ಮಂಗಳೂರು(ಎ.೨೧, ಕುಲಾಲ್ ವರ್ಲ್ಡ್ ನ್ಯೂಸ್): ಕರಾವಳಿಯ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಸದ್ರಿ ದೇವಸ್ಥಾನದ ಶ್ರೀ ಮಹಾಗಣಪತಿ ಹಾಗೂ ಭದ್ರಕಾಳಿ ದೇವರ ಗರ್ಭಗುಡಿಯ ದಾರಂದ ಮತ್ತು ಬಾಗಿಲಿಗೆ ಬೆಳ್ಳಿ ಹೊದಿಕೆಯನ್ನು ಕುಲಾಲ ಸಮಾಜ ಬಾಂಧವರ ವತಿಯಿಂದ ನಿರ್ಮಿಸಿ ಸಮರ್ಪಿಸುವುದೆಂದು ತೀರ್ಮಾನಿಸಲಾಗಿದೆ.
ಈ ಸೇವಾ ಕಾರ್ಯ ನಡೆಸುವ ಬಗ್ಗೆ ಕುಲಾಲ ಸಮಾಜದ ಸೇವಾಕರ್ತರ ಸಮಾಲೋಚನಾ ಸಭೆಯು ಕಳೆದ ಅ ೮ರಂದು ನಡೆದಿದ್ದು, ಬೆಳ್ಳಿ ಹೊದಿಕೆ ನಿರ್ಮಾಣಕ್ಕೆ ಸುಮಾರು 16 ಲಕ್ಷ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ `ಕುಲಾಲ ಸಮಾಜ ಬಾಂಧವರ ಶ್ರೀ ರಾಜರಾಜೇಶ್ವರಿ ಸೇವಾ ಸಮಿತಿ’ಯನ್ನು ರಚಿಸಲಾಗಿದ್ದು, ಕಾಂಗ್ರೆಸ್ ಮುಖಂಡ ಆರ್.ಕೆ ಪ್ರಥ್ವಿರಾಜ್ ಎಡಪದವು ಅವರು ಗೌರವಾಧ್ಯಕ್ಷರಾಗಿ ಹಾಗು ಸುಂದರ್ ಬಂಗೇರ ಆದ್ಯಪಾಡಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ೨೦೧೮ರಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಸಂದರ್ಭ ಬೆಳ್ಳಿ ಹೊದಿಕೆಯನ್ನು ಸಮರ್ಪಿಸಲಾಗುತ್ತಿದ್ದು, ಇದಕ್ಕೆ ಸಮಾಜ ಬಾಂಧವರು ತನು-ಮನ-ಧನದ ಸಹಕಾರವನ್ನು ನೀಡುವಂತೆ ಸಮಿತಿ ವಿನಂತಿಸಿದೆ.
ಜೀರ್ಣೋದ್ಧಾರಕ್ಕೆ ಮುಂಚೆ ಇಡಲಾಗಿದ್ದ ತಾಂಬೂಲ ಪ್ರಶ್ನೆ ಹಾಗೂ 2008ರಲ್ಲಿ ನಡೆಸಲಾಗಿದ್ದ ಅಷ್ಟಮಂಗಳದಲ್ಲಿ ಸೂಚಿಸಲ್ಪಟ್ಟ ನಿರ್ದೇಶನಗಳು ಹಾಗೂ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಳ್ ಅವರ ನೇತೃತ್ವದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಪೊಳಲಿ ಅಮ್ಮ ಹಾಗೂ ಪರಿವಾರ ದೇವರ ಶಿಲಾಮಯ ಆಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ.
ದೇವಳದಲ್ಲಿ ನಡೆಯುತ್ತಿರುವ ದೇವರ ಕಾರ್ಯದಲ್ಲಿ ಸ್ವಯಂ-ಸೇವಕರ ದಂಡೇ ಭಾಗಿಯಾಗಿದ್ದು, ಅತ್ಯುತ್ಸಾಹದಿಂದ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ. ದೇವಳದ ಆವರಣದಲ್ಲಿ ಸ್ಥಾಪಿಸಲಾಗಿರುವ ಬಾಲಾಯಗಳಲ್ಲಿ ಶ್ರೀ ರಾಜರಾಜೇಶ್ವರೀ ದೇವಿ, ಶ್ರೀ ದುರ್ಗಾಪರಮೇಶ್ವರೀ, ಶ್ರೀ ಭದ್ರಕಾಳಿ,ಕ್ಷೇತ್ರಪಾಲ, ಕೊಡಮಣಿತ್ತಾಯಿ ಹಾಗೂ ಇತರ ದೇವರಿಗೆ ನಿತ್ಯ ಸಾಮಾನ್ಯ ಪೂಜೆ ನಡೆಯುತ್ತಿದೆ. ಈಗಲೂ ವಿಶೇಷ ದಿನ ಹಾಗೂ ರಜಾ ದಿನಗಳಲ್ಲಿ ಭಕ್ತಜನರ ದಂಡೇ ಹರಿದು ಬರುತ್ತಿದೆ.