ಶಿವಮೊಗ್ಗ(ನ.೧೫, ಕುಲಾಲ್ ವರ್ಲ್ಡ್ ನ್ಯೂಸ್): ಕುಂಬಾರ ಸಮಾಜದ ಅಭಿವೃದ್ಧಿಯಾಗಬೇಕಾದರೆ ಪ್ರತಿಯೊಬ್ಬರೂ ಅಕ್ಷರ ಜ್ಞಾನವನ್ನು ಪಡೆಯಬೇಕು ಎಂದು ಚಿತ್ರದುರ್ಗ ಕುಂಬಾರ ಪೀಠದ ನಿಯೋಜಿತ ಸ್ವಾಮೀಜಿ ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾ ಕುಂಬಾರರ ಸಂಘ, ತಾಲೂಕು ಕುಂಬಾರ ಸಂಘ ಹಮ್ಮಿಕೊಂಡಿದ್ದ ಸರ್ವದಸ್ಯರ ಸಭೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜವು ಸಂಘಟನತ್ಮಕವಾಗಿ ಬಲಗೊಳ್ಳಬೇಕು. ಶೋಷಿತ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯುವ ಮೂಲಕ ಮುಖ್ಯವಾಹಿನಿಗೆ ಬರಬೇಕು. ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಂಡು ಒಗ್ಗಟ್ಟಿನೊಂದಿಗೆ ಬಾಳಬೇಕು ಎಂದರು.
ಚಿತ್ರದುರ್ಗ ವಿಶ್ವ ಕುಂಬಾರ ಗುರುಪೀಠ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ಕುಂಬಾರ ಸಮಾಜದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಐಟಿಐ ಕಾಲೇಜನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ. ಎಲ್ಲರೂ ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಬೇಕೆಂಬ ಆಶಯ ಹೊಂದಲಾಗಿದೆ ಎಂದರು.
ರಾಜ್ಯ ಕುಂಬಾರ ಮಹಾ ಸಂಘದ ಜಂಟಿ ಕಾರ್ಯದರ್ಶಿ ಎಂ.ಕೆ.ಶ್ರೀನಿವಾಸ್ ಮಾತನಾಡಿ, ಸಮಾಜದಲ್ಲಿ ಪ್ರಬಲವಾಗಿ ಗುರುತಿಸಿಕೊಳ್ಳಬೇಕಾದರೆ ಸಮಾಜಮುಖಿ ಕಾರ್ಯಗಳೊಂದಿಗೆ ಸಮುದಾಯವನ್ನು ಕಟ್ಟುವ ಕೆಲಸವಾಗಬೇಕಾಗಿದೆ. ಜತೆಗೆ ಸಮುದಾಯ ಭವನ ನಿರ್ಮಾಣಕ್ಕಾಗಿ ನಿವೇಶನ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ಜಿಲ್ಲಾ ಸಂಘದ ಅಧ್ಯಕ್ಷ ಎಸ್.ಮಣಿ, ತಾಲೂಕು ಸಂಘದ ಅಧ್ಯಕ್ಷ ಕೆ.ಜಿ. ಶಂಕರಪ್ಪ, ಉಪಾಧ್ಯಕ್ಷ ಈಶ್ವರಪ್ಪ, ಎಂ.ಕೆ. ಶ್ರೀನಿವಾಸ್, ಜಿಲ್ಲಾ ಕುಂಬಾರರ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಸರೋಜಿನಿ ಸೂರಪ್ಪ ಮತ್ತಿತರರು ಉಪಸ್ಥಿತರಿದ್ದರು.
————————————
ಮಲ್ಲಯ್ಯನಪುರ ಕುಂಬಾರ ಸಮುದಾಯ ಭವನ ಉದ್ಘಾಟನೆ
ಚಾಮರಾಜನಗರ : ಸಮುದಾಯ ಭವನಗಳನ್ನು ನಿರ್ಮಿಸಿದರೆ ಸಾಲದು, ಅವುಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಮನೋಭಾವನೆವನ್ನು ಗ್ರಾಮಸ್ಥರು ಬೆಳೆಸಿಕೊಳ್ಳಬೇಕು ಎಂದು ಸಂಸದ ಆರ್.ಧ್ರುವನಾರಾಯಣ ತಿಳಿಸಿದರು.
ತಾಲೂಕಿನ ಮಲ್ಲಯ್ಯನಪುರದಲ್ಲಿ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಕುಂಬಾರ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದ ಜನರ ಮದುವೆ, ಸಭೆ ಸಮಾರಂಭಗಳಿಗೆ ಹಾಗೂ ಇತರೇ ಆರೋಗ್ಯಕರ ಚಟುವಟಿಕೆಗಳಿಗೆ ಇಂತಹ ಸಮುದಾಯ ಭವನಗಳು ಅತ್ಯಾವಶ್ಯ. ಸರಕಾರ ಪ್ರತಿಯೊಂದು ಸಮುದಾಯದವರಿಗೂ ಭವನಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುತ್ತಿದೆ. ಅದರಂತೆ ಗ್ರಾಮಸ್ಥರು ಸಮುದಾಯ ಭವನಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಮೂಲಕ ಅವುಗಳ ಸದ್ಭಳಕೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಕುಂಬಾರ ಸಮುದಾಯದವರು ವಾಸಮಾಡುವ ನಾಗವಳ್ಳಿ, ಅಮಚವಾಡಿ, ಜೋತಿಗೌಡನಪುರ ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ಸಮುದಾಯ ಭವನಗಳು ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿಕೊಡಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ರಾಮಚಂದ್ರು, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಉಮೇಶ್, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಶಿವಣ್ಣಶೆಟ್ಟಿ, ಮುಖಂಡರಾದ ಚಾಮರಾಜು, ಮಲ್ಲೇದೇವ್ರು, ಮಹದೇವಸ್ವಾಮಿ, ಗ್ರಾ.ಪಂ.ಸದಸ್ಯ ರಮೇಶ್, ಗೌರವಾಧ್ಯಕ್ಷ ಸೋಮಣ್ಣೇಗೌಡ, ಟಿ.ಶಿವು, ಲಿಂಗರಾಜು, ಶಿವರಾಮಶೆಟ್ಟಿ, ರಾಮಶೆಟ್ಟಿ, ಗುರುಮಲ್ಲಶೆಟ್ಟಿ, ಮಾದೇಶ್, ಜಗದೀಶ್, ನಾಗರಾಜ್, ದುಂಡೇಗೌಡ, ಕುಮಾರ್, ಮತ್ತಿತರರು ಹಾಜರಿದ್ದರು.