ಮಂಗಳೂರು(ಸೆ.೧೭, ಕುಲಾಲ್ ವರ್ಲ್ಡ್ ನ್ಯೂಸ್): ಬಡವರ ಸೇವೆಯೇ ಭಗವಂತನ ಸೇವೆ’ ಎಂಬಧ್ಯೇಯನ್ನಿಟ್ಟುಕೊಂಡ ಕೆಲ ಯುವ ಮನಸ್ಸುಗಳು ಒಂದಾಗಿ ಯುವ ಜನತೆ ಅತಿಯಾಗಿ ಉಪಯೋಗಿಸುವ ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿಕೊಂಡು ಸಮಾಜ ಸೇವೆಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಸದುದ್ದೇಶದಿಂದ ಆರಂಭಗೊಂಡ `ಕುಲಾಲ್ ವರ್ಲ್ಡ್’ ವಾಟ್ಸಪ್ ಗ್ರೂಪ್ ಹೆಮ್ಮೆಯ ಸಹೃದಯಿಗಳ ನೆರವಿನಿಂದ ಹಲವಾರು ಅಶಕ್ತರನ್ನು ಗುರುತಿಸಿ ಅವರಿಗೆ ಸಹಾಯಹಸ್ತ ಚಾಚುತ್ತಾ ನೊಂದವರ ಕಣ್ಣೀರು ಒರೆಸುವ ಕೆಲಸವನ್ನು ಮಾಡುತ್ತಾ ಬರುತ್ತಿದೆ.
`ಕುಲಾಲ್ ವರ್ಲ್ಡ್’ ನ ೧೪ನೇ ಸಹಾಯಹಸ್ತ ಯೋಜನೆಯ ಅಂಗವಾಗಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಂಗಳೂರು ಜಪ್ಪಿನಮೊಗರು ತಂದೊಳಿಗೆಯ ಮನ್ವಿತಾ ಕುಲಾಲ್ ಅವರ ನೋವಿನ ಕಥೆಯನ್ನು ಆಯ್ದುಕೊಂಡು ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಮುಂದಿಟ್ಟಾಗ ತಾ ಮುಂದು ತಾ ಮುಂದು ಎಂಬಂತೆ 100ಕ್ಕೂ ಮಿಕ್ಕಿ ದಾನಿಗಳು ಸಹಾಯಹಸ್ತ ಚಾಚಿದ್ದು `ಹನಿ ಹನಿ ಕೂಡಿ ಹಳ್ಳ’ ಎಂಬ ಮಾತಿನಂತೆ ಒಟ್ಟು 1,60,560.00ರೂ. (ಒಂದು ಲಕ್ಷದ ಅರುವತ್ತು ಸಾವಿರದ ಐನೂರ ಅರುವತ್ತು ರೂ.) ಸಂಗ್ರಹಗೊಂಡಿತ್ತು. ಸಂಗ್ರಹಗೊಂಡ ಹಣವನ್ನು ಮಂಗಳೂರು ಜ್ಯೋತಿ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮನ್ವಿತಾ ಕುಲಾಲ್ ಅವರ ಕುಟುಂಬಕ್ಕೆ ಹಸ್ತಾ೦ತರ ಮಾಡಲಾಯಿತು. ಈ ವೇಳೆ `ಕುಲಾಲ್ ವರ್ಲ್ಡ್ ‘ ನ ಅಡ್ಮಿನ್ ಗಳಾದ ಹೇಮಂತ್ ಕುಮಾರ್ ಕಿನ್ನಿಗೋಳಿ, ರಂಜಿತ್ ಕುಮಾರ್ ಮೂಡಬಿದ್ರೆ, ಸದಸ್ಯರಾದ ಅರುಣ್ ಕುಲಾಲ್ ಮೂಳೂರು, ರಮೇಶ್ ಕುಮಾರ್ ವಗ್ಗ, ಸೂರಜ್ ಕುಲಾಲ್ ಮಂಗಳೂರು, ಉದಯ ಕುಲಾಲ್ ಕಳತ್ತೂರು, ದಿನೇಶ್ ಕುಲಾಲ್ ಕಳತ್ತೂರು, ಸಂತೋಷ್ ಕುಲಾಲ್ ತಲಪಾಡಿ, ಪ್ರಶಾಂತ್ ಕುಲಾಲ್ ಶಕ್ತಿನಗರ ಹಾಗೂ `ಕುಲಾಲ್ ವರ್ಲ್ಡ್’ ಮಹಿಳಾ ವಾಟ್ಸಪ್ ಗ್ರೂಪ್ ಸದಸ್ಯರಾದ ವೈಶಾಲಿ ಕುಲಾಲ್ ವಿಟ್ಲ ಮೊದಲಾದವರು ಹಾಜರಿದ್ದರು.
