ಮಂಗಳೂರು(ಅ.೦೩, ಕುಲಾಲ್ ವರ್ಲ್ಡ್ ನ್ಯೂಸ್): ಗೆಳೆಯರೊಂದಿಗೆ ಆಟ ಆಡಿಕೊಂಡು ಬೆಳೆಯಬೇಕಾದ ಅಸಹಾಯಕ ಕುಟುಂಬವೊಂದರ ಬಾಲಕನೋರ್ವ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೆ ಬಾಲಕನ ಪೋಷಕರು ಸಹೃದಯಿ ದಾನಿಗಳ ನೆರವು ಕೋರಿದ್ದಾರೆ.
ಹಳೆಯಂಗಡಿ ಸಮೀಪದ ತೋಕೂರು ಗ್ರಾಮದ ದೇನೊಟ್ಟು ಎಂಬಲ್ಲಿಯ ನಿವಾಸಿ ನಾರಾಯಣ ಅಂಚನ್- ಹರಿಣಾಕ್ಷಿ ದಂಪತಿಯ ಒಬ್ಬನೇ ಮಗ ಮನೋಜ್ ಕುಲಾಲ್ (೧೮ ವರ್ಷ)ಗೆ ಕಳೆದ ಏಳು ವರ್ಷಗಳಿಂದ ಕಾಡುತ್ತಿರುವ ವಿಚಿತ್ರ ಮಾನಸಿಕ ಕಾಯಿಲೆಯಿಂದ ಉಳಿಸಿಕೊಳ್ಳಲು ಕುಟುಂಬ ಹರಸಾಹ ಪಡುತ್ತಿದೆ.
ಕಾಯಿಲೆಯ ಲಕ್ಷಣ: ಮನೋಜ್ ಬಾಲ್ಯದಲ್ಲಿ ಎಲ್ಲ ಮಕ್ಕಳಂತಿದ್ದು ಆರನೇ ತರಗತಿ ಬಳಿಕ ವಿಚಿತ್ರವಾಗಿ ವರ್ತಿಸತೊಡಗಿದ್ದ. ಬೆಪ್ಪು ಮೋರೆ ಹಾಕಿಕೊಂಡು ತನ್ನಷ್ಟಕೇ ಅಳುವುದು, ಬೊಬ್ಬೆ ಹೊಡೆಯುವುದು, ಕೈಗೆ ಸಿಕ್ಕಿದ್ದೆಲ್ಲಾ ಎಸೆಯುವುದು ಇತ್ಯಾದಿ ಮಾಡುತ್ತಿದ್ದು, ಕೆಲವೊಮ್ಮೆ ಇಡೀ ರಾತ್ರಿ ನಿದ್ರೆ ಮಾಡುತ್ತಿಲ್ಲ. ಕಾಯಿಲೆ ಕಾಣಿಸಿಕೊಂಡಾಗಿನಿಂದಲೂ ಸಂಕಷ್ಟದಲ್ಲಿರುವ ತಂದೆ-ತಾಯಿ ಮಗನ ವಿಚಿತ್ರ ಕಾಯಿಲೆಯಿಂದ ದಿಗ್ಬ್ರಾಂತರಾಗಿದ್ದು, ಮನೆ ಬಿಟ್ಟು ಕೂಲಿ ನಾಲಿ ಬದುಕಲು ಕಷ್ಟವಾಗಿದ್ದು ನಿತ್ಯ ಮಗುವಿನ ಆರೈಕೆಗೆ ಒಬ್ಬರ ಸಹಾಯ ಬೇಕಿದೆ. ಮನೋಜ್ ನ ತಂದೆ ನಾರಾಯಣ ಅವರು ಚಿಕ್ಕ ಕ್ಯಾಂಟೀನ್ ವೊಂದರಲ್ಲಿ ದುಡಿಯುತ್ತಿದ್ದು, ತಾಯಿ ಮಾತ್ರ ಕಳೆದ ಏಳು ವರ್ಷಗಳಿಂದ ನಿರಂತರ ಮಗನ ಆರೈಕೆಯಲ್ಲೇ ತೊಡಗಿದ್ದಾರೆ.
ಅಸಹಾಯಕತೆ: ಕಡು ಬಡ ಕುಟುಂಬದ ನಾರಾಯಣ ದುಡಿಮೆಯ ಹಣ ಮನೆ ಖರ್ಚಿಗೆ ಸರಿಯಾಗುತ್ತಿದೆ. ಜೊತೆಗೆ ಮಗನ ಚಿಕಿತ್ಸೆ, ಪಿಯುಸಿ ತರಗತಿ ಕಲಿಯುತ್ತಿರುವ ಮಗಳು ರಶ್ಮಿಯ ವಿದ್ಯಾಭ್ಯಾಸ, ಹರಿಣಾಕ್ಷಿ ಅವರ ವಯೋವೃದ್ಧ ತಾಯಿಯ ಆರೈಕೆ ಎಲ್ಲವೂ ಮಾಡಬೇಕಾಗಿದ್ದು, ಇವರ ವರಮಾನ ಏನೇನೂ ಸಾಕಾಗುತ್ತಿಲ್ಲ. ಮಗನ ಚಿಕಿತ್ಸೆಗಾಗಿ ಮಂಗಳೂರಿನ ಹಲವು ಕಡೆ ಆಸ್ಪತ್ರೆಗಳಿಗೆ ಅಲೆದು ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ. ಭೂತ-ಪ್ರೇತದ ಬಾಧೆ ಇರಬಹುದೆಂಬಶಂಕೆಯಲ್ಲಿ ಅದಕ್ಕೂ ಹಣ ಸುರಿಯಲಾಗಿದೆ. ಆದರೆ ಸುಧಾರಿಸಿಕೊಳ್ಳದ ಮಗನ ಹೆಚ್ಚಿನ ಚಿಕಿತ್ಸೆ ನೀಡಿ ಗುಣಪಡಿಸಲು ಇದೀಗ ಶಿವಮೊಗ್ಗದ ಮಾನಸ ಚಿಕಿತ್ಸಾಲಯದ ಮೊರೆ ಹೋಗಿದ್ದಾರೆ. ಇಲ್ಲಿಯ ಔಷಧದಿಂದ ಸ್ವಲ್ಪ ಸುಧಾರಣೆ ಕಂಡುಬಂದಿದೆ. ಆದರೆ ಅಷ್ಟು ದೂರದ ಪ್ರಯಾಣ ವೆಚ್ಚ/ ಆಸ್ಪತ್ರೆ, ಔಷಧಿ ಖರ್ಚು ನಿಭಾಯಿಸಲು ಈ ಬಡ ಕುಟುಂಬ ಹರಸಾಹಸ ಪಡುತ್ತಿದೆ. ಒಬ್ಬನೇ ಪುತ್ರನನ್ನು ಗುಣಪಡಿಸಿಕೊಂಡು ಉಳಿಸಲು ಹೆತ್ತ ಕರಳು ಚಡಪಡಿಸುತ್ತಿದ್ದು ಸಹೃದಯಿ ದಾನಿಗಳ ಧನ ಸಹಾಯಕ್ಕೆ ಮೊರೆ ಇಟ್ಟಿದೆ.
ಈ ಬಡ ಕುಟುಂಬಕ್ಕೆ ಧನ ಸಹಾಯ ನೀಡುವವರು ಮನೋಜ್ ನ ತಾಯಿ ಹರಿಣಾಕ್ಷಿ ಅವರ ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ.
Harinakshi
Canara bank
Halengady branch
A/c No : 06371012 04538
IFSC Code: CNRB0000637
phone : 9632871598