ಮಂಗಳೂರು(ಸೆ,೦೫, ಕುಲಾಲ್ ವರ್ಲ್ಡ್ ನ್ಯೂಸ್) : ಈಕೆಗಿನ್ನೂ ಕೇವಲ 8 ವರ್ಷ ವಯಸ್ಸು. ಭವಿಷ್ಯದ ಬಗ್ಗೆ ಸಾವಿರಾರು ಕನಸುಗಳನ್ನು ಕಟ್ಟಿಕೊಳ್ಳುವ ಈ ಚಿಕ್ಕ ವಯಸ್ಸಿಗೇ ಬಾಲಕಿಯೋರ್ವಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಹೌದು.., ಈಕೆಯ ಹೆಸರು ಮನ್ವಿತಾ ಕುಲಾಲ್ . ಮಂಗಳೂರು ಜಪ್ಪಿನಮೊಗರು ತಂದೊಳಿಗೆ ಗ್ರಾಮದವಳು. ಪುಟ್ಟ ವಯಸ್ಸಿನಲ್ಲೇ ಎರಡೂ ಕಿಡ್ನಿಗಳನ್ನು ಕಳೆದುಕೊಂಡು ಜ್ಯೋತಿ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
3ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮನ್ವಿತಾ ಎಲ್ಲಾ ಮಕ್ಕಳಂತೆ ಚೆನ್ನಾಗಿಯೇ ಇದ್ದಳು. ಆದರೆ ಕೆಲವು ತಿಂಗಳ ಹಿಂದೆ ಆಕೆಗೆ ದೈಹಿಕ ತೊಂದರೆ ಕಾಣಿಸಿಕೊಂಡಾಗ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದಾಳೆ. ಪರೀಕ್ಷಿಸಿದ ವೈದ್ಯರು ಆಕೆಯ ಎರಡೂ ಕಿಡ್ನಿ ವೈಫಲ್ಯ ಆಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಇದಕ್ಕಾಗಿ ಖಾಯಂ ಡಯಾಲಿಸೀಸ್ ಅಥವಾ ಕಿಡ್ನಿ ಕಸಿಯೇ ಪರಿಹಾರ ಎಂಬಂತಾಗಿದ್ದು ಕಳೆದ ಹಲವು ತಿಂಗಳಿನಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಬಡತನದಲ್ಲಿ ಬೆಂದಿರುವ ಕುಟುಂಬ :
ಕುಟುಂಬದಲ್ಲಿ ಕಡು ಬಡತನವಿದ್ದರೂ ಕೂಡ ಮಗಳಿಗೆ ಪೋಷಕರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ತಂದೆ ಸುರೇಶ್ ಬಂಗೇರ ರಿಕ್ಷಾ ಚಾಲಕರಾಗಿದ್ದರೆ ತಾಯಿ ಗೃಹಿಣಿಯಾಗಿದ್ದಾರೆ. ಸುರೇಶ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಹಿರಿ ಮಗಳು ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಸುರೇಶ ಅವರ ತಂದೆ-ತಾಯಿಗೂ ವಯಸ್ಸಾಗಿದ್ದು, ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಮನೆಯಲ್ಲಿ ಬಡತನ ಕಿತ್ತು ತಿನ್ನುತ್ತಿದ್ದರೂ ಮಗಳನ್ನು ಹೇಗಾದರೂ ಬದುಕಿಸಿಕೊಳ್ಳಬೇಕೆಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ.
ವೈದ್ಯರು ಮಾನ್ವಿತಾಳಿಗೆ ಕಿಡ್ನಿ ಕಸಿ ಮಾಡಿದರೆ ಬದುಕಿಸಿಕೊಳ್ಳಬಹುದು ಎಂದಿದ್ದರಿಂದ ತಂದೆ ಸುರೇಶ್ ಅವರು ತನ್ನ ಒಂದು ಮೂತ್ರಪಿಂಡವನ್ನು ಮಗಳಿಗೆ ನೀಡಲು ನಿರ್ಧರಿಸಿದ್ದಾರೆ. ಆದರೆ ಕಿಡ್ನಿ ಮರು ಜೋಡಣೆಗೆ 8 ಲಕ್ಷ ರೂ ಆವಶ್ಯಕತೆ ಇದೆ. ಈಗಾಗಲೇ ರಿಕ್ಷಾ ಚಾಲನೆಯಲ್ಲಿ ಗಳಿಸಿದ 80 ಸಾವಿರ ರೂ. ಹಣವನ್ನು ಚಿಕಿತ್ಸೆಗಾಗಿ ಖರ್ಚು ಮಾಡಿ ಕೈ ಬರಿದು ಮಾಡಿಕೊಂಡಿರುವ ಸುರೇಶ್ ತಮ್ಮ ಮಗಳ ಪುನರ್ ಜನ್ಮಕ್ಕೆ ದಾನಿಗಳು ಸಹಾಯ ಮಾಡಿ ಎಂದು ಕಂಬನಿ ಮಿಡಿಯುತ್ತಿದ್ದಾರೆ..
ಪುಟ್ಟ ಬಾಲೆಗೆ ಸಹಾಯ ಮಾಡಲಿಚ್ಛಿಸುವ ಸಹೃದಯರು ಮನ್ವಿತಾಳ ತಂದೆ ಸುರೇಶ ಬಂಗೇರ ಅವರ ಕೆಳಗಿನ ಖಾತೆಗೆ ಹಣ ಜಮಾ ಮಾಡಬಹುದು.
Suresh Bangera
Union Bank Of India
Padvu Branch, Maroli
A/c No. 364402010009143
IFSC code: UBIN0536440
Moblie : 9482661708
ಚಿತ್ರ-ಮಾಹಿತಿ : ಹೇಮಂತ್ ಕುಮಾರ್ ಕಿನ್ನಿಗೋಳಿ