ಮಂಗಳೂರು (ನ.೦೨,ಕುಲಾಲ್ ವರ್ಲ್ಡ್ ನ್ಯೂಸ್) : ಬಜಾಲ್ ಪ್ರದೇಶದ ಸಿಪಿಎಂ ಪಕ್ಷದ ಹಿರಿಯ ಮುಖಂಡ ಶೀನ ಬಂಗೇರ (65) ಗುರುವಾರ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು. ಎಳೆಯ ಪ್ರಾಯದಲ್ಲೇ ಕಮ್ಯೂನಿಸ್ಟ್ ಚಳುವಳಿಯಿಂದ ಆಕರ್ಷಿತಗೊಂಡು, ಚಳುವಳಿಗೆ ಆಕರ್ಷಿತರಾಗಿ ಬಜಾಲ್ ಪ್ರದೇಶದಲ್ಲಿ ಸಕ್ರೀಯವಾಗಿದ್ದ ರೈತ ಕಾರ್ಮಿಕರ ಹೋರಾಟದಲ್ಲಿ ಭಾಗವಹಿಸಿದ್ದ ಶೀನ ಬಂಗೇರ ಎಡಪಂಥೀಯ ವಿಚಾರಧಾರೆಯ ಶಿಸ್ತಿನ ಸಿಪಾಯಿಯಾಗಿದ್ದರು.
ತುರ್ತು ಪರಿಸ್ಥಿತಿಯ ಕಾಲಾವಧಿಯಲ್ಲಿ ಕಮ್ಯೂನಿಸ್ಟ್ ಪಕ್ಷದ ಮೇಲೆ ನಿಷೇಧವಿದ್ದಾಗಲೂ ಬಜಾಲ್ ನಲ್ಲಿ ದುಡಿಯುವ ವರ್ಗದ ಚಳುವಳಿಗೆ ಅಪಾರ ಕೊಡುಗೆ ನೀಡಿದ್ದರು. ಆ ಸಂದರ್ಭ ಯುವಕರನ್ನು ದೈಹಿಕವಾಗಿ ಬಲಾಢ್ಯಗೊಳಿಸಲು ಶ್ರಮಿಸುತ್ತಿದ್ದ ಜನತಾ ವ್ಯಾಯಾಮ ಶಾಲೆಯ ಮೇಲೆ ದಾಳಿ ನಡೆದಾಗಲೂ ಅದರ ರಕ್ಷಣೆಗಾಗಿ ಅವಿರತವಾಗಿ ದುಡಿದವರಲ್ಲಿ ಶೀನ ಬಂಗೇರ ಕೂಡ ಒಬ್ಬರು.
ವ್ಯಾಯಾಮ ಶಾಲೆಗೆ ಕಟ್ಟಡದ ಸಮಸ್ಯೆ ತಲೆದೋರಿದಾಗ ತಮ್ಮ ಮನೆಯ ಅರ್ಧ ಭಾಗವನ್ನೇ ವ್ಯಾಯಾಮ ಶಾಲೆಯ ಕಚೇರಿಗಾಗಿ ಕಳೆದ 40 ವರ್ಷ ಗಳಿಂದಲೂ ಉಚಿತವಾಗಿ ನೀಡಿರುವ ಶೀನ ಬಂಗೇರರ ನಿಧನಕ್ಕೆ ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿಯು ಸಂತಾಪ ಸೂಚಿಸಿದೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.