ದೀಪಗಳ ಹಬ್ಬ ದೀಪಾವಳಿ ಸಮೀಪಿಸುತ್ತಿದೆ.’ ಕೃಷಿ’ ಮತ್ತು ‘ಋಷಿ’ ಸಂಸ್ಕೃತಿಗಳೇ ಸಂಮಿಳಿತಗೊಂಡು ಸಂರಚನೆಗೊಂಡ ಈ ನೆಲದ ಮಹತ್ವಿಕೆಯ ಹಬ್ಬಗಳಲ್ಲಿ ದೀಪಾವಳಿ ಬಹುಮುಖ್ಯವಾದುದ್ದು.. ಆದರೆ ಢಂ..ಡಂ..ಸಿಡಿಮದ್ದುಗಳ ಕರ್ಕಶ ಸದ್ದಿನಲಿ, ಧೂಮ್ರಗಳ ಹಾವಳಿಯಲ್ಲಿ, ಗುಂಡು-ತುಂಡುಗಳ ಪಾರ್ಟಿಯಲ್ಲಿ,, ಸಿನಿಮಾ-ಶಾಪಿಂಗ್ ಗಳ ವೈಭೋಗದಲ್ಲಿ ಕಳೆದುಬಿಡುವ ದೀಪಾವಳಿಯನ್ನು ಈ ವರ್ಷವಾದರೂ ಒಂದಿಷ್ಟು ಮೌಲ್ಯಧಾರಿತವಾಗಿ ಆರ್ಥವಂತಿಕೆಯಲ್ಲಿ ಆಚರಿಸೋಣ. ದೀಪಾವಳಿಯನ್ನು ನಿಜದ ಅರ್ಥದಲ್ಲಿ ದೀಪಗಳ ಹಬ್ಬವನ್ನಾಗಿಸೋಣ..
ಆದರೆ ಅದು ಹೇಗೆ..?
ದೀಪಾವಳಿ ಹಣತೆಗಳ ಹಬ್ಬ. ಪ್ರತಿಯೊಬ್ಬರ ಮನೆಗಳಲಿ ಮಣ್ಣಿನ ಹಣತೆಗಳನ್ನು ಬೆಳಗಿಸಿ ಆಚರಿಸ ಬೇಕಾದ ದೇಸಿ ಹಬ್ಬ. ಝಗಝಗಮಿಸುವ ವಿದ್ಯುತ್ ಬೆಳಕೊ ಅಥವಾ ಕ್ಯಾಂಡಲ್ ಹಚ್ಚುವ ಸಂಸ್ಕೃತಿ ಈ ನೆಲದ ಆಚರಣೆ ಖಂಡಿತಾ ಅಲ್ಲ. ಹಾಗಾಗಿ ಈ ನೆಲದ ಮಣ್ಣಿನಿಂದಲೇ ತಯಾರಾದ ಶುದ್ದ ಹಣತೆಗಳನ್ನು ಬೆಳಗಿಸಿ ದೀಪಾವಳಿಯನ್ನು ಈ ವರ್ಷ ನಾವು ಆಚರಿಸಬೇಕು.
ಅಷ್ಟಕ್ಕೂ ಈ ದೀಪಾವಳಿಗೂ-ಮಣ್ಣಿನ ಹಣತೆಗಳಿಗೂ ಇರುವ ಶ್ರೇಷ್ಟ ಸಂಬಂಧಧ ಬಗ್ಗೆ, ಸಂದೇಶದ ಬಗ್ಗೆ ನಾವು ತಿಳಿದುಕೊಳ್ಳಲೇ ಬೇಕು.
ಕುಂಬಾರಿಕೆ ಈ ನೆಲದ ನವ ನಾಗರಿಕತೆಯ ಮೂಲಕ್ಕೆ ತಳಪಾಯ ಹಾಕಿದ ಶ್ರೇಷ್ಟ ಕಾಯಕವೇನೋ ಹೌದು. ಆದರೆ ಅದಿವತ್ತು ವಿನಾಶದ ಅಂಚಿಗೆ ತಲುಪುತ್ತಿದೆ. ಕುಂಬಾರಿಕೆಯನ್ನು ಬದುಕಿನ ವೃತ್ತಿಯನ್ನಾಗಿ ಮಾಡಿಕೊಂಡ ಅದೆಷ್ಟೂ ಮುದಿ ಜೀವಗಳು ಇಂದಿಗೂ ಜೋಪಡಿಯ ಬದುಕಿನಿಂದ ಹೊರಗೆ ಬಂದಿಲ್ಲ.. ವ್ಯಾಪರಾವಾಗದೆ ಉಳಿದ ಮಡಿಕೆ-ಕುಡಿಕೆಗಳ ಮಧ್ಯೆ ನೀರಸವಾಗಿ ಕುಳಿತು ನಿಮಿಷಕ್ಕೊಂದು ಹೊರ ಬರುವ ಅವರ ‘ದೀರ್ಘ ನಿಟ್ಟುಸಿರು’ಗಳೆ ಅವರ ಬರಡು ಬದುಕಿನ ಬರ್ದತೆಗೆ ಸಾಕ್ಷಿ.
ನಾವು ಬಿಡಿ.. ಈ ಅಲ್ಯೂಮೀನಿಯಂ ಸ್ಟೀಲ್ ಪಾತ್ರೆಗಳ ಮೋಡಿಗೆ, ಗಾಜು, ಪ್ಲಾಸ್ಟಿಕ್ ಗಳ ತಟ್ಟೇ ಪ್ಲೇಟುಗಳಿಗೆ ಬದುಕನ್ನು ಒಗ್ಗಿಸಿಕೊಂಡು ತುಂಬಾ ಕಾಲವಾಗಿದೆ. ಅದು ತಪ್ಪಲ್ಲ; ವರ್ತಮಾನದ ಅಗತ್ಯ ಮತ್ತು ಅನಿವಾರ್ಯ. .ಮಣ್ಣಿನ ಪಾತ್ರೆ-ಪಗಡೆಗಳು ಮೂಲೆ ಗುಂಪಾಗುತ್ತಿದ್ದರೂ ಈ ಮಣ್ಣಿನ ಜೊತೆಗೆ ಬದುಕು ಕಟ್ಟಿಕೊಂಡ ಎಷ್ಟೋ ಜನ ಇವತ್ತಿಗೂ ಅದನ್ನು ಬಿಡಲಾಗದೇ ಪ್ರತಿ ವರ್ಷ ಈ ದೀಪಾವಳಿ ಬಂತೆಂದರೆ ಒಂದಿಷ್ಟೂ ನಿರೀಕ್ಷೆ, ಆಸೆಯ ಕಂಗಳಲ್ಲಿ ಮಣ್ಣಿನ ಹಣತೆಯನ್ನು ಸಿದ್ಧ ಮಾಡಿಟ್ಟುಕೊಂಡು ವ್ಯಾಪರಕ್ಕಾಗಿ ಕಾಯುತ್ತಿರುತ್ತಾರೆ.. ಅವರಿಂದ ಕನಿಷ್ಟ ಒಂದೈದು ಮಣ್ಣಿನ ಹಣತೆಗಳನ್ನು ನಾವು ಖರೀಧಿಸಿ ಹಬ್ಬವನ್ನು ಆಚರಿಸಿದರೆ ನಮ್ಮ ಹಬ್ಬಕ್ಕೂ ಒಂದು ಶ್ರೇಷ್ಟ ಅರ್ಥವಂತಿಕೆ ಸಿಕ್ಕ ಹಾಗೇ.. ಅವರ ಬದುಕಿಗೂ ಬೆಳಕಾದ ಹಾಗೇ..
ಅಷ್ಟಕ್ಕೂ ಬಣ್ಣದ ಕೆಮಿಕಲ್ ಗಳನ್ನು ಉಪಯೋಗಿಸಿ ತಯಾರಿಸಿದ ಬಣ್ಣ-ಬಣ್ಣದ ಕ್ಯಾಂಡಲ್ ಗಳನ್ನು ಹಚ್ಚಿ, ಕರ್ಕಶ ಶಬ್ದ ಬೀರುವ ಮಾಲೆ ಪಟಾಕಿಗಳನ್ನು ಸಿಡಿಸಿ, ಗರ್ನಾಲುಗಳನ್ನು ಸ್ಪೋಟಿಸಿ, ರಾಕೇಟುಗಳನ್ನು ಹಾರಿಸಿ ಸುತ್ತಲಿನ ಪರಿಸರವನ್ನು ‘ಧೂಮ’ ಮಾಡುವ ಹಬ್ಬ ದೀಪಾವಳಿ ಅಲ್ಲವೇ ಅಲ್ಲ.. ಅದು ಮನೆ-ಮನದೊಳಗಿನ ಕತ್ತಲೆಯನ್ನು ಹೊಡೆದೊಡಿಸಿ ಸುಖ, ಶಾಂತಿ, ಪ್ರೇಮ-ಮಯ ವಾತವರಣವನ್ನು ಫಸರಿಸುವ ಹಬ್ಬ.. ಇಂತಹ ಪ್ರಪುಲ್ಲಿತ ವಾತವರಣ ಸೃಷ್ಟಿಗೆ ಮಣ್ಣಿನ ಹಣತೆ ನಮಗ್ಯಾಕೆ ಪಿಯೂಷದ ಕಲಷಪಾತ್ರೆ ಆಗಬಾರದು?
ಮಣ್ಣಿನ ಹಣತೆಯನ್ನು ಬೆಳಗುವಲ್ಲಿ ಇನ್ನೂ ಒಂದು ಮುಖ್ಯ ವಿಷಯ ಉಂಟು. ದೀಪಾವಳಿ ಅಂದರೆ ಅದು ಪ್ರಕೃತಿ ಅರಾಧನೆಯ ಪ್ರಮುಖ ಹಬ್ಬ..ಬಲೀಂದ್ರನನ್ನು ಅರ್ಚಿಸಿ, ಭತ್ತದ ತೆನೆಗಳನ್ನು ಪೂಜಿಸಿ, ಗೋವುಗಳನ್ನು ಪೂಜೆಗೈಯುವ ಈ ಹಬ್ಬ ಈ ನೆಲದ ಸನಾತನ ಪರಂಪರೆಯ ಭವ್ಯಾತಿ ಭವ್ಯ ಹಬ್ಬ. ಇಂತಹ ಹಬ್ಬಕ್ಕೆ ಈ ನೆಲದ ಮಣ್ಣಿನ ಮಕ್ಕಳು ತಯಾರಿಸಿದ ಮಣ್ಣಿನ ಹಣತೆಯನ್ನು ಬೆಳಗಿದರೆ ಅದಕ್ಕೊಂದು ಚೆನ್ನಾದ ಸೊಗಡು ಬಂದಿತು. ಬಲೀಂದ್ರ ದೇವ ಮನದುಂಬಿ ಹರಸಿ ನಮ್ಮನ್ನು ಹಾರೈಸಿಯಾನು..
ಅಷ್ಟೇ ಅಲ್ಲ; ಈ ದೇಶದ ಘನತೆವೆತ್ತ ಪ್ರಧಾನಿ ಹೋದಲ್ಲಿ ಬಂದಲ್ಲಿ ‘ಮೇಕ್ ಇನ್ ಇಂಡಿಯಾ’ದ ಬಗ್ಗೆ ಮಾತನಾಡುತ್ತಾರೆ. ದೇಸಿ ಉತ್ಪನ್ನಗಳನ್ನು ಬಳಸುವಂತೆ ಕರೆ ಕೊಡುತ್ತಾರೆ. ಈ ದೇಶದ ಜವಬ್ದಾರಿಯುತ ನಾಗರಿಕರಾಗಿ ನಾವು ನಮ್ಮತನ ತೋರಬೇಡವೇ? ಮಣ್ಣು ನೀರು ಬೆಂಕಿಯಂತಹ ಪಂಚ ಭೂತಾತ್ಮಗಳನ್ನು ಬಂಡವಾಳವನ್ನಾಗಿ ತಯಾರಾದ ಪರಿಶುದ್ಧ ದೇಸಿ ಉತ್ಪನ್ನ ಮಣ್ಣಿನ ಹಣತೆಯನ್ನು ಖರೀದಿಸಿದರೆ ಮೇಕ್ ಇನ್ ಇಂಡಿಯಾಕ್ಕೆ ನಮ್ಮದ್ದು ಕಿಂಚಿತ್ ಕೊಡುಗೆ ಎನ್ನಬಹುದು. ಸಾವಿರ ಪುಟಗಳ ಮಹಾಗ್ರಂಥ ಸಣ್ಣ ಅಕ್ಷರದಿಂದ ಆರಂಭ ಆಗುವ ಹಾಗೇ ಸಣ್ಣ ಸಣ್ಣ ಮಣ್ಣಿನ ಹಣತೆಗಳ ಖರೀದಿ ದೊಡ್ಡ ದೇಸಿ ಕ್ರಾಂತಿ ಮಾಡಬಹುದು?ಅಲ್ಲವೇ?ಯೋಚಿಸಿ?
ಮಣ್ಣಿನ ಹಣತೆಯ ಖರೀದಿಯಲ್ಲಿ ಇನ್ನೂ ಒಂದು ಮುಖ್ಯ ವಿಷಯ ಉಂಟು. ಪ್ರಸ್ತುತ ಚೀನ ಭಾರತದ ಪ್ರಬಲ ಶತ್ರುರಾಷ್ಟ್ರ. ಆದರೆ ದುರಂತ ಎಂದರೆ ಚೀನಿ ಉತ್ಪನ್ನಗಳಿಗೆ ಅಧಿಕ ಗ್ರಾಹಕರು ಇರುವುದು ಭಾರತದಲ್ಲೆ. ದೀಪಾವಳಿಯನ್ನು ರಂಗೇರಿಸುವ ಎಷ್ಟೋ ಗೂಡುದೀಪಗಳು, ಸಿಡಿಮದ್ದು ಇನ್ನಿತರ ಬಣ್ಣ ಬಣ್ಣದ ಉತ್ಪನ್ನಗಳು ಆಮದಾಗಿ ಬರುವುದು ಚೀನದಿಂದ. ಇದಕ್ಕೆ ವಿರೋಧವಾಗಿ ಸರ್ವಜ್ಞನ ವಂಶಸ್ಥರು ತಯಾರಿಸಿದ ಈ ನೆಲದ ಮಣ್ಣಿನ ಹಣತೆಗಳನ್ನು ಖರೀದಿಸಿ ದೀಪಾವಳಿಯನ್ನು ಆಚರಿಸೋಣ. ಚೀನ ಉತ್ಪನ್ನಗಳಿಗೆ ಬೈ ಬೈ ಅನ್ನೋಣ. ದೇಶಪ್ರೇಮವನ್ನು ಮೆರೆಯೋಣ ಎನಂತೀರಿ?
ಇಲ್ಲಿ ಇನ್ನೊಂದು ಮುಖ್ಯ ಅಂಶವೂ ಇದೆ. ಪ್ರತಿ ವರುಷ ದೀಪಗಳ ಹಬ್ಬ ದೀಪಾವಳಿ ಕೆಲವು ಮಕ್ಕಳ ಬದುಕಿಗೆ. ಅಂಧಕಾರ ತರುವ ಹಬ್ಬವೂ ಆಗಿಬಿಡುತ್ತದೆ. ಅತಿಯಾದ ಮದ್ದುಗಳುಳ್ಳ ಪಟಾಕಿಯನ್ನು ಬೇಜವಾಬ್ದಾರಿಯುತವಾಗಿ ಸಿಡಿಸಿ ಮಕ್ಕಳು ಅಂಗಾಗವನ್ನೇ ಊನ ಮಾಡಿಕೊಳ್ಳುವುದನ್ನು ಮಾದ್ಯಮಗಳಲ್ಲಿ ನೋಡುತ್ತೇವೆ. ಹಾಗಾಗಿ ನಮ್ಮ ಮನೆಯ ಮಕ್ಕಳಿಗೆ ಪಟಾಕಿ ಸಿಡಿತದಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ತಿಳಿಸಿ ಅವರ ಕೈಗೆ ಮಣ್ಣಿನ ಹಣತೆಯನ್ನು ಇಡೋಣ. ಬತ್ತಿಯನ್ನು ಹಾಕಿ ಎಣ್ಣೆಯನ್ನು ಎರೆದು ಮನೆತುಂಬ ಹಚ್ಚುವಂತೆ ಪ್ರೇರೇಪಿಸೋಣ. ಮಕ್ಕಳ ಆ ಮುಗ್ಧ ನಗುವಿನಲಿ ಆನಂದವನ್ನು ಹಂಚೋಣ..ನಿಜವಾದ ದೀಪಾವಳಿ ಅಂದರೆ ಸುಖ-ಶಾಂತಿ ಅಂದರೆ ಇದೇ ತಾನೇ?
ಎಲ್ಲವುದಕ್ಕಿಂತ ಮುಖ್ಯ ದೀಪಾವಳಿ ಸಿಡಿಮದ್ದಿನ ಹಬ್ಬವಲ್ಲ; ಬಾಡೂಟದ ವೈಭೋಗವು ಅಲ್ಲ; ಅದು ಶುದ್ಧವಾದ ದೀವಿಟಿಗೆಗಳ ಹಭ್ಭ. ಆ ಹಬ್ಬವನ್ನು ಮಣ್ಣಿನ ಹಣತೆಯಲಿ ಆರಾಧಿಸೋಣ.. ಆನಂದಿಸೋಣ.
ಸಮಸ್ತರಿಗೂ ದೀಪಾವಳಿಯ ಶುಭಕಾಮನೆ.