ಬಡ ಕುಟುಂಬದ 8 ವರ್ಷ ವಯಸ್ಸಿನ ಮನ್ವಿತಾ, ಪುಟ್ಟ ವಯಸ್ಸಿನಲ್ಲೇ ಎರಡೂ ಕಿಡ್ನಿಗಳನ್ನು ಕಳೆದುಕೊಂಡಿದ್ದು, ತಂದೆ ಸುರೇಶ್ ಬಂಗೇರ ಅವರು ತನ್ನ ಒಂದು ಕಿಡ್ನಿಯನ್ನು ಮಗಳಿಗೆ ನೀಡಲು ನಿರ್ಧರಿಸಿದ್ದು, ಇದರ ಚಿಕಿತ್ಸಾ ವೆಚ್ಚವನ್ನು ಭರಿಸಲು ಅಸಮರ್ಥರಾಗಿದ್ದರು. ಕಿಡ್ನಿ ಮರು ಜೋಡಣೆಗೆ 8 ಲಕ್ಷ ರೂ. ಆವಶ್ಯಕತೆ ಇದ್ದುದನ್ನು ಮನಗಂಡ `ಕುಲಾಲ್ ವರ್ಲ್ಡ್’ ವಾಟ್ಸಪ್ ಗ್ರೂಪ್ ನ ಮಿತ್ರರು ಧನ ಸಂಗ್ರಹಿಸಿ ನೀಡಲು ನಿರ್ಧರಿಸಿದ್ದರು. ಇದಕ್ಕಾಗಿ ಗ್ರೂಪ್ ನ ಸದಸ್ಯ ಕಾಪು ಮೂಳೂರಿನ ಅರುಣ್ ಕುಲಾಲ್ ,ಸೂರಜ್ ಕುಲಾಲ್ ಹಾಗೂ ಗ್ರೂಪ್ ಅಡ್ಮಿನ್ ಹೇಮಂತ್ ಕುಮಾರ್ ಅವರು ಹಣ ಸಂಗ್ರಹದ ಜವಾಬ್ದಾರಿ ವಹಿಸಿಕೊಂಡು ಹಗಲಿರುಳು ಶ್ರಮಿಸಿದ ಫಲವಾಗಿ ದೊಡ್ಡ ಮೊತ್ತ ಸಂಗ್ರಹಗೊಂಡಿತ್ತು. ಹಣ ನೀಡಿ ಮಾನವೀಯತೆ ಮೆರೆದ ಸಹೃದಯಿಗಳಿಗೆ `ಕುಲಾಲ್ ವರ್ಲ್ಡ್ ‘ ಸ್ಥಾಪಕ ದಿನೇಶ್ ಬಂಗೇರ ಇರ್ವತ್ತೂರು, ಅಡ್ಮಿನ್ ಗಳಾದ ಹೇಮಂತ್ ಕುಮಾರ್, ರಂಜಿತ್ ಕುಮಾರ್, ನರೇಶ್ ಕೆ. ಟಿ, ಡಿ. ಎಸ್. ಕುಲಾಲ್, ಮುಖೇಶ್ ಕುಲಾಲ್ ಹಾಗೂ `ಕುಲಾಲ್ ವರ್ಲ್ಡ್ ‘ ಮಹಿಳಾ ಗ್ರೂಪ್ ನಿರ್ವಾಹಕರಾದ ದಯಾ ಬಂಗೇರ, ಶೀಲಾ ಕಟ್ಟೆ, ರೇಣುಕಾ ಸಾಲ್ಯಾನ್, ರಶ್ಮಿ ಮೂಲ್ಯ ಕೃತಜ್ಞತೆ ಸಲ್ಲಿಸಿದ್ದಾರೆ.
ಮನ್ವಿತಾ ಅವರಿಗೆ ಕಿಡ್ನಿ ಮರು ಜೋಡಣೆಯು ಸೆ.೧೮ರಂದು ನಡೆಯಲಿದೆ ಎಂದು ಮನ್ವಿತಾ ಕುಟುಂಬಸ್ಥರು ತಿಳಿಸಿದ್ದಾರೆ.
ಮನ್ವಿತಾ ಅವರ ಚಿಕಿತ್ಸೆಗೆ ನೆರವಾಗಬಯಸುವವರು ಕೆಳಗಿನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು..
Suresh Bangera
Union Bank Of India
Padvu Branch, Maroli
A/c No. 364402010009143
IFSC code: UBIN0536440
Moblie : 9482661708