ಆಸಕ್ತಿ ರೂಢಿಸಿಕೊಂಡು ರಾಷ್ಟ್ರೀಯ ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಗೆದ್ದ ಬಾಲ ಪ್ರತಿಭೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಸೌರವ್ ಕುಲಾಲ್.
ಉರ್ವಾಸ್ಟೋರ್ ನಿವಾಸಿ ಪರಮೇಶ್ವರ್ ಕುಲಾಲ್ ಹಾಗೂ ರಮಾ ದಂಪತಿಗಳ ಸುಪುತ್ರನಾದ ಸೌರವ್ ಮೂರನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ಕ್ರೀಡಾ ತರಬೇತುದಾರ ನಾಗೇಶ್ ಕುಲಾಲ್ ಅವರ ಕಣ್ಣಿಗೆ ಚುರುಕು ವ್ಯಕ್ತಿತ್ವದ ಸೌರವ್ ಬಿದ್ದಿದ್ದ. ಚೆಂಡಿನ ಜೊತೆ ಆಟವಾಡುತ್ತಿದ್ದ ಈತನಲ್ಲಿ ವಿಶೇಷ ಪ್ರತಿಭೆಯೊಂದು ಅಡಗಿರುವುದನ್ನು ಗುರುತಿಸಿದ ನಾಗೇಶ್ ಅಂದಿನಿಂದಲೇ ಆತನಿಗೆ ವಾಲಿಬಾಲ್ ಕಲಿಯಲು ಪ್ರೇರೇಪಿಸಿದರು. ಹೀಗೆ ವಾಲಿಬಾಲ್ ನಲ್ಲಿ ಪರಿಣತಿಯನ್ನು ಪಡೆದ ಸೌರವ್ ಶಾಲಾ ಕ್ರೀಡೋತ್ಸವದಲ್ಲಿ ಯಾವಾಗಲೂ ಮುಂದಿರುತ್ತಿದ್ದ.
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆಸಲ್ಪಟ್ಟ ಅನೇಕ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿದ್ದ ಸೌರವ್, ತನ್ನ ಹೈಸ್ಕೂಲ್ ವಿದ್ಯಾಭ್ಯಾಸದ ಆರಂಭದಲ್ಲೇ ಅಂದರೆ, ೨೦೧೩ನೇ ಇಸವಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ೧೪ ವರ್ಷದೊಳಗಿನ ಮಕ್ಕಳ 59ನೇ ರಾಷ್ಟ್ರೀಯ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಿ ಗಮನ ಸೆಳೆಯುವ ಆಟವಾಡಿ ಸೈ ಎನಿಸಿಕೊಂಡಿದ್ದ. 2015ರ ಡಿಸೇಂಬರ್ ನಲ್ಲಿ ಅಲಹಾಬಾದ್ ನಲ್ಲಿ ಜರುಗಿದ ರಾಷ್ಟ್ರೀಯ ಸಬ್ ಜೂನಿಯರ್ ವಿಭಾಗದ ಪಂದ್ಯಾವಳಿಯಲ್ಲೂ ಅಮೋಘ ಪ್ರದರ್ಶನ ನೀಡಿ ಪ್ರಶಸ್ತಿ ಪತ್ರ ಪಡೆದಿದ್ದಾನೆ.
ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಸೌರವ್, ಇದೇ ವರ್ಷದ ಆರಂಭದಲ್ಲಿ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾ ಅವರು ನಡೆಸಿದ ರಾಷ್ಟ್ರೀಯ ಮಟ್ಟದ ಪಂದ್ಯಾಟದಲ್ಲಿ ಕಾಲೇಜನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಗೆದ್ದಿದ್ದಾನೆ. ೧೭ ವರ್ಷದೊಳಗಿನ ವಯಸ್ಸಿನ 61ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಷಿಪ್ ನಲ್ಲೂ ಭಾಗವಹಿಸಿರುವ ಸೌರವ್ ನ ಇತ್ತೀಚಿನ ಸಾಧನೆ ಎಂದರೆ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ನಡೆಸಿದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಗೆಲ್ಲುವ ಮೂಲಕ ಮುಂದಿನ ಡಿಸೇಂಬರ್ ನಲ್ಲಿ ನಂಜನಗೂಡಿನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಕ್ಕೆ ಆಯ್ಕೆ ಆಗಿರುವುದು.
ಮುಂದೊಂದು ದಿನ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿರುವ ಸೌರವ್. ”ಆಟದಲ್ಲಿ ನಾನಿನ್ನು ಕಲಿಯಬೇಕಾಗಿರುವುದು ಸಾಕಷ್ಟು ಇದೆ. ತನ್ನ ಪೋಷಕರು, ತರಬೇತುದಾರರು ಹಾಗೂ ಕಾಲೇಜಿನಲ್ಲಿ ಇದಕ್ಕೆ ತಕ್ಕ ಬೆಂಬಲ ಸಿಗುತ್ತಿದೆ. ಆದ್ದರಿಂದ ಮುಂದೊದು ದಿನ ದೇಶವನ್ನು ಪ್ರತಿನಿಧಿಸುತ್ತೇನೆಂಬ ಆತ್ಮವಿಶ್ವಾಸವಿದೆ. ನನ್ನ ಗುರುಗಳಾದ ನಾಗೇಶ್ ಕುಲಾಲ್ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಿಂದಾಗಿ ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದೇನೆ,” ಎಂದು ಸೌರವ್ ಆತ್ಮವಿಶ್ವಾಸದಲ್ಲಿ ನುಡಿಯುತ್ತಾರೆ. ಸೌರವ್ ಅವರ ಹಿರಿಯ ಸಹೋದರಿ ಸ್ವಾತಿ ಕುಲಾಲ್ ಅವರೂ ಕೂಡಾ ಉತ್ತಮ ವಾಲಿಬಾಲ್ ಕ್ರೀಡಾ ಪಟುವಾಗಿದ್ದು, ಈಕೆಯೂ ರಾಜ್ಯ-ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಿದ ಹಿರಿಮೆ ಹೊಂದಿದ್ದಾಳೆ.
ಚಿತ್ರ-ಮಾಹಿತಿ : ಹೇಮಂತ್ ಕುಮಾರ್ ಕಿನ್ನಿಗೋಳಿ






