ಮಂಗಳೂರು(ನ.೧೪, ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಸಾಧನೆಗೆ ಬಡತನವಾಗಲಿ, ಸಿರಿತನವಾಗಲಿ ಅಡ್ಡಿಯಾಗುವುದಿಲ್ಲ. ಕಲಿಯುವ ಹಂಬಲವಿದ್ದರೆ ಎಷ್ಟೇ ಕಠಿಣವಾಗಿದ್ದರು ಸರಿ, ಏನನ್ನೂ ಕಲಿಯಬಹುದು. ಕಲಿಯುವ ಹಸಿವೇ ನಮ್ಮನ್ನು ಎತ್ತರಕ್ಕೆ ಏರಿಸುತ್ತದೆ ಎನ್ನುವುದಕ್ಕೆ ಕಿನ್ನಿಗೋಳಿ ಉಳ್ಳ೦ಜೆಯ ಅನನ್ಯಾ ಮೂಲ್ಯ ಎಂಬ ಗ್ರಾಮೀಣ ಪ್ರತಿಭೆ ಉದಾಹರಣೆಯಾಗಿದ್ದಾಳೆ.
ಎಳೆಯ ವಯಸ್ಸಿನಿಂದಲೇ ಕ್ರೀಡಾಕ್ಷೇತ್ರದಲ್ಲಿ ಒಲವನ್ನು ಬೆಳೆಸಿಕೊಂಡು ಕಠಿಣ ಶ್ರಮದೊಂದಿಗೆ ಕ್ರೀಡಾರಂಗದಲ್ಲಿ ಯಶಸ್ಸನ್ನು ಸಾಧಿಸಬಹುದು ಎನ್ನುವುದನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅನನ್ಯಾ ತೋರಿಸಿಕೊಟ್ಟಿದ್ದಾಳೆ. ಚಿಕ್ಕ ವಯಸ್ಸಿನಲ್ಲಿ ಅನನ್ಯಾಳ ಗಮನ ಸೆಳೆದದ್ದು ಬಾಲ್ ಬ್ಯಾಡ್ ಮಿಂಟನ್. ಜಿಲ್ಲೆ, ರಾಜ್ಯಮಟ್ಟದಿಂದ ಹಿಡಿದು, ರಾಷ್ಟ್ರೀಯ ಮಟ್ಟದವರೆಗೂ ಬ್ಯಾಡ್ ಮಿಂಟನ್ ಕ್ರೀಡೆಯಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದ ಈಕೆ ಉತ್ತಮ ಕ್ರೀಡಾ ಸಾಧಕಿ.
ಕಡುಬಡತನದ ಕುಟುಂಬದ ಹಿನ್ನೆಲೆಯ ಅನನ್ಯಾ ಕಿನ್ನಿಗೋಳಿ ಸಮೀಪದ ಉಳ್ಳ೦ಜೆ ಗ್ರಾಮದವಳು. ಪ್ರೈಮರಿ ಶಾಲಾ ಜೀವನದಲ್ಲಿಯೇ ಬ್ಯಾಡ್ ಮಿಂಟನ್ ಎಂಬ ಅತೀ ಅಪುರೂಪದ ಕ್ರೀಡೆ ಈ ಗ್ರಾಮೀಣ ಪರಿಸರದ ಬಡ ಕುಟುಂಬದಲ್ಲಿ ಜನ್ಮ ತಾಳಿದ ಕುವರಿಯಲ್ಲಿ ಅಡಕವಾಗಿತ್ತು.
ಈಕೆಯ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿದವರು ಪ್ರಾಥಮಿಕ ಶಾಲೆಯ ಕ್ರೀಡಾ ಶಿಕ್ಷಕ ಕೃಷ್ಣ ಕುಲಾಲ್. ಹೈಸ್ಕೂಲ್ ಸೇರಿದ ಬಳಿಕ ಪ್ರತಿಭೆಗೆ ಬೆನ್ನೆಲುಬಾದವರು ಶಿಕ್ಷಕ ಸಂತೋಷ್ . ಪ್ರಸ್ತುತ ತನ್ನ ಕಾಲೇಜಿನ ಕ್ರೀಡಾ ಕೋಚ್ ವಿಜಯ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ.
17 ವರ್ಷ ಕಿರಿಯ ವಯಸ್ಸಿನ 61ನೇ SGF ರಾಷ್ಟೀಯ ಬಾಲ್ ಬ್ಯಾಡ್ ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆದ್ದ ಅನನ್ಯಾ, ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ವಿಭಾಗಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ, ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಥಮ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ. ಕೇವಲ ಬ್ಯಾಡ್ ಮಿಂಟನ್ ಮಾತ್ರವಲ್ಲದೆ ಉದ್ದಜಿಗಿತ, ಎತ್ತರ ಜಿಗಿತ, ಗುಡ್ಡಗಾಡು ಓಟದಲ್ಲೂ ಭಾಗವಹಿಸಿ ಪ್ರತಿಭೆಯನ್ನು ಮೆರೆದಿರುವ ಈಕೆ ಬಹುಮುಖ ಪ್ರತಿಭೆ. ಕಲಿಕೆಯಲ್ಲೂ ಪ್ರತಿಭಾನ್ವಿತೆಯಾಗಿರುವ ಅನನ್ಯಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ ೭೫ ಅಂಕ ಗಳಿಸಿ ಪಾಸಾಗಿದ್ದಾಳೆ.
ಸೂಕ್ತ ಪ್ರೋತ್ಸಾಹದ ಕೊರತೆಯ ನಡುವೆಯೂ ಸಹಾ ತನ್ನ ದಿಟ್ಟ ಛಲ ಕಠಿಣ ಪರಿಶ್ರಮದಿಂದ ಜಿಲ್ಲಾ ರಾಜ್ಯಮಟ್ಟದಲ್ಲಿ ತನ್ನ ಕೀರ್ತಿ ಪತಾಕೆಯನ್ನು ಬೆಳಗಿಸಿದಲ್ಲದೆ ರಾಷ್ಟ್ರ ಮಟ್ಟದಲ್ಲೂ ಶಟಲ್ ಬಾಲನ್ನು ಮೂಲೆ ಮೂಲೆಗೆ ಅಟ್ಟಿದ್ದ ಈ ಪುಟ್ಟ ಪೋರಿಯ ಸಾಧನೆ ಕಡಿಮೆಯೇನಲ್ಲ. ಬ್ಯಾಡ್ ಮಿಂಟನ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿ ಇತ್ತೀಚೆಗೆ ಸಂಶಯಾಸ್ಪದವಾಗಿ ಸಾವನ್ನಪಿದ ಮೂಡಬಿದ್ರೆಯ ಕಾವ್ಯಾ ಜೊತೆಗೂ ಉತ್ತಮ ಒಡನಾಟ ಬೆಳೆಸಿ, ಅಭ್ಯಾಸ ನಡೆಸಿ ಕ್ರೀಡೆಯ ಟಿಪ್ಸ್ ಪಡೆದಿರುವ ಅನನ್ಯಾ ತನ್ನ ಸಾಧನೆಗೆ ದೊರಕಿರುವ ಮೊಮೆಂಟೋ-ಪ್ರಶಸ್ತಿ ಪತ್ರಗಳನ್ನು ತನ್ನ ಪುಟ್ಟ ಮುರುಕು ಮನೆಯ ಚೀಲದೊಳಗೆ ಭದ್ರವಾಗಿಟ್ಟು, ಭವಿಷ್ಯದ ಬಗ್ಗೆ ಕನಸು ಕಾಣುತ್ತಿದ್ದಾಳೆ.
ಕೂಲಿ ಕಾರ್ಮಿಕರಾದ ತಂದೆ ಜಾರಪ್ಪ ಮೂಲ್ಯ-ಲೀಲಾ ದಂಪತಿಯ ಎರಡನೇ ಮಗಳಾದ ಅನನ್ಯಗೆ ಇಬ್ಬರು ಸಹೋದರಿಯರು. ಹಿರಿಯಾಕೆ ಪ್ರಥಮ ಡಿಗ್ರಿಯಲ್ಲಿದ್ದರೆ, ತಂಗಿ ೮ನೇ ತರಗತಿಯಲ್ಲಿದ್ದಾಳೆ. ತಮ್ಮ ಕಿಂಚಿತ್ ವರಮಾನದಲ್ಲಿ ಮೂವರು ಪುತ್ರಿಯರ ಪೋಷಣೆ -ವಿದ್ಯಾಭ್ಯಾಸ ನೋಡಿಕೊಳ್ಳಬೇಕಾದ ಸ್ಥಿತಿ ಈ ಕುಟುಂಬದ್ದು. ಕಡು ಬಡತನದಲ್ಲೂ ಪೋಷಕರು ಇದುವರೆಗೆ ತನ್ನ ಸಾಧನೆಗೆ ಪ್ರೋತ್ಸಾಹ ನೀಡಿದ್ದಾರೆ. ಆದರೆ ಮುಂದೇನು ಎನ್ನುವ ಚಿಂತೆ ಅನನ್ಯಾಳದ್ದು. ಸಂಘ-ಸಂಸ್ಥೆಗಳು, ಜಾತಿ ಬಾಂಧವರು, ಕ್ರೀಡಾ ಪೋಷಕರು ಅರಳು ಪ್ರತಿಭೆ ಅನನ್ಯಾಳ ಸಾಧನೆ ಗುರುತಿಸಿ, ಗೌರವಿಸಿ ಪ್ರೋತ್ಸಾಹಿಸಿದರೆ ಇನ್ನಷ್ಟು ಉನ್ನತ ಸಾಧನೆ ಮಾಡುವುದರಲ್ಲಿ ಅನುಮಾನವಿಲ್ಲ.








