ಕುಲಾಲರಿಗೆ ರಾಜಕೀಯ ಮನ್ನಣೆ ದೊರಕಬೇಕು : ಪ್ರತಾಪ್ ಹೆಗ್ಡೆ ಮಾರಾಳಿ
ಕೋಟ(ಅ.೨೯, ಕುಲಾಲ್ ವರ್ಲ್ಡ್ ನ್ಯೂಸ್): ಕೋಟ ಹೋಬಳಿ ಕುಲಾಲ ಸಮಾಜ ಸುಧಾರಕ ಸಂಘ ಶಿರಿಯಾರ ಮೆಕ್ಕೆಕಟ್ಟು ಇದರ 5ನೇ ವರ್ಷದ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿ ಸಹಾಯಧನ ವಿತರಣಾ ಸಮಾರಂಭ ಶಿರಿಯಾರ ಮೆಕ್ಕೆಕಟ್ಟುವಿನ ಗಾಂಧಿ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಟಾಟಿಸಿ ಮಾತನಾಡಿದ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ “ಕುಲಾಲರು ನಾಗರಿಕತೆಯ ಮೂಲಕ್ಕೆ ನಾಂದಿ ಹಾಡಿದವರು. ಮಣ್ಣಿನೊಂದಿಗೆ ಬದುಕನ್ನು ಕಟ್ಟಿಕೊಂಡು ಪ್ರಾಮಾಣಿಕತೆಯಿಂದ ಬದುಕಿದವರು. ಎಲ್ಲ ಕ್ಷೇತ್ರದಲ್ಲಿ ಮುಂದೇ ಇರುವ ಕುಲಾಲರಿಗೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕಾದ ತುರ್ತು ಅಗತ್ಯವಿದೆ” ಎಂದು ಅಭಿಪ್ರಾಯ ಪಟ್ಟರು.
ಆರೂರು ಗ್ರಾಪಂ. ಅಧ್ಯಕ್ಷ ರಾಜೀವ ಕುಲಾಲ್ ಆರೂರು ಮಾತನಾಡಿ ‘ ಕುಂಬಾರರು ಪ್ರಾಮಾಣಿಕತೆಗೆ ಹೆಸರಾದವರು. ಮಡಿಕೆ ಮಣ್ಣಿನ ಕೆಲಸ ಮಾಡುತ್ತಾ ಈ ನೆಲದ ಮಕ್ಕಳಾಗಿ ಬದುಕಿದವರು. ಕರಾವಳಿಯಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿರುವ ಕುಲಾಲರಿಗೆ ರಾಜಕೀಯ ಪ್ರಾಶಸ್ತ್ಯ ವನ್ನು ಎಲ್ಲ ಪಕ್ಷಗಳು ನೀಡಬೇಕಾದ ಅಗತ್ಯ ಇದೆ ಎಂದರು.
ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ಉಡುಪಿ ಜಿಲ್ಲಾಧ್ಯಕ್ಷರಾದ ವಕೀಲ ಸುನೀಲ್ ಶಿವಮೂಲ್ಯ ದಿಕ್ಸೂಚಿ ಭಾಷಣ ಮಾಡಿದರು. ಕೋಟ ಹೋಬಳಿ ಕುಲಾಲ ಸಮಾಜ ಸುಧಾರಕ ಸಂಘದ ಅಧ್ಯಕ್ಷರಾದ ಈಶ್ವರ ಕುಲಾಲ್ ನೈಲಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಆರೂರು ಗ್ರಾ.ಪಂ. ಅಧ್ಯಕ್ಷರಾದ ರಾಜೀವ್ ಕುಲಾಲ್ ಆರೂರು, ಶಿಕ್ಷಕಿ ರೇಖಾ ಪ್ರಭಾಕರ ಕುಲಾಲ್, ಕಾಪು ಕುಲಾಲ ಯುವ ವೇದಿಕೆಯ ಅಧ್ಯಕ್ಷರಾದ ಉದಯ್ ಕುಲಾಲ್ ಕಳತ್ತೂರು, ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕುಲಾಲ ಯುವ ವೇದಿಕೆಯ ಅಧ್ಯಕ್ಷರಾದ ಹರೀಶ್ ಕುಲಾಲ್ ಕೆದೂರು, ಬೈಂದೂರು ವಿಧಾನ ಸಭಾ ಕ್ಷೇತ್ರದ ಮಂಜುನಾಥ್ ಕುಲಾಲ್ ಜನ್ಸಾಲೆ, ಕಾರ್ಕಳ ಯುವ ವೇದಿಕೆಯ ದಿವಾಕರ ಬಂಗೇರ, ಉಡುಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಲಾಲ್ ನಡೂರು ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮಾಜ ಸೇವಕ ಶ್ರೀನಿವಾಸ ಕುಲಾಲ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಸೇವಾ ಯೋಜನೆಯ ಸೇವಾ ಪ್ರತಿನಿಧಿ ಭಾರತಿ ಸಿ. ಕುಲಾಲ್ ಆವರ್ಸೆ ಅವರನ್ನು ಸನ್ಮಾನಿಸಲಾಯಿತು. ಸುಮಾರು ಮೂವತ್ತಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಸಹಾಯಧನ ವಿತರಿಸಿ ಗೌರವಿಸಲಾಯಿತು. ಸತೀಶ್ ಕುಲಾಲ್ ನಡೂರು ವರದಿ ವಾಚನಗೈದರು. ಭಾಸ್ಕರ ಕುಲಾಲ್ ಕಂಪ ಧನ್ಯವಾದ ಸಮರ್ಪಿಸಿದರು. ಮಂಜುನಾಥ್ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು.