ಬೆಳ್ಮಣ್ : ಮಾರಕ ರೋಗ ಕ್ಯಾನ್ಸರ್ ನ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗುತ್ತಿರುವ, ಇನ್ನ ಮೈಕ್ರೋ ಬಳಿ ನಿವಾಸಿ ಸುನಂದ ಮೂಲ್ಯರ ಸಂಸಾರದ ದಯನೀಯ ಸ್ಥಿತಿಯನ್ನು ಕಂಡ `ಕುಲಾಲ ಛಾವಡಿ’ ವಾಟ್ಸಪ್ ಮಿತ್ರರು ಒಟ್ಟು 53,406 ರೂ. ಸಂಗ್ರಹಿಸಿ ನೀಡಿ ಸಾಂತ್ವನ ಹೇಳಿದ್ದಾರೆ.
ಸುನಂದ ಮೂಲ್ಯರ ಯಾತನಾಮಯ ಸ್ಥಿತಿಯ ಕುರಿತು `ಕುಲಾಲ ಛಾವಡಿಯ ಸದಸ್ಯರಾದ ರಶ್ಮಿ ಕುಲಾಲ್ ಅವರು ಅದರ ಅಡ್ಮಿನ್ ಸಂತೋಷ್ ಕುಲಾಲ್ ಪದವು ಅವರ ಗಮನಕ್ಕೆ ತಂದಿದ್ದು, ತಕ್ಷಣ ಛಾವಡಿಯ ಸದಸ್ಯ ಮಿತ್ರರೊಡಗೂಡಿ ಸುನಂದ ಮೂಲ್ಯರ ಮನೆಗೆ ಭೇಟಿ ಕೊಟ್ಟು ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಸಮಗ್ರ ಮಾಹಿತಿಯ ಸಚಿತ್ರ ವರದಿಯನ್ನು ಕುಲಾಲ ಛಾವಡಿ, ಕುಲಾಲ್ ವರ್ಲ್ಡ್ , ಕುಲಾಲ ಸುಧಾರಕ ಸಂಘ ಮತ್ತು ಇನ್ನಿತರ ವಾಟ್ಸಪ್ ಗ್ರೂಪ್ಗಳಲ್ಲಿ ಬಿತ್ತರಿಸಿ ಹಣ ಸಹಾಯ ನೀಡುವಂತೆ ಮನವಿ ಮಾಡಲಾಗಿತ್ತು.
ವಿಧಿಯಾಟದ ಕ್ರೂರತೆಯಲ್ಲಿ ಝರ್ಜರಿತಗೊಂಡಿದ್ದ ಆ ಬಡ ಕುಟುಂಬದ ಕಣ್ಣೀರಿಗೆ ಕರಗಿ, ಮಿಡಿದ ಹಲವಾರು ಸಹೃದಯಗಳ ಸಹಕಾರದ ಮನೋಭಾವವು ಧನ ಸಹಾಯದ ರೂಪದಲ್ಲಿ ಹರಿದು ಒಟ್ಟು 53406 ರೂ ಸಂಗ್ರಹ ಗೊಂಡಿತ್ತು. ಸಂಗ್ರಹಿಸಲ್ಪಟ್ಟ ಹಣವನ್ನು ನಾನಿಲ್ತಾಲ್ ಕುಲಾಲ ಸಂಘದ ಅಧ್ಯಕ್ಷರಾದ ಕುಶ ಆರ್ ಮೂಲ್ಯ ಇನ್ನಾ, ಪ್ರಭಾಕರ್ ಹಾಗೂ ಹಲವಾರು ಸಂತ್ರಸ್ತರ ಬಾಳಿನಲ್ಲಿ ಭರವಸೆಯ ಬೆಳಕನ್ನು ಮೂಡಿಸಿದ ಕುಲಾಲ ವಲ್ಡ್ ವಾಟ್ಸಪ್ ಬಳಗದ ಅಡ್ಮಿನ್ ಗಳಲ್ಲಿ ಒಬ್ಬರಾದ ಹೇಮಂತ್ ಕುಲಾಲ್ ಕಿನ್ನಿಗೋಳಿ, ಕಾಪು ಕುಲಾಲ ಯುವ ವೇದಿಕೆಯ ಅಧ್ಯಕ್ಷರಾದ ಉದಯ್ ಕುಲಾಲ್ ಕಳತ್ತೂರು, ಕಾರ್ಕಳ ಕುಲಾಲ ಸಂಘದ ಸಂಘಟನಾ ಕಾರ್ಯದರ್ಶಿಯವರಾದ ಸದಾನಂದ ವಾಂಟೇಚಾರ್ ಮತ್ತು ಹಣ ಸಂಗ್ರಹಿಸುವ ಜವಾಬ್ದಾರಿ ವಹಿಸಿಕೊಂಡಿದ್ದ ಕುಲಾಲ ಛಾವಡಿ ಸದಸ್ಯೆ ರಶ್ಮಿ ಕುಲಾಲ್ ಮುಂತಾದವರ ಉಪಸ್ಥಿತಿಯಲ್ಲಿ ಹಸ್ತಾ೦ತರ ಮಾಡಲಾಯಿತು.
ವರದಿ:- ಸತೀಶ್ ಕಜ್ಜೋಡಿ.