ಕಿನ್ನಿಗೋಳಿ(ನ.೦೬, ಕುಲಾಲ್ ವರ್ಲ್ಡ್ ನ್ಯೂಸ್): ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದ ಹಳೆಯಂಗಡಿ ಸಮೀಪದ ತೋಕೂರು ಗ್ರಾಮದ ದೇನೊಟ್ಟು ಎಂಬಲ್ಲಿಯ ನಿವಾಸಿ ಮನೋಜ್ ಕುಲಾಲ್ ಅವರಿಗೆ ತೋಕೂರಿನ ಸಮಾನಮನಸ್ಕ `ಕುಲಾಲ ಜವನೆರ್’ ವಾಟ್ಸಪ್ ಗ್ರೂಪಿನ ಗೆಳೆಯರು ಸೇರಿ ನೆರವಿನ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ನ.೫ರಂದು ಹಸ್ತಾ೦ತರಿಸಿದರು.
ಮನೋಜ್ ಕುಲಾಲ್ ಅವರು ಕಳೆದ ಏಳು ವರ್ಷಗಳಿಂದ ವಿಚಿತ್ರ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಈ ಕುರಿತು ನಮ್ಮ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವೆಬ್ ಸೈಟ್ `ಕಿತ್ತು ತಿನ್ನುವ ಬಡತನದಲ್ಲಿ ಮಗನಿಗೆ ವಿಚಿತ್ರ ಖಾಯಿಲೆ : ಕುಟುಂಬಕ್ಕೆ ಬೇಕಿದೆ ಸಹೃದಯಿಗಳ ನೆರವು” ಎಂಬ ಶಿರೋನಾಮೆಯಲ್ಲಿ ವರದಿ ಪ್ರಕಟಿಸಿ ನೆರವು ನೀಡುವಂತೆ ವಿನಂತಿಸಿತ್ತು. ಇದಕ್ಕೆ ಸ್ಪಂದಿಸಿರುವ `ಕುಲಾಲ ಜವನೆರ್’ ವಾಟ್ಸಪ್ ಗ್ರೂಪಿನ ಮಿತ್ರರು ಒಟ್ಟು 23,500/- ರೂ. ಸಂಗ್ರಹಿಸಿದ್ದರು. ಈ ಹಣವನ್ನು ಮನೋಜ್ ಕುಲಾಲ್ ಅವರ ಮನೆಗೆ ತೆರಳಿ ಊರ ಹಿರಿಯರ ಸಮ್ಮುಖದಲ್ಲಿ ನೀಡಿ, ಮಾನಸಿಕ ಸ್ಥೈರ್ಯ ತುಂಬಿದರು.
ದೇನೊಟ್ಟು ನಿವಾಸಿ ನಾರಾಯಣ ಅಂಚನ್- ಹರಿಣಾಕ್ಷಿ ದಂಪತಿಯ ಒಬ್ಬನೇ ಮಗ ಮನೋಜ್ ಬಾಲ್ಯದಲ್ಲಿ ಎಲ್ಲ ಮಕ್ಕಳಂತಿದ್ದು ಆರನೇ ತರಗತಿ ಬಳಿಕ ವಿಚಿತ್ರವಾಗಿ ವರ್ತಿಸತೊಡಗಿದ್ದ. ಬೆಪ್ಪು ಮೋರೆ ಹಾಕಿಕೊಂಡು ತನ್ನಷ್ಟಕೇ ಅಳುವುದು, ಬೊಬ್ಬೆ ಹೊಡೆಯುವುದು, ಕೈಗೆ ಸಿಕ್ಕಿದ್ದೆಲ್ಲಾ ಎಸೆಯುವುದು ಇತ್ಯಾದಿ ಮಾಡುತ್ತಿದ್ದು, ಕೆಲವೊಮ್ಮೆ ಇಡೀ ರಾತ್ರಿ ನಿದ್ರೆ ಮಾಡುತ್ತಿಲ್ಲ. ಕಾಯಿಲೆ ಕಾಣಿಸಿಕೊಂಡಾಗಿನಿಂದಲೂ ಸಂಕಷ್ಟದಲ್ಲಿರುವ ತಂದೆ-ತಾಯಿ ಮಗನ ವಿಚಿತ್ರ ಕಾಯಿಲೆಯಿಂದ ದಿಗ್ಬ್ರಾಂತರಾಗಿದ್ದು, ಮನೆ ಬಿಟ್ಟು ಕೂಲಿ ನಾಲಿ ಬದುಕಲು ಕಷ್ಟವಾಗಿದ್ದು ನಿತ್ಯ ಮಗುವಿನ ಆರೈಕೆಗೆ ಒಬ್ಬರ ಸಹಾಯ ಬೇಕಿದೆ. ಕಡು ಬಡ ಕುಟುಂಬದ ನಾರಾಯಣ ಅವರು ಚಿಕ್ಕ ಕ್ಯಾಂಟೀನ್ ವೊಂದರಲ್ಲಿ ದುಡಿಯುತ್ತಿದ್ದು, ಮನೆ ಖರ್ಚು ನಿಭಾಯಿಸಲು ಹರಸಾಹಸ ಪಡುತ್ತಿದ್ದಾರೆ.
ಈ ಬಡ ಕುಟುಂಬಕ್ಕೆ ಧನ ಸಹಾಯ ನೀಡುವವರು ಮನೋಜ್ ನ ತಾಯಿ ಹರಿಣಾಕ್ಷಿ ಅವರ ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ.
Harinakshi
Canara bank
Halengady branch
A/c No : 06371012 04538
IFSC Code: CNRB0000637
phone : 9632871598