ಮಂಗಳೂರು(ಸೆ.೧೭, ಕುಲಾಲ್ ವರ್ಲ್ಡ್ ನ್ಯೂಸ್ ): ಸುಲಭ ಹಣ ಸಂಪಾದನೆಗೆ ನಾನಾ ವೇಷ ಹಾಕುವ ಜನರನ್ನು ನಾವು ನೀವೆಲ್ಲ ನೋಡಿದ್ದೇವೆ. ಆದರೆ ಅಶಕ್ತರ ನೆರವಿಗೆ ವೇಷಹಾಕಿ ಹಣ ಹೊಂದಿಸಿ ಕೊಡುವವರು ಬಲು ಅಪರೂಪ. ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭ ಹುಲಿ ವೇಷ ಹಾಕಿರುವ ಯುವಕರ ತಂಡವೊಂದು ಇಂಥ ಅರ್ಥಪೂರ್ಣ ಕಾರ್ಯ ಮಾಡಿ ಸಮಾಜಕ್ಕೆ ಆದರ್ಶವಾಗಿದ್ದಾರೆ.
ಕೃಷ್ಣ ಜನ್ಮಾಷ್ಟಮಿ ಬಂದ್ರೆ ಸಾಕು, ಉಡುಪಿಯ ಬೀದಿ ಬೀದಿಗಳಲ್ಲಿ ವೇಷಗಳದ್ದೇ ಕುಣಿತ. ಅಷ್ಟಮಿ ಹೆಚ್ಚು ಜನಮನ ಸೆಳೆಯುವುದು ಹುಲಿ ವೇಷ ಕುಣಿತ. ಹೀಗೆ ಯಾವುದೇ ಫಲಾಪೇಕ್ಷೆಯಿಲ್ಲದೆ ಕೇವಲ ಖುಷಿಗಾಗಿ ಹುಲಿವೇಷ ಹಾಕಿದ್ದ ಯುವಕರ ತಂಡವೊಂದು ಸಂಗ್ರಹಿಸಿದ ಹಣವನ್ನು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಜಪ್ಪಿನಮೊಗರು ತಂದೊಳಿಗೆ ನಿವಾಸಿ ಮನ್ವಿತಾ ಕುಲಾಲ್ ಅವರ ಚಿಕಿತ್ಸೆಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಉಡುಪಿ ಕಲ್ಮಾಡಿಯ ಸುರೇಶ್ ಪೂಜಾರಿ ಮತ್ತು ಹರೀಶ್ ಪೂಜಾರಿ ಬಳಗದವರು ಸೆ.೧೭ರಂದು ಮನ್ವಿತಾ ಚಿಕಿತ್ಸೆ ಪಡೆಯುತ್ತಿರುವ ಮಂಗಳೂರು ಜ್ಯೋತಿಯ ಕೆಎಂಸಿ ಆಸ್ಪತ್ರೆಗೆ ತಮ್ಮ ಹಿತೈಷಿಗಳೊಂದಿಗೆ ಆಗಮಿಸಿ 50,000 ರೂ. ಚೆಕ್ ಅನ್ನು ನೀಡಿದರು.
ಸುರೇಶ್ ಪೂಜಾರಿ ಮತ್ತು ಹರೀಶ್ ಪೂಜಾರಿ ಬಳಗವು ಕೃಷ್ಣಾಷ್ಟಮಿ ಪ್ರಯುಕ್ತ ಉಡುಪಿಯಲ್ಲಿ ಹುಲಿವೇಷವನ್ನು ಹಾಕಿದ್ದು, ಇದರಿಂದ ಬಂದ ಹಣವನ್ನು ಅಶಕ್ತರಿಗೆ ದಾನ ಮಾಡಬೇಕೆಂಬ ಆಶಯ ಹೊಂದಿದ್ದರು. ಅದರಂತೆ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ನಲ್ಲಿ ಪ್ರಕಟವಾದ ಮನ್ವಿತಾ ಕುಲಾಲ್ ಬಗೆಗಿನ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಇವರು `ಕುಲಾಲ್ ವರ್ಲ್ಡ್’ ನ ಹೇಮಂತ್ ಕುಮಾರ್ ಕಿನ್ನಿಗೋಳಿ ಹಾಗೂ ರಮೇಶ್ ಕುಮಾರ್ ವಗ್ಗ ಅವರನ್ನು ಸಂಪರ್ಕಿಸಿ ಅವರ ಸಮ್ಮುಖದಲ್ಲಿ ಹಣವನ್ನು ಮನ್ವಿತಾ ಅವರ ತಂದೆ ಸುರೇಶ ಬಂಗೇರ ಅವರಿಗೆ ಹಸ್ತಾ೦ತರ ಮಾಡಿದರು.
ಒಟ್ಟಿನಲ್ಲಿ ವೇಷ ಹಾಕಿ ಹಣ ಸ್ವಂತಕ್ಕಾಗಿ ಬಳಸದೆ ನೊಂದವರಿಗೆ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇಂತಹ ಧನಾತ್ಮಕ ಚಿಂತನೆ ಎಲ್ಲ ಯುವ ಶಕ್ತಿಗೂ ಬರಲಿ ಅನ್ನುವುದೇ ನಮ್ಮ ಆಶಯ.