ಕಾಪು(ಸೆ.೨೯, ಕುಲಾಲ್ ವರ್ಲ್ಡ್ ನ್ಯೂಸ್): ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬೆಳಪು ಗ್ರಾಮದ ಪಣಿಯೂರಿನ ಹರೀಶ್ ಮೂಲ್ಯ ಅವರಿಗೆ ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ಕಾಪು ಘಟಕದಿಂದ 54,300/- ರೂ. ಹಣ ಸಂಗ್ರಹಿಸಿ ನೀಡುವ ಮೂಲಕ ಅವರ ನೋವಿಗೆ ಆಸರೆಯಾಗಿ ಮಾನವೀಯತೆ ಮೆರೆದಿದ್ದಾರೆ.
ಐವರು ಸಹೋದರಿಯರ ಬದುಕಿನ ಭದ್ರತೆಗೆ ಮದುವೆಯ ಸಂಸ್ಕಾರದ ಮೂಲಕ ಸ್ಥಿರತೆಯನ್ನು ಕಲ್ಪಿಸಿ, ತಾನಿನ್ನು ಬದುಕು ಕಟ್ಟಿಕೊಳ್ಳಬೇಕೆನ್ನುವಷ್ಟರಲ್ಲೇ ಎರಡೂ ಕಿಡ್ನಿ ವೈಫಲ್ಯವು ಸಮಸ್ಯೆಯಾಗಿ ಕಾಡಿದ್ದು ವಿಧಿಯಾಟದ ಕ್ರೂರತೆಗೆ ಕಂಗೆಟ್ಟು ಕುಳಿತಾಗ, ಹರೀಶ್ ಮೂಲ್ಯ ಅವರ ಸಹಾಯಕ್ಕೆ ಧಾವಿಸಿದ ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ಕಾಪು ಘಟಕದ ಅಧ್ಯಕ್ಷರಾದ ಉದಯ್ ಕುಲಾಲ್ ಕಳತ್ತೂರುರವರ ನೇತೃತ್ವದ ಉತ್ಸಾಹಿ ತಂಡ ಹರೀಶ್ ಮೂಲ್ಯರ ದಯನೀಯ ಸ್ಥಿತಿಯನ್ನು ಹಲವಾರು ವಾಟ್ಸಪ್ ಗ್ರೂಪ್ ಗಳ ಮುಖಾಂತರ ಸಮುದಾಯ ಬಾಂಧವರಿಗೆ ಸಚಿತ್ರ ವರದಿಯಲ್ಲಿ ವಿವರಿಸಿ ಸಹಾಯ ಕೋರಿದರು. ಅನ್ಯರ ನೋವಿಗೆ ಧ್ವನಿಯಾಗುವ ಸಹೃದಯಿಗಳ ಕರುಣೆಯ ಕಡಲು ಉಕ್ಕಿ ಹರಿದು ಸಹಕಾರದ ರೂಪದಲ್ಲಿ 54, 300/- ರೂ. ಸಂಗ್ರಹಗೊಂಡಿತ್ತು.
ಸಂಗ್ರಹಗೊಂಡ ಹಣವನ್ನು ಸೆ.೨೮ರಂದು ಹರೀಶ್ ಅವರ ಮನೆಗೆ ತೆರಳಿ ಹಸ್ತಾ೦ತರ ಮಾಡಲಾಯಿತು. ಈ ಸಂದರ್ಭ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಶಂಕರ್ ಕುಲಾಲ್ ಪೆರಂಪಳ್ಳಿ , ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ಸುನಿಲ್ ಮೂಲ್ಯ ,ಕರಾವಳಿ ಕುಲಾಲ ಕುಂಬಾರರಯುವ ವೇದಿಕೆ ಕಾಪು ವಲಯದ ಅಧ್ಯಕ್ಷ ಉದಯ ಕುಲಾಲ್ , ಸುಧಾಕರ ಕುಲಾಲ್ ಪಣಿಯೂರು, ಜನಾರ್ಧನ ಕುಲಾಲ್ ಪಣಿಯೂರು, ರವೀಂದ್ರ ಕುಲಾಲ್ ಪಣಿಯೂರು ಮೊದಲಾದವರು ಹಾಜರಿದ್ದರು.