ಮುಂಬಯಿ(ನ.೦೨, ಕುಲಾಲ್ ವರ್ಲ್ಡ್ ಡಾಟ್ ಕಾಂ): ಮುಂಬಯಿಯ ಅಸಂಖ್ಯ ತುಳು ಕನ್ನಡಿಗರಂತೆ ಜನ್ಮ ಭೂಮಿ ಬಿಟ್ಟು ಮುಂಬಯಿ ಸೇರಿದ ಅದೆಷ್ಟೋ ಪ್ರತಿಭೆಗಳನ್ನು ಮುಂಬಯಿಯ ಕಲಾರಂಗ ಅನಾವರಣಗೊಳಿಸಿದೆ. ಅಂತಹ ಪ್ರತಿಭೆಗಳಲ್ಲಿ ಬಹುಮುಖ ಪ್ರತಿಭೆಯಾಗಿರುವ ವಸಾಯಿ ಪಶ್ಚಿಮದ ‘ವಿದ್ಯಾವರ್ಧಿನಿ ಕಾಲೇಜ್’ ನ HSC ಪ್ರಥಮ ವರ್ಷದಲ್ಲಿ ಕಲಿಯುತ್ತಿರುವ ನಿಶಾ ಪಿ.ಕುಲಾಲ್ ಕೂಡಾ ಒಬ್ಬಳು.
ತನ್ನ ಬಹುಮುಖ ಪ್ರತಿಭೆಯಿಂದ ಅಸಂಖ್ಯ ಪ್ರಶಸ್ತಿ ಪಡೆದುದಲ್ಲದೆ 2017ರ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದು ಕುಲಾಲ ಸಮಾಜಕ್ಕಲ್ಲದೆ ಸಮಸ್ತ ತುಳು ಕನ್ನಡಿಗರಿಗೆ ಹೆಮ್ಮೆ ತಂದಿದ್ದಾಳೆ. ಈಕೆ ನಲಸೋಪಾರ ಪೂರ್ವದಲ್ಲಿ ನೆಲೆಸಿರುವ, ಮೂಲತಃ ಮೂಡಬಿದ್ರೆ ಸಂಪಿಗೆಯ ಪುರುಷೋತ್ತಮ ಕುಲಾಲ್ ಹಾಗೂ ಸುಮತಿ ಪಿ.ಕುಲಾಲ್ ದಂಪತಿಯ ಮುದ್ದಿನ ಏಕೈಕ ಪುತ್ರಿ. ತನ್ನ ಏಳರ ಹರೆಯದಿಂದಲೇ ಕಾಲಿಗೆ ಗೆಜ್ಜೆ ಕಟ್ಟಿದ ನಿಶಾ ನಲಸೋಪಾರದ ಭರತನಾಟ್ಯ ಗುರು ವಿಧುಷಿ ಸ್ಮಿತಾ ನಾಯರ್ ಇವರ ಗರಡಿಯಲ್ಲಿ ಪಳಗಿ ಭರತನಾಟ್ಯ ಕಲೆಯನ್ನು ಅರಗಿಸಿಕೊಂಡು 2015ರಲ್ಲಿ ಆರಂಗ್ರೇಟಂ ನಡೆದಿದೆ.
ನಿಶಾಳಿಗೆ ಬೆಂಗಳೂರಿನ ‘ಜ್ಞಾನ ಮಂದಾರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಕಾಡೆಮಿ’ ಕೊಡಮಾಡುವ ‘ಅರಳು ಮಲ್ಲಿಗೆ’ ಪ್ರಶಸ್ತಿಯೂ 2015 ರಲ್ಲಿ ಸಂದಿದೆ. ಓಲಂಪಿಯಾರ್ಡ್ ನಿಂದ ಕೊಡಮಾಡುವ ಬಂಗಾರದ ಪದಕ 2010ರಲ್ಲಿ ಸಂದಿದೆ. ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಗಾದೆಯಂತೆ ನಿಶಾ ಪ್ರತಿಯೊಂದು ಕ್ಷೇತ್ರದಲ್ಲಿ ಕೈಯಾಡಿಸಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾಳೆ.
ಓದು, ಆಟೋಟ, ಯಕ್ಷಗಾನ, ಜಾನಪದ ನೃತ್ಯ, ವೆಸ್ಟರ್ನ್ ಡಾನ್ಸ್, ಅಭಿನಯ ಮುಂತಾಗಿ ಎಲ್ಲದರಲ್ಲೂ ಎತ್ತಿದ ಕೈ. ಕಳೆದ ವರ್ಷ 2016-17ನೇ ಸಾಲಿನ ಎಸ್ಸೆಸ್ಸಿ ಪರೀಕ್ಷೆಯಲ್ಲಿ ಶೇ.90.80 ಅಂಕ ಪಡೆದು ತಾನು ಕಲಿತ ಸೈಂಟ್ ಅಲೋಶಿಯಸ್ ಶಾಲೆಗೇ ಪ್ರಥಮಳಾಗಿದ್ದಳು. ವಸಾಯಿ ಮುನ್ಸಿಪಾಲಿಟಿ ಆಯೋಜಿಸಿದ ವಸಾಯಿ ತಾಲೂಕು ಶಾಲಾ ಹಾಗೂ ಹೈಸ್ಕೂಲ್ ಮಟ್ಟದ ಡ್ಯಾನ್ಸ್ ಪ್ರತಿಯೋಗಿತೆಯಲ್ಲಿ 2012 ರಿಂದ 2017 ರವರೆಗೆ ಸತತವಾಗಿ ಪ್ರಥಮ ಪ್ರಶಸ್ತಿ ಯನ್ನು ಯಾರಿಗೂ ಬಿಟ್ಟು ಕೊಟ್ಟಿಲ್ಲ.
ಹೀಗೆ ಹಲವಾರು ಭರತನಾಟ್ಯ,ಯಕ್ಷಗಾನ ಪ್ರದರ್ಶನ ನೀಡಿ ಕಲಾರಸಿಕರಿಂದ ಮುಕ್ತಕಂಠದ ಪ್ರಶಂಸೆ ಪಡೆದಿರುವ ನಿಶಾ ಹಲವಾರು ಪ್ರತಿಷ್ಠಿತ ಸಂಸ್ಥೆ ಗಳಿಂದ ಸನ್ಮಾನ ಪಡೆದು ಶುದ್ಧನಾಟ್ಯ ಮತ್ತು ಉತ್ತಮ ಅಭಿನಯಕ್ಕೆ ಒಂದು ಮಾದರಿಯಾಗಿದ್ದಾಳೆ. ಮಾತೃ ಭಾಷೆ ತುಳುವಿನೊಂದಿಗೆ ಕನ್ನಡವನ್ನೂ ಕಲಿಯುತ್ತಿರುವ ಈಕೆ ‘ಚಿಣ್ಣರ ಬಿಂಬ’ ನಲಸೊಪರ ಶಾಖೆಯ ವಿದ್ಯಾರ್ಥಿನಿ.
ತನ್ನ ಕಲಾ ಪ್ರತಿಭೆಗೆ ಅಪ್ಪ -ಅಮ್ಮನ ನಿರಂತರ ಪ್ರೋತ್ಸಾಹ, ಪ್ರೀತಿ, ವಾತ್ಸಲ್ಯ ಪ್ರೇರಣೆ ಎನ್ನುತ್ತಾಳೆ ನಿಶಾ. ತನಗೆ ನಿರಂತರ ಪ್ರೋತ್ಸಾಹ ನೀಡಿ ಸಹಕರಿಸುತ್ತಿರುವ ಅಧ್ಯಾಪಕ ವೃಂದ, ನೃತ್ಯ ಗುರುಗಳನ್ನು ಹಾಗೂ ಸಂಘ ಸಂಸ್ಥೆಗಳನ್ನು ಸದಾ ಸ್ಮರಿಸುತ್ತಾಳೆ ನಿಶಾ. ಮುಂದೆ nuclear medicine technologyst ಆಗಬೇಕು ಎಂದು ಕನಸು ಹೊಂದಿರುವ ಆಕೆಯ ಕನಸು ನನಸಾಗಿ ಇನ್ನಷ್ಟು ಪ್ರತಿಭಾ ಸಂಪನ್ನಳಾಗಿ ನಮ್ಮ ಸಮಾಜಕ್ಕೆ, ನಾಡಿಗೆ ಕೀರ್ತಿ ತರಲಿ ಎಂಬುದು `ಕುಲಾಲ್ ವರ್ಲ್ಡ್ ಡಾಟ್ ಕಾಮ್‘ ನ ಹಾರೈಕೆ.