ಕುಂದಾಪುರ(ಸೆ.೦೮, ಕುಲಾಲ್ ವರ್ಲ್ಡ್ ನ್ಯೂಸ್): ಮೀನು ಮಾರುಕಟ್ಟೆಯ ಬಳಿಯ ಓಣಿಯೊಂದರಲ್ಲಿ ಟರ್ಪಾಲು ಹಾಕಿದ ಮುರುಕು ಗುಡಿಸಲಿನಲ್ಲಿ ನಿರ್ಗತಿಕ ಕುಟುಂಬ ಜೀವಿಸುತ್ತಿರುವುದನ್ನು ನೋಡಿದರೆ ಎಂತಹ ಕಠಿಣ ಮನಸ್ಸು ಕೂಡಾ ಕರಗಿ ಹೋಗುವುದರಲ್ಲಿ ಸಂಶಯವಿಲ್ಲ. ಈ ಕುಟುಂಬ ನರಕ ಕೂಪದಲ್ಲಿ ಸಿಲುಕಿ ಒದ್ದಾಡುತ್ತಿದೆ. ಇದೀಗ ಈ ಮನೆಯಲ್ಲಿ ಒಪ್ಪೊತ್ತಿನ ಊಟಕ್ಕೂ ಬರ ಇದೆ. ಇದು ಕುಂದಾಪುರದ ಮೀನು ಮಾರ್ಕೆಟ್ ಬಳಿ ವಾಸವಿರುವ ಒಂದು ಕುಟುಂಬದ ದುಃಸ್ಥಿತಿ.
ಮನೆಗೆ ಆಧಾರ ಸ್ತಂಭವಾಗಿದ್ದ ಮನೆ ಯಜಮಾನ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಮಲಗಿದಲ್ಲಿಯೇ ಇದ್ದಾರೆ. ಹೆಂಡತಿ ಕೂಲಿ ಕೆಲಸಕ್ಕೆ ಹೋಗಿ ಮನೆ, ಪತಿಯ ಚಿಕಿತ್ಸೆಯನ್ನು ನೋಡಬೇಕಾದ ಪರಿಸ್ಥಿತಿ. ಅನೇಕ ವರ್ಷಗಳ ಹಿಂದೆಯೇ ಕೂಲಿ ಕೆಲಸಕ್ಕಾಗಿ ಹುಟ್ಟೂರನ್ನು ತೊರೆದ ಈ ದಂಪತಿಗೆ ಮಕ್ಕಳು, ಸಂಬಂಧಿಕರು ಯಾರೂ ಇಲ್ಲ!
ಮೂಲತಃ ಸುಳ್ಯದವರಾದ ನಾರಾಯಣ ಕುಲಾಲ್ ಮತ್ತು ಅವರ ಪತ್ನಿ ಭವಾನಿ ಕುಲಾಲ್ ಕೆಲಸ ಅರಸಿಕೊಂಡು 20 ವರ್ಷಗಳ ಹಿಂದೆ ಕುಂದಾಪುರಕ್ಕೆ ಬಂದಿದ್ದು, ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಾ ಕುಂದಾಪುರ ಮೀನು ಮಾರುಕಟ್ಟೆ ಬಳಿ ಇರುವ ಕಾವೇರಿ ನಿಲಯ ಎಂಬಲ್ಲಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕಷ್ಟವಿದ್ದರೂ ನೆಮ್ಮದಿಯ ಜೀವನ ನಡೆಸುತ್ತಿದ್ದ ಈ ಜೋಡಿಯ ಬದುಕು ಈಗ ಸಂಕಷ್ಟದ ಸುಳಿಗೆ ಸಿಲುಕಿದೆ. ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾದ ನಾರಾಯಣ ಕುಲಾಲ್ ಅವರನ್ನು ಪರೀಕ್ಷಿಸಿದ ವೈದ್ಯರು, ಅವರಿಗೆ ಕ್ಯಾನ್ಸರ್ ಎಂಬ ಮಹಾಮಾರಿ ರೋಗ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಕುಂದಾಪುರ ಸರಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರ ರೋಗ ದಿನೇ ದಿನೇ ಉಲ್ಬಣಿಸಿದ್ದು, ಪ್ರಸ್ತುತ ನಾರಾಯಣ ಅವರು ಮಲಗಿದಲ್ಲಿಯೇ ಇರಬೇಕಾದ ಸ್ಥಿತಿಗೆ ತಲುಪಿದ್ದು, ಕಣ್ಣೂ ಸರಿಯಾಗಿ ಕಾಣಿಸುತ್ತಿಲ್ಲ. ಮೂರು ಹೊತ್ತಿನ ಊಟಕ್ಕೇ ತೊಂದರೆ ಇರುವ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಯ ಚಿಕಿತ್ಸೆ ಕನಸೇ ಸರಿ.
ಸ್ವಂತ ಸೂರು, ಪಡಿತರ ಕಾರ್ಡು, ಬ್ಯಾಂಕ್ ಖಾತೆ, ಸಂಬಂಧಿಕರು ಯಾವುದೂ ಇಲ್ಲದ ಈ ನಿರ್ಗತಿಕ ಕುಟುಂಬಕ್ಕೆ ಸಹೃದಯಿಗಳ ನೆರವು ಬೇಕಾಗಿದೆ. ಸಹಾಯ ಮಾಡಲಿಚ್ಛಿಸುವವರು 8151049890 ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು.