ಬೆಳ್ತಂಗಡಿ ಕುಲಾಲ-ಕುಂಬಾರರ ಬೃಹತ್ ಸಮಾವೇಶ-ಹಕ್ಕೊತ್ತಾಯದ ಪೂರ್ವಭಾವಿ ಸಭೆ
ಬೆಳ್ತಂಗಡಿ: ಕುಲಾಲ-ಕುಂಬಾರ ಸಮುದಾಯದ ಬೃಹತ್ ಸಮಾವೇಶ ಮತ್ತು ಹಕ್ಕೊತ್ತಾಯ ಸಭೆ ನಡೆಸುವ ಕುರಿತು ಪೂರ್ವಭಾವಿ ಸಭೆಯು ರವಿವಾರ ಗುರುವಾಯನ ಕುಲಾಲ ಮಂದಿರದಲ್ಲಿ ಜರಗಿತು.
ಈ ವೇಳೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಸ್ಥಾಪಕ ಅಧ್ಯಕ್ಷ ಡಾ| ಎಂ. ಅಣ್ಣಯ್ಯ ಕುಲಾಲ್ ಜನಗಣತಿಯ ಸಮೀಕ್ಷಾ ಕರಪತ್ರವನ್ನ ಬಿಡುಗಡೆ ಮಾಡಿ ಮಾತನಾಡಿ, ಕುಲಾಲ ಕುಂಬಾರ ಕುಟುಂಬದ ನಿಖರ ಜನಸಂಖ್ಯೆಯನ್ನು ರಾಜ್ಯದಲ್ಲೇ ಪ್ರಪ್ರಥಮ ಜಾತಿ ಜನಗಣತಿಯ ಮೂಲಕ ಸಮೀಕ್ಷೆ ನಡೆಸಲು ಮುಂದಾಗಿರುವ ಬೆಳ್ತಂಗಡಿ ಕುಲಾಲ ಕುಂಬಾರ ಸಂಘಗಳ ಹೆಜ್ಜೆ ರಾಜ್ಯಕ್ಕೆ ಮಾದರಿಯಾಗಲಿದೆ. ಇದನ್ನು ಇಡೀ ರಾಜ್ಯದ ಕುಲಾಲ್ ಕುಂಬಾರ ಸಂಘಟನೆಗಳು ಸ್ಪೂರ್ತಿಯಾಗಿ ಪಡೆದು ಜನಗಣತಿಯಲ್ಲಿ ತೊಡಗಿಸಿಕೊಳ್ಳಬೇಕೆಂದರು.
ತಾಲೂಕು, ಜಿಲ್ಲೆ ಹಾಗೂ ರಾಜ್ಯದಲ್ಲಿ ಕುಲಾಲ ಕುಂಬಾರರು ಬಲಿಷ್ಠ ಸಂಘಟನೆಯಾಗಿ ಸಂಘಟಿತರಾಗುತ್ತಿದ್ದು, ರಾಜಕೀಯ ನಾಯಕರ ಮತ್ತು ಸರಕಾರದ ಕಣ್ಣು ತೆರೆಸಲು ಹಾಗೂ ರಾಜಕೀಯ ಸ್ಥಾನಮಾನ ನೀಡಲು ಈ ಹಕ್ಕೋತ್ತಾಯ ಸಮಾವೇಶದ ಮೂಲಕ ಕುಲಾಲ ಕುಂಬಾರರ ಬೃಹತ್ ಶಕ್ತಿಪ್ರದರ್ಶನದ ವೇದಿಕೆಯಾಗಲಿದೆ ಎಂದರು.
82 ಗ್ರಾಮಗಳ ಪ್ರತಿನಿಧಿಗಳ 16 ವಿವಿಧ ಸಮಿತಿಗಳ ಮೂಲಕ 80ಕ್ಕೂ ಅಧಿಕ ನಾಯಕತ್ವದಲ್ಲಿ ಜಾತಿ ಜನಗಣತಿಗೆ ಜವಾಬ್ದಾರಿಯನ್ನು ನೀಡಲಾಯಿತು. 2018ರ ಜನವರಿಯಲ್ಲಿ ಸುಮಾರು 20 ಸಾವಿರ ಕುಲಾಲ ಕುಂಬಾರ ಸಮುದಾಯದವರನ್ನು ಬೆಳ್ತಂಗಡಿಯಲ್ಲಿ ಒಟ್ಟುಸೇರಿಸಿ ಹಕ್ಕೊತ್ತಾಯ ಮಂಡಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಈ ಬಗ್ಗೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಲಾಯಿತು.
ಬೃಹತ್ ಸಮಾವೇಶ ಮತ್ತು ಹಕ್ಕೊತ್ತಾಯ ಸಮಿತಿ ಅಧ್ಯಕ್ಷ ಹರೀಶ್ ಕಾರಿಂಜ, ಸಲಹೆಗಾರ ಹೆಚ್. ಪದ್ಮಕುಮಾರ್, ಜಯರಾಜ್ ಪ್ರಕಾಶ್, ಚಂದ್ರಕಾಂತ್, ಶ್ರೀನಿವಾಸ ಚಾರ್ಮಾಡಿ, ಮೋಹನ ಬಂಗೇರ, ಪುಷ್ಪರಾಜ್ ಲಾಯಿಲ, ಉಮೇಶ್ ಕುಲಾಲ್, ವೇದಾವತಿ ನಾವೂರು, ಸೋಮನಾಥ ಕುಕ್ಕೇಡಿ, ಉಮೇಶ್ ನಡ್ತಿಕಲ್ಲು,, ಮಹೇಶ್ ಕುಂಬಾರ, ಸದಾನಂದ ಮೂಲ್ಯ, ಮಾದವ ಶಿರ್ಲಾಲು, ವಿಜಯ ನಾವೂರು, ಮಿಥುನ್ ಕುಲಾಲ್, ವಿಎನ್ ಕುಲಾಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.