ಕಾರ್ಕಳ( ಸೆ ೧೦, ಕುಲಾಲ್ ವರ್ಲ್ಡ್ ನ್ಯೂಸ್): ಕುಲಾಲ ಸುಧಾರಕ ಸಂಘ ಕಾರ್ಕಳ ಇದರ 22ನೇ ವಾರ್ಷಿಕ ಮಹಾಸಭೆ, ಶ್ರೀ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ ಮತ್ತು ಸ್ಮರಣ ಸಂಚಿಕೆ ಸಮರ್ಪಣಾ ಕಾರ್ಯಕ್ರಮವು ಸೆ.10ರಂದು ಜೋಡುರಸ್ತೆಯ ಸಂಘದ ಸಭಾಭವನದಲ್ಲಿ ನಡೆಯಿತು.
ಪೂರ್ವಾಹ್ನ ೮ ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಪ್ರಾರಂಭಗೊಂಡಿತು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಕು. ಸ್ಮಿತಾ ಕುಲಾಲ್ ರವರು ಪ್ರಾರ್ಥನೆಗೈದರು. ಇತ್ತೀಚೆಗೆ ನಮ್ಮನ್ನಗಲಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಾಟಿ ಪಂಡಿತ ದಿ. ಕುಂಜಿರ ಮೂಲ್ಯರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಮಹಾಸಭೆಗೆ ಆಗಮಿಸಿದ ಅತಿಥಿ ಗಣ್ಯರನ್ನು ಸತೀಶ್ ಕಜ್ಜೊಡಿಯವರು ಸ್ವಾಗತಿಸಿದರು.
ಸಂಘದ ಪೂರ್ವಾರ್ಧ್ಯಕ್ಷರು ಹಾಲಿ ಕಾರ್ಯಕಾರಿ ಮಂಡಳಿಯಲ್ಲಿ ಕೋಶಾಧಿಕಾರಿಯಾಗಿರುವ ಕೃಷ್ಣ ಮೂಲ್ಯರು ಪ್ರಾಸ್ತಾವಿಕ ಭಾಷಣದಲ್ಲಿ ಸಂಘದ ಹಿಂದಿನ ಸಮಾಜಮುಖಿ ಕಾರ್ಯಗಳ ಬಗ್ಗೆ ಮತ್ತು ಮುಂದಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ತದನಂತರ ಸಂಘದ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಕುಲಾಲರ ಅನಾರೋಗ್ಯ ನಿಮಿತ್ತದ ಅನುಪಸ್ಥಿತಿಯಲ್ಲಿ ದಿವಾಕರ್ ಬಂಗೇರರವರು ಸಂಘದ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಕೃಷ್ಣ ಮೂಲ್ಯರು ಲೆಕ್ಕ ಪತ್ರ ಮಂಡಿಸಿದರು.
ಸ್ಮರಣ ಸಂಚಿಕೆ ಸಮರ್ಪಣಾ ಕಾರ್ಯದಂಗವಾಗಿ ಕುಲಾಲ ದೀವಿಗೆ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕರಾದ ಸತೀಶ್ ಕಜ್ಜೊಡಿಯವರು ತಮ್ಮ ಪ್ರಾಸ್ತಾವಿಕದಲ್ಲಿ ಸ್ಮರಣ ಸಂಚಿಕೆಯು ಸಂಪಾದಕೀಯ ಮಂಡಳಿ ಮತ್ತು ಸ್ಮರಣ ಸಂಚಿಕೆ ಸಮಿತಿಯ ಸಾಂಘಿಕ ಪ್ರಯತ್ನದ ಫಲ. ಸಮಸ್ತ ಕುಲಾಲ ಬಾಂಧವರ ಕನಸಿನ ಕೂಸು ಕುಲಾಲ ಸಭಾಭವನದ ಎಪ್ರಿಲ್ ೩೦ ರಂದು ಅದ್ದೂರಿಯಿಂದ ಜರುಗಿದ ಉದ್ಘಾಟನಾ ಸಮಾರಂಭದ ಅಪೂರ್ವ ಧೃಶ್ಯಾವಳಿಯೊಂದಿಗೆ ಕುಲಾಲ ಸಂಘದ ದಶಕವೆರಡರ ಸಾಧನೆಯ ಏರಿಳಿತದ ಸಮಗ್ರ ಚಿತ್ರಣವಿದ್ದು ಸಂಗ್ರಹ ಯೋಗ್ಯ ಸಂಚಿಕೆಯಾಗಿದೆ. ಸ್ವ ಸಮಾಜದ ಅಭಿವೃದ್ಧಿಯ ಬಗ್ಗೆ ಸಂಘದ ಸತ್ ಚಿಂತನೆಯ ಮಾಹಿತಿಯ ಬಗ್ಗೆ ಪ್ರತಿಯೊಬ್ಬ ಕುಲಾಲ ಬಾಂಧವರಿಗೆ ಅರಿವಿರಬೇಕು. ತಾಲ್ಲೂಕಿನ ಪ್ರತಿಯೊಂದು ಕುಲಾಲ ಬಾಂಧವರ ಮನೆಯಲ್ಲಿಯೂ ಸ್ಮರಣ ಸಂಚಿಕೆ ಇರಬೇಕು ಅನ್ನೋ ದೃಷ್ಟಿಯಿಂದ ಸಂಚಿಕೆಯೊಂದಕ್ಕೆ ಕೇವಲ ನೂರೈವತ್ತು ರೂಪಾಯಿ ದರ ನಿಗದಿಪಡಿಸಿದ್ದೇವೆ ಅಂದರು.
ಕೊನೆಯಲ್ಲಿ ಸ್ಮರಣ ಸಂಚಿಕೆಗಾಗಿ ಅವಿರತ ಶ್ರಮಿಸಿದ ಸಂಪಾದಕೀಯ ಮಂಡಳಿ, ಸಂಘದ ಅಧ್ಯಕ್ಷರು, ಗೌರವಾಧ್ಯಕ್ಷರು. ಕಾರ್ಯದರ್ಶಿಯವರು ಮತ್ತು ಪದಾಧಿಕಾರಿಗಳಿಗೆ ಮತ್ತು ಲೇಖನ, ಕವನ, ಚುಟುಕುಗಳ ನೀಡಿದ ಸಾಹಿತಿ, ಬರಹಗಾರರಿಗೆ, ಸ್ಮರಣ ಸಂಚಿಕೆ ಜಾಹೀರಾತು ನೀಡುವ ಮೂಲಕ ಆರ್ಥಿಕ ದೃಢತೆ ತುಂಬಿದ ಸಮಸ್ತ ಜಾಹೀರಾತುದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಕುಲಾಲ ಸಭಾಭವನದ ಉದ್ಘಾಟನಾ ಸಮಾರಂಭದಲ್ಲಿ ಸಾಂಕೇತಿಕ ಬಿಡುಗಡೆಗೊಂಡಿದ್ದ ಸ್ಮರಣ ಸಂಚಿಕೆಯ ಸಮರ್ಪಣಾ ಕಾರ್ಯವನ್ನು ಶ್ರೀ ಸೋಮಸುಂದರ್ ಕೆ. ಸಹಾಯಕ ಪ್ರಬಂಧಕರು ಭಾರತೀಯ ಜೀವ ವಿಮಾ ನಿಗಮ ಕಾರ್ಕಳ ಇವರು ನೆರವೇರಿಸಿ, ೨೦ ವರ್ಷದ ಹಿಂದೆ ನಮ್ಮ ಸಮುದಾಯದ ಕೆಲವೇ ಕೆಲವು ಪ್ರಮುಖರ ಕುಲಾಲರ ಭವಿಷ್ಯದ ಬಗೆಗಿನ ದೂರದೃಷ್ಟಿಯು ಒಂದು ಸಂಘವಾಗಿ ಜನ್ಮ ತಾಳಿದ್ದು ಇಂದು ಕಾರ್ಕಳ ತಾಲ್ಲೂಕಿನ ಸಮಸ್ತ ಕುಲಾಲರ ಧ್ವನಿಯಾಗಿ ಹೊರಹೊಮ್ಮಿದೆ.
ಸಂಘದ ತೊಡರುಗಾಲಿನ ಮೊದಲ ಹೆಜ್ಜೆಗಳು ಸದೃಡಗೊಂಡು ಯಶಸ್ಸಿನತ್ತ ಧೃಡಹೆಜ್ಜೆ ಮೂಡಿಸುವ ಸಚಿತ್ರ ಮಾಹಿತಿಯನ್ನು ಸ್ಮರಣ ಸಂಚಿಕೆಯಲ್ಲಿ ಕಾಣಬಹುದು ಎಂದು, ಕಾರ್ಕಳ ಕುಲಾಲ ಸಂಘದ ಸಮುದಾಯ ಪರವಾದ ಅಭಿವೃದ್ಧಿಶೀಲ ಚಿಂತನೆಯ ಕಾರ್ಯ ವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಯಾವ ರೀತಿ ಸಾಮಾಜಿಕ ಭದ್ರತೆಗಾಗಿ ನಾವು ಸಂಘಟನೆಯನ್ನು ಆಧರಿಸುತ್ತೇವೆಯೋ ಆದೇ ರೀತಿಯಲ್ಲಿ ನಮ್ಮ ಭವಿಷ್ಯದ ಭದ್ರತೆಗೆ ಅವಶ್ಯವಿರುವ ಆರ್ಥಿಕ ಧೃಡತೆಗಾಗಿ ಭಾರತೀಯ ಜೀವ ವಿಮಾ ನಿಗಮದ ಪಾಲಿಸಿದಾರರಾಗುವ ಮೂಲಕ ಆರ್ಥಿಕ ಸ್ವಾವಲಂಬನೆಯ ರಹದಾರಿಯನ್ನು ನೆರೆದ ಸಮಾಜ ಬಾಂಧವರಿಗೆ ನೆನಪಿಸಿದರು.
ಸನ್ಮಾನ :
ಜಿಲ್ಲಾ ಮಟ್ಟದ ಉತ್ತಮ ಸಾಧಕ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಆಂಗ್ಲ ಬಾಷಾ ಉಪನ್ಯಾಸಕಿ ಸಂಗೀತ ಕುಲಾಲ್ ಬೋಳ, ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗಾಗಿ ಉತ್ತಮ ಕೃಷಿಕ ಪ್ರಶಸ್ತಿ ಪಡೆದ ಜಯ ಮೂಲ್ಯ ಇರ್ವತ್ತೂರು, ರಾಜ್ಯ ಮಟ್ಟದ ಕಬಡ್ಡಿ ಪಟು ಅಜೆಕಾರು ದೆಪ್ಪುತ್ತೆಯ ಕವಿತಾ , ಸಾಮಾಜಿಕ ಜಾಲತಾಣದಲ್ಲಿ `ಕುಲಾಲ ಚಾವಡಿ’ ವಾಟ್ಸಪ್ ಗ್ರೂಪ್ ರಚಿಸಿ ಹಲವಾರು ಕುಲಾಲ ಸಮುದಾಯದ ಕುಟುಂಬಗಳ ಅನಾರೋಗ್ಯ, ಆಕಸ್ಮಿಕ ಅವಘಡದ ಸಂಕಷ್ಟಗಳಿಗೆ ಧನ ಸಂಗ್ರಹಿಸಿ ನೀಡುವ ಮೂಲಕ ಸ್ವ ಸಮಾಜದ ದುರ್ಬಲರಿಗೆ ಆರ್ಥಿಕ ಮನೋಬಲ ತುಂಬುವ ಸೇವಾ ಮನೋಭಾವವನ್ನು ಪರಿಗಣಿಸಿ ಸಂತೋಷ್ ಕುಲಾಲ್ ಪದವುರವನ್ನು, ಕ್ಷಿಪ್ರ ಗತಿಯಲ್ಲಿ ಸ್ಮರಣ ಸಂಚಿಕೆಯ ತಯಾರಿಕೆಯಲ್ಲಿ ಪ್ರಧಾನ ಪಾತ್ರ ವಹಿಸಿದ ಸತೀಶ್ ಕಜ್ಜೋಡಿಯವರನ್ನು ಶಾಲು ಹೊದಿಸಿ ಫಲ ಪುಷ್ಪ , ಸ್ಮರಣಿಕೆಯೊಂದಿಗೆ ಕುಲಾಲ ಸಂಘದ ವತಿಯಿಂದ ಗೌರವಿಸಲಾಯಿತು.
ಸನ್ಮಾನಿತರ ಅಭಿನಂದನಾ ಪತ್ರವನ್ನು ಹೃದಯ್ ಕುಲಾಲ್ ರವರು ವಾಚಿಸಿದರು. ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆಗೆ ಧನ ಸಹಾಯಮಾಡಿದ ದಾನಿಗಳ ಪಟ್ಟಿಯನ್ನು ಸುರೇಂದ್ರ ಕುಲಾಲ್ ವರಂಗ ಓದಿದರು. ತದನಂತರ ವಿದ್ಯಾರ್ಥಿ ಪ್ರೋತ್ಸಾಹ ಧನಕ್ಕೆ ಆಯ್ಕೆಯಾದ ಆರ್ಹ ವಿದ್ಯಾರ್ಥಿಗಳ ಯಾದಿಯನ್ನು ಧವಳಕೀರ್ತಿ ಮತ್ತು ಶೈಲಜಾ ಧವಳಕೀರ್ತಿಯವರು ವಾಚಿಸಿ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಕಾರ್ಯವನ್ನು ನಿರ್ವಹಿಸಿದರು. ಕಾರ್ಕಳ ಕುಲಾಲ ಬಾಂಧವರ ಅವಿರತ ಶ್ರಮದ ಫಲ ಕುಲಾಲ ಸಭಾಭವನದ ನಿರ್ಮಾಣಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಮತ್ತು ಸಂಘದ ೨೨ ನೇ ವಾರ್ಷಿಕ ಮಹಾಸಭೆಯ ಯಶಸ್ಸಿಗೆ ಕಾರಣೀಕರ್ತರಾದ ಪದಾಧಿಕಾರಿಗಳು ಸರ್ವಸದಸ್ಯರಿಗೂ ಧನ್ಯವಾದವನ್ನು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಭೋಜ ಕುಲಾಲ್ ಬೇಳಂಜೆ ಯವರು ಸಲ್ಲಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿ ಗಣ್ಯರಾದ ಸೋಮಸುಂದರ್ ಕೆ. ಸಹಾಯಕ ಪ್ರಬಂಧಕರು ಭಾರತೀಯ ಜೀವ ವಿಮಾ ನಿಗಮ, ಶೈಲಜಾ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಸಣ್ಣ ನೀರಾವರಿ ಇಲಾಖೆ ಬೆಂಗಳೂರು, ಐತು ಕುಲಾಲ್ ಅಧ್ಯಕ್ಷರು ಕುಲಾಲ ಸಂಘ ಪೆರ್ಡೂರು, ಶೇಖರ್ ಎಂ. ಎಸ್. ಮಾಲಕರು ಲಕ್ಷ್ಮಿ ಜ್ಯವೆಲ್ಲರ್ಸ್ ಮತ್ತು ಕಾರ್ಕಳ ಕುಲಾಲ ಸಂಘದ ಗೌರವಾಧ್ಯಕ್ಷರು ಹೆಚ್. ಡಿ. ಕುಲಾಲ್, ಅಧ್ಯಕ್ಷರು ಭೋಜ ಕುಲಾಲ್ ಬೇಳಂಜೆ, ಕೊಶಾಧಿಕಾರಿ ಕೃಷ್ಣ ಮೂಲ್ಯ ರವರಿಗೂ ಮಹಾಸಭೆಗೆ ಆಗಮಿಸಿದ ಸಮಸ್ತ ಸಮಾಜ ಬಾಂಧವರಿಗೂ ವಸಂತ ಕುಲಾಲ್ ಜಾರ್ಕಳರವರು ಧನ್ಯವಾದಗೈದರು. ಸಂಗೀತ ಕುಲಾಲ್ ಬೋಳ ಕಾರ್ಯಕ್ರಮ ನಿರೂಪಿಸಿದರು. ಭೋಜನದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.