ಕಾರ್ಕಳ: ಸಂಘ ಕೇವಲ 5 ವರ್ಷಗಳಲ್ಲಿ ಸಮಾಜದವರನ್ನು ಒಗ್ಗೂಡಿಸಿಕೊಂಡು ಮಾಡುತ್ತಿರುವ ದಾರ್ಶನಿಕ ಸಮಾಜಮುಖೀ ಕಾರ್ಯಕ್ರಮಗಳು ಅಭಿನಂದನೀಯ. ಸಂಘಟನೆ ಯನ್ನು ಕಟ್ಟುವಾಗ ಋಣಾತ್ಮಕ ಚಿಂತನೆ ಮಾಡದೆ ಬಹಳ ಉತ್ಸಾಹದಿಂದ ತೊಡಗಿಕೊಳ್ಳಬೇಕು. ಇದರಿಂದ ಸಂಘಟನೆ ಯಶೋಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ. ನಮ್ಮ ಸಮಾಜ