ಬಂಟ್ವಾಳ: ಬಿ.ಸಿ.ರೋಡ್ ಕುಲಾಲ ಮಠ ಕುಂಭೋದರಿ ದೇವಿ ನಾಗಬ್ರಹ್ಮ ಮತ್ತು ಪರಿವಾರ ದೈವಗಳ ಕ್ಷೇತ್ರಕ್ಕೆ ಸೆ. 17ರಂದು ತಡರಾತ್ರಿ ಕಳ್ಳರು ನುಗ್ಗಿ ದೇವಳದ ಕಾಣಿಕೆ ಡಬ್ಬಿಯ ಲಾಕರ್ ಒಡೆಯಲು ಯತ್ನಿಸಿ ಸಾಧ್ಯವಾಗದೆ ಅದರ ಮುಚ್ಚಲವನ್ನು ಬಾಗಿಸಿ ಸುಮಾರು ರೂ. ಹದಿನೈದು ಸಾವಿರದಷ್ಟು ನಗದು ದೋಚಿದ ಘಟನೆ ಸಂಭವಿಸಿದೆ.
ಸೋಮವಾರ ಬೆಳಗ್ಗೆ ಸುಮಾರು ಆರೂವರೆ ಗಂಟೆಗೆ ಎಂದಿನಂತೆ ದೇವರು ಮತ್ತು ದೈವಗಳಿಗೆ ದೀಪ ಇಡುವುದಕ್ಕಾಗಿ ಸ್ಥಳೀಯ ನಿವಾಸಿ ಸೋಮನಾಥ ಕುಲಾಲ್ ಬಂದಾಗಲೇ ಕಳವು ಕೃತ್ಯ ನಡೆದಿರುವುದು ತಿಳಿದು ಬಂದಿದೆ .
ಆರು ವರ್ಷಗಳ ಹಿಂದೆಯಷ್ಟೇ ಇಲ್ಲಿನ ಕುಲಾಲ ಸಮುದಾಯದ ಕರಂಬೆರ ಕುಟುಂಬಸ್ಥರು ದೇಗುಲವನ್ನು ಪುನರ್ ನವೀಕರಿಸಿ ಬ್ರಹ್ಮಕಲಶೋತ್ಸವ ನಡೆಸಿದ್ದರು. ಆ ಬಳಿಕ ಪ್ರತೀ ವರ್ಷ ಕಳ್ಳತನ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಲಾಕರ್ ಮತ್ತು ಸಿಸಿ ಕೆಮರಾ ಅಳವಡಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದು, ಬಂಟ್ವಾಳ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಅವರು ಸ್ಥಳ ಪರಿಶೀಲನೆ ನಡೆಸಿ ಹೋಗಿದ್ದಾಗಿ ತಿಳಿದು ಬಂದಿದೆ. ಕಳವು ಕೃತ್ಯದ ಬಗ್ಗೆ ಯಾವುದೇ ವರ್ತಮಾನ ಇಲ್ಲದ ಕಾರಣ ಪ್ರಕರಣ ದಾಖಲಾಗಿಲ್ಲ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಸಿಸಿ ಕೆಮರಾದಲ್ಲಿ ದೃಶ್ಯ ದಾಖಲು
ಸೋಮವಾರ ಮುಂಜಾನೆ ಸುಮಾರು 3 ಗಂಟೆಗೆ ಬಂದಿದ್ದ ಕಳ್ಳರು ಬೆಳಿಗ್ಗೆ ಸುಮಾರು 5. 45 ಗಂಟೆ ತನಕ ಲಾಕರ್ ತೆರೆಯಲು ಯತ್ನಿಸಿರುವುದು ಕ್ಷೇತ್ರದಲ್ಲಿ ಅಳವಡಿಸಿರುವ ಸಿಸಿ ಕೆಮರಾದಲ್ಲಿ ಸ್ಪಷ್ಟ ದಾಖಲಾಗಿದೆ. ಲಾಕರ್ ಒಡೆದು ಕಳವು ನಡೆಸುವ ಯತ್ನವು ವಿಫಲವಾಗಿದ್ದು ಅದರ ಮುಚ್ಚಲವನ್ನು ಬಾಗಿಸುವಲ್ಲಿ ಕಳ್ಳರು ಯಶಸ್ವಿಯಾಗಿದ್ದಾರೆ.
ಇಬ್ಬರು ತೆಳ್ಳಗಿನ ಶರೀರದ ಉದ್ದಕ್ಕಿರುವ ಯುವಕರು ಮೊದಲಿಗೆ ಒಂದು ಚೀಲ ಮತ್ತು ಕಬ್ಬಿಣದ ಸಲಾಕೆ ಸಹಿತ ಸ್ಕೂ ಡ್ರೈವರ್ ಮತ್ತಿತರ ಸಾಮಗ್ರಿ ಹಿಡಿದು ಕೊಂಡು ಬಂದು ಸುತ್ತಲೂ ಹುಡುಕಾಟ ನಡೆಸಿದ್ದಾರೆ. ಬಳಿಕ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಖರೀದಿಸಿದ್ದ ಎಂಟು ಕ್ವಿಂಟಾಲ್ ತೂಕದ ಲಾಕರ್ ಮುರಿಯಲು ಪರದಾಡಿದ್ದಾರೆ.
ಲಾಕರಿನ ಮೂಲೆ ಮೂಲೆಗೆ ಸುತ್ತಿಗೆಯಿಂದ ಬಡಿದು ಬಾಗಿಸಿ ಬಳಿಕ ಸಣ್ಣ ಪ್ರಮಾಣದ ತೂತು ಕೊರೆದು ಅದರೊಳಗಿನಿಂದ ಸ್ಕ್ರೂಡ್ರೈವರ್ನಿಂದಲೇ ಅಂದಾಜು 15 ಸಾವಿರ ಮೊತ್ತದ ನಗದು ಎಗರಿಸಿರುವುದು ಕಾಣುತ್ತದೆ. ಸಿಸಿ ಕೆಮರಾ ಇರುವುದು ಗಮನಕ್ಕೆ ಬರುತ್ತಲೆ ವಿದ್ಯುದ್ದೀಪವನ್ನು ಆರಿಸಲಾಗಿತ್ತು. ಸಿಸಿ ಕೆಮರಾ ದ್ರಶ್ಯಾವಳಿಯನ್ನು ಅಪರಾಧ ಪತ್ತೆ ವಿಭಾಗದ ಪೊಲೀಸರಿಗೆ ನೀಡಿದ್ದಾಗಿ ಮಾಹಿತಿದಾರರು ತಿಳಿಸಿದ್ದಾರೆ.