ಮಂಗಳೂರು(ಅ.೨೦, ಕುಲಾಲ್ ವರ್ಲ್ಡ್ ನ್ಯೂಸ್): ಮುಂದಿನ ವರ್ಷ ಜೂನ್ನಲ್ಲಿ ನಡೆಯಲಿರುವ ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯ ಸ್ಪರ್ಧಾಕಾಂಕ್ಷಿಗಳ ಪಟ್ಟಿಯಲ್ಲಿ ನೈರುತ್ಯ (ಶಿಕ್ಷಕರ)ಕ್ಷೇತ್ರದಲ್ಲಿ ಕುಲಾಲ ಸಮುದಾಯದ ಮುಖಂಡ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅವರ ಹೆಸರು ಚಾಲ್ತಿಯಲ್ಲಿದ್ದು, ಕುಲಾಲ ಸಮಾಜಕ್ಕೆ ಈ ಬಾರಿಯಾದರೂ ಅವಕಾಶ ಸಿಗಬಹುದು ಎಂಬ ಆಶಾಭಾವನೆ ಹುಟ್ಟಿಕೊಂಡಿದೆ.
ಕರಾವಳಿಯಲ್ಲಿ ಕುಲಾಲ ಸಮುದಾಯದ ಮಟ್ಟಿಗೆ ಅವಕಾಶ ನೀಡುವಲ್ಲಿ ಒಂದು ಹೆಜ್ಜೆ ಮುಂದೇ ಇರುವ ಬಿಜೆಪಿ ಪಕ್ಷವು ರಾಜಕೀಯವಾಗಿ ಕಡೆಗಣಿಸಲ್ಪಟ್ಟ ಜನಾಂಗಕ್ಕೆ ಅವಕಾಶ ನೀಡುವ ಸಲುವಾಗಿ ಅಣ್ಣಯ್ಯ ಕುಲಾಲ್ ಅವರ ಹೆಸರು ಅಂತಿಮಗೊಳಿಸಿದರೂ ಆಶ್ಚರ್ಯ ಇಲ್ಲ ಎಂದು ಮೂಲಗಳು ತಿಳಿಸಿದ್ದು, ಕುಲಾಲ ಸಂಘ-ಸಂಸ್ಥೆಗಳು ಇದಕ್ಕೆ ಒತ್ತಡ ಹಾಕುವ ಕೆಲಸ ಮಾಡಬೇಕಿದೆ.
ಮೊದಲು ಮಂಗಳೂರು ವಿವಿಯ ಹಿರಿಯ ಶ್ರೇಣಿಯ ವೈದ್ಯಕೀಯ ಶಿಕ್ಷಕರಾಗಿದ್ದು, ಪ್ರಸ್ತುತ ರಾಜೀವ ಗಾಂಧಿ ಅರೋಗ್ಯ ವಿ.ವಿಯ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಅಣ್ಣಯ್ಯ ಕುಲಾಲ್ ಅವರು ಕೇವಲ ಕುಲಾಲ ಸಮುದಾಯದ ನಾಯಕರಷ್ಟೇ ಆಗಿರದೇ ಸಂಘಟನೆ , ಹೋರಾಟ, ಸಂಪನ್ಮೂಲ , ಬರಹ, ಭಾಷಣಗಳ ಮೂಲಕ ಸಮಾಜದ ಎಲ್ಲ ವರ್ಗದ ಜನರನ್ನು ತಲುಪಲು ಪ್ರಯತ್ನ ಮಾಡಿದವರು. ಈ ಹಿನ್ನೆಲೆಯಲ್ಲಿ ಈ ಹಿಂದೆ ಎರಡು ಬಾರಿ ವಿಧಾನ ಪರಿಷತ್ನ ಚುನಾವಣೆ ಸಂದರ್ಭ ಅವರ ಹೆಸರು ಪ್ರಸ್ತಾವನೆಗೆ ಬಂದು ಬಿದ್ದು ಹೋಗಿತ್ತು. ಈ ಬಾರಿ ಮತ್ತೆ ಸಂಭಾವ್ಯರ ಪಟ್ಟಿಯಲ್ಲಿರುವ ಘಟಾನುಘಟಿ ನಾಯಕರ ಮಧ್ಯೆ ಅವರ ಹೆಸರು ಸೇರ್ಪಡೆಯಾಗಿದೆ ಎನ್ನಲಾಗಿದೆ. ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಪುತ್ರ ಡಿ.ಎಸ್.ಅರುಣ್, ಮಾಜಿ ಸಂಸದ ಆಯನೂರು ಮಂಜುನಾಥ್, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸಿ.ಮಂಜುಳಾ ಪ್ರಬಲ ಆಕಾಂಕ್ಷಿಗಳಾಗಿದ್ದರೆ, ಶಿಕ್ಷಕರ ಕ್ಷೇತ್ರದಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಮತ್ತೆ ಸ್ಪರ್ಧಿಸಲು ಲಾಬಿ ನಡೆಸುತ್ತಿದ್ದಾರೆ. ಇವರೆಲ್ಲರೂ ಈ ಹಿಂದೆ ಪಕ್ಷದಲ್ಲಿ ಒಂದಲ್ಲಾ ಒಂದು ಪ್ರಬಲ ಹುದ್ದೆ ಪಡೆದವರೇ ಆಗಿರುವುದರಿಂದ ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಭಾವಿಗಳು ದೊಡ್ಡಮಟ್ಟದ ಲಾಬಿ ಶುರು ಮಾಡಿದ್ದರಿಂದ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲವುಂಟಾಗಿದ್ದು ಕೊನೆಗೆ ಉಪ ಸಮಿತಿ ಮೂಲಕ ಆಯ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಗೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ಕುಮಾರ್ ಕಟೀಲು, ಶಾಸಕ ಸಿ.ಟಿ. ರವಿ, ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಮೇಘರಾಜ್ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಇವರು ನೀಡುವ ವರದಿ ಆಧರಿಸಿ ಕೋರ್ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುತ್ತದೆ.
ನೈಋತ್ಯ ಪದವೀಧರ ಕ್ಷೇತ್ರವು ಮಲೆನಾಡು-ಕರಾವಳಿ-ಬಯಲುಸೀಮೆ ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ ವಿಶಾಲ ಕ್ಷೇತ್ರವಾಗಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಕೊಡಗು, ದಾವಣಗೆರೆ ಜಿಲ್ಲೆಯ ಚನ್ನಗಿರಿ ಮತ್ತು ಹೊನ್ನಾಳಿ ತಾಲೂಕುಗಳನ್ನು ಒಳಗೊಂಡಿದ್ದು, ಒಟ್ಟಾರೆ 31 ಶಾಸಕರು ಈ ವ್ಯಾಪ್ತಿಯಲ್ಲಿದ್ದು, ಸರಿ ಸುಮಾರು 55 ಸಾವಿರ ಮತದಾರರು ಇದ್ದಾರೆ. ರಾಜ್ಯ ದ ಬೇರೆ ಭಾಗಗಳಿಗೆ ಹೋಲಿಸಿದಲ್ಲಿ ಈ ಭಾಗದಲ್ಲಿ ಕುಲಾಲ/ಕುಂಬಾರ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿ ಶಿಕ್ಷಕರು ಹಾಗು ಪಧವೀಧರರು ಇದ್ದಾರೆ. ಇವರಲ್ಲಿ ಹೆಚ್ಚಿನವರು ಬಿಜೆಪಿ ಪಕ್ಷದ ಒಲವುಳ್ಳವರಾಗಿದ್ದಾರೆ.