ಬೆಂಗಳೂರು(ಅ.೧೧, ಕುಲಾಲ್ ವರ್ಲ್ಡ್ ನ್ಯೂಸ್): ಕರ್ನಾಟಕ ರಾಜ್ಯ ಕುಂಭಕಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ಕೆ.ವಿ ಶ್ರೀನಿವಾಸ್ ಅವರನ್ನು ಸರಕಾರ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.
ಕುಂಬಾರ ಸಮಾಜದ ಮುಖಂಡರಾಗಿರುವ ಕೆ.ವಿ ಶ್ರೀನಿವಾಸ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದು, ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಕೊತ್ತೂರು ಗ್ರಾಮದವರು. ಈ ಹಿಂದೆ ಮಂಡಳಿ ಅಧ್ಯಕ್ಷರನ್ನಾಗಿ ಸರಕಾರ ಶಿವಕುಮಾರ ಚೌಡ ಶೆಟ್ಟಿ ಅವರನ್ನು ನೇಮಕ ಮಾಡಿತ್ತು. ಮಂಡಳಿಯನ್ನು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸ್ವತಂತ್ರಗೊಳಿಸದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಅವರು ಕೆಲವೇ ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಪಕ್ಷವನ್ನು ಸೇರಿದ್ದರು. ಇದೀಗ ಆಸ್ಥಾನಕ್ಕೆ ಶ್ರೀನಿವಾಸ್ ಅವರನ್ನು ಸರಕಾರ ನೇಮಿಸಿದೆ.
ಮಂಗಳೂರಿಗೆ ಭೇಟಿ :
ಕುಂಭಕಲಾ ಅಭಿವೃದ್ದಿ ಮಂಡಳಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಕೆ ವಿ ಶ್ರೀನಿವಾಸ್ ಅವರು ಕರಾವಳಿಯ ಕುಲಾಲ/ ಕುಂಬಾರ ಸಮುದಾಯದ ನಾಯಕರನ್ನು ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲ ಮಾತೃಸಂಘದಲ್ಲಿ ಭೇಟಿಯಾಗಿ ಕುಂಭಕಲಾ ಅಭಿವೃದ್ಧಿ ನಿಗಮವನ್ನ ಸ್ವತಂತ್ರ ಕುಂಭಕಲಾ ನಿಗಮವನ್ನಾಗಿ ಮಾಡಿಸುವ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭ ಡಾ. ಅಣ್ಣಯ್ಯ ಕುಲಾಲ್ , ತೇಜಸ್ವಿರಾಜ್, ಸುಜೀರ್ ಕುಡುಪು, ಪುರುಷೋತ್ತಮ್ ಕಲ್ಬಾವಿ, ಮಹಾಬಲ ಕುಲಾಲ್, ಅಶೋಕ್ ಕುಲಾಲ್, ಕುಶಾಲಪ್ಪ, ಪ್ರಸಾದ್ ಸಿದ್ದಕಟ್ಟೆ, ಜಯರಾಮ್ ಕೆ.ವಿ, ಸದಾಶಿವ ಬಿಜೈ, ಪ್ರಕಾಶ್ ಬಂಟ್ವಾಳ, ಮಮತಾ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.