ಬಂಟ್ವಾಳ :(ನ.೧೫, ಕುಲಾಲ್ ವರ್ಲ್ಡ್ ನ್ಯೂಸ್): ಗುಳಿಬಿದ್ದ ಕಂಗಳೊಳಗೆ ಬತ್ತಿದೆ ಕಣ್ಣೀರು. ಸುಕ್ಕುಗಟ್ಟಿ ಕಾಂತಿಹೀನವಾದ ಚಹರೆ, ಕೃಶಕಾಯ ದೇಹವೆಲ್ಲಾ ಎಲುಬುಗಳ ಹಂದರ. ಸ್ಪರ್ಶ ಜ್ಞಾನವಿಲ್ಲದೆ ನಿಸ್ತೇಜಗೊಂಡ ಅಂಗಾಂಗ. ಅರೆಕ್ಷಣಕೊಮ್ಮೆ ಚಲಿಸುವ ಕಣ್ರೆಪ್ಪೆ ಉಸಿರಾಟದ ಪ್ರಕ್ರಿಯೆಯಲ್ಲಿ ಏರಿಳಿತಗೊಳ್ಳುವ ಹೃದಯದ ಬಾಗವಷ್ಟೇ ಆ ಜೀವವಿನ್ನೂ ಬದುಕಿಗಾಗಿ ಪರಿತಪಿಸುತಿದೆ, ಒಂದು ಭರವಸೆಯ ಸಾಂತ್ವನದ ನುಡಿಗಾಗಿ , ಆತ್ಮಸ್ಥೈರ್ಯ ತುಂಬುವ ಸಹೃದಯಿ ಮನಸುಗಳ ಕಾಣುವ ಚಡಪಡಿಕೆ ಕಾತರತೆ ಇನ್ನೂ ಬಾಳಿನಲ್ಲಿ ಹೊಸಬೆಳಕಿನ ನಿರೀಕ್ಷೆಯಂತೆ. ನಲವತೈದರ ಹರೆಯದ ಶರೀರವು ಎಂಬತ್ತೈದರ ಮುಪ್ಪಿನ ಹೊಸ್ತಿಲಲಿ ನಿಂತಂತೆ ಭಾಸವಾಗುವ ಹೇಮಾವತಿ ಮೂಲ್ಯರ ಕರುಣಾಜನಕ ಶೋಚನೀಯ ಸ್ಥಿತಿ ಎಂತಹ ಕಠೋರ ಹೃದಯಿಗಳ ಕಣ್ಣಂಚನ್ನು ಒದ್ದೆಯಾಗಿಸುವಂತದ್ದು. ಇದು ಬಂಟ್ವಾಳ ತಾಲ್ಲೂಕಿನ ಗುಂಡೂರಿ ಗ್ರಾಮದ ಪಾದೆಗುರಿಯ ಪಾರ್ಶ್ವವಾಯು ಪೀಡಿತ ಹೇಮಾವತಿ ಮೂಲ್ಯರ ದುರಂತ ಬದುಕಿನ ಕಿರು ಚಿತ್ರಣ.
ಕುಲಾಲ ಛಾವಡಿ ವಾಟ್ಸಪ್ ಬಳಗದ ಮುಖಾಂತರ ಹೇಮಾವತಿ ಮೂಲ್ಯರ ಸಂಕಷ್ಟಕ್ಕೆ ಧನ ಸಹಾಯದ ಮೂಲಕ ಸಹಕರಿಸಲು ಛಾವಡಿ ಬಾಂಧವರಲ್ಲಿ ಮತ್ತು ಸಮಸ್ತ ಕುಲಾಲ ಬಾಂಧವರಲ್ಲಿ ವಿನಂತಿ ಮಾಡಲಾಗಿತ್ತು. ಕುಲಾಲ ಛಾವಡಿಯ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಹೃದಯಿ ಬಂಧುಗಳ ಸಹಕಾರ ಮತ್ತು ಮಾತೃ ಸಂಘ ಮಂಗಳೂರು ಮತ್ತು ಕುಲಾಲ ಸಂಘ ಹೊಕ್ಕಾಡಿಗೋಳಿ ಇದರ ಸಹಕಾರದಿಂದ ಒಟ್ಟುಗೂಡಿದ ₹ 19,400/- ನ್ನು ಸಂತ್ರಸ್ತರಿಗೆ ಹಸ್ತಾಂತರಿಸುವಾಗ ಕುಲಾಲ ಛಾವಡಿಯ ಅಡ್ಮಿನ್ ಸಂತೋಷ್ ಕುಲಾಲ್ ಪದವು, ಸುಧೀರ್ ಬಂಗೇರ ಕೆರ್ವಾಶೆ, ರಮೇಶ್ ಕರಿಯಕಲ್ಲು, ರಶ್ಮಿ ಕುಲಾಲ್ ಪದವು ಇವರೊಂದಿಗೆ ಕುಲಾಲ ಸಮಾಜ ಸೇವಾ ಸಂಘ (ರಿ) ಹೊಕ್ಕಾಡಿಗೋಳಿ, ಸಿದ್ಧಕಟ್ಟೆ. ಇದರ ಪದಾಧಿಕಾರಿಗಳಲ್ಲಿ ಒಬ್ಬರಾದ ಸದಾಶಿವ ಕುಲಾಲ್ ಉಳಗುಡ್ಡೆಯವರು ಜೊತೆಗೂಡಿದ್ದರು.
ಎಂಟು ತಿಂಗಳ ಹಿಂದೆ ಲವಲವಿಕೆಯಿಂದ ಮನೆತುಂಬಾ ಓಡಾಡಿಕೊಂಡು ಸಂಸಾರವನ್ನು ನಿಭಾಯಿಸಲು ಸತಿ ಪತಿಯರೊಂದಾಗಿ ಬೀಡಿ ಕಟ್ಟುವ ಕಾಯಕದಲ್ಲಿ ಸುಖ ಮುಖದ ಬದುಕನ್ನು ಸಾಗಿಸುತಿದ್ದ ಹೇಮಾವತಿ ಮೂಲ್ಯರ ಬದುಕಿನ ಅನಿರೀಕ್ಷಿತ ಅವಘಡವೇ ಪಾರ್ಶ್ವವಾಯು. ಮಾರ್ಗದರ್ಶನ ಕೊರತೆ ತಮ್ಮವರ ಸಹಕಾರವಿಲ್ಲದ ಕಾರಣ ಕ್ಲಪ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಅಮಾಯಕ ಜೀವವೊಂದು ಸಾವು ಬದುಕಿನ ನಡುವೆ ಹೋರಾಡುತಿದೆ. ಅದೆಷ್ಟೋ ಪಾರ್ಶ್ವವಾಯು ಪೀಡಿತರು ಸೂಕ್ತ ಚಿಕಿತ್ಸೆಯ ಮೂಲಕ ಗುಣಮುಖರಾದ ದೃಷ್ಟಾಂತಗಳು ನಮ್ಮ ಮುಂದಿರುವಾಗ ಇವರಿಗೆ ನೀಡಿದ ಚಿಕಿತ್ಸೆಯಲ್ಲಿ ಗುಣವಾಗದಿರುವ ಕಾರಣ ಇನ್ನು ಸ್ಪಷ್ಟವಾಗಿ ಅವರನ್ನು ಉಪಚರಿಸುವ ಮಕ್ಕಳಿಗೆ ತಿಳಿದಿಲ್ಲ. ಹಲವಾರು ಸಂಘ ಸಂಸ್ಥೆಗಳ ಕದ ತಟ್ಟುವ ಮೂಲಕ ದೊರೆತ ಕಿಂಚಿತ್ ಸಹಕಾರದೊಂದಿಗೆ ಅಮ್ಮನೆಂಬ ಅನರ್ಘ್ಯ ರತ್ನವನ್ನು ಉಳಿಸಿಕೊಳ್ಳುವ ಮಕ್ಕಳ ನಿರಂತರ ಪ್ರಯತ್ನಕ್ಕೆ ಸಹಕಾರ ಬೆಂಬಲ ಸ್ವ ಸಮಾಜ ಬಾಂಧವರ ಅನಿವಾರ್ಯವಾಗಿದೆ.
ವರದಿ: ಸತೀಶ್ ಕಜ್ಜೋಡಿ