ಬೆಂಗಳೂರು: ‘ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಕುಂಬಾರ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು’ ಎಂದು ರಾಜ್ಯ ಕುಂಬಾರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸ ಮನವಿ ಮಾಡಿದರು.
ಸಂಘವು ಭಾನುವಾರ ಇಲ್ಲಿ ಆಯೋಜಿಸಿದ್ದ ಸಮಾಜದ ಹಿರಿಯರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪ್ರಸ್ತುತ ದೇವರಾಜ ಅರಸು ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಂಭಕಲಾ ಅಭಿವೃದ್ಧಿ ಮಂಡಳಿಯನ್ನು ಪ್ರತ್ಯೇಕಿಸಿ, ವಾರ್ಷಿಕ ₹ 50 ಕೋಟಿ ಅನುದಾನ ನೀಡಬೇಕು ಮತ್ತು ಜನಾಂಗದ ಅರ್ಹವ್ಯಕ್ತಿಗಳನ್ನು ಗುರುತಿಸಿ ಸರ್ವಜ್ಞಶ್ರೀ ಪ್ರಶಸ್ತಿ ನೀಡಬೇಕು’ ಎಂದು ಅವರು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಾಬು ಎಸ್. ಕುಂಬಾರ, ‘ಕುಂಬಾರ ಜನಾಂಗದ ಜನರು ಹೆಚ್ಚಿರುವ ಪ್ರದೇಶಗಳಲ್ಲಿ ಸರ್ಕಾರವು ಸರ್ವಜ್ಞ ಭವನ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು. ಕರಕುಶಲ ಗುಡಿ ಕೈಗಾರಿಕೆ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಖರೀದಿಸಿ ಮಾರಾಟ ಮಾಡಬೇಕು’ ಎಂದು ಮನವಿ ಮಾಡಿದರು.
ಸಂಘದ ಸಂಘಟನಾ ಕಾರ್ಯದರ್ಶಿ ಕೆ.ಎಂ. ಗುರುರಾಜ್, ‘ರಾಜ್ಯದಲ್ಲಿ 15 ರಿಂದ 20 ಲಕ್ಷ ಕುಂಬಾರ ಜನಾಂಗಕ್ಕೆ ಸೇರಿದ ಜನರಿದ್ದಾರೆ. ಆದರೆ, ದೇಶದಾದ್ಯಂತ ಕುಂಬಾರ, ಕುಲಾಲ, ಪ್ರಜಾಪತಿ, ಗುಂಡಾಭಕ್ತರು, ಗೌಣರು ಎಂಬಿತ್ಯಾದಿ ಹೆಸರುಗಳಿಂದ ಹರಿದು ಹಂಚಿಹೋಗಿದ್ದಾರೆ. ಹಾಗಾಗಿ ಸರಿಯಾದ ರಾಜಕೀಯ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಸಮುದಾಯದವನ್ನು ಸಂಘಟಿಸುವುದೇ ಸಂಘದ ಪ್ರಮುಖ ಉದ್ದೇಶ’ ಎಂದು ಹೇಳಿದರು.
ಕುಂಬಾರಿಕೆ ಮಾಡುತ್ತಿರುವ 17 ಮಹಿಳೆಯರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.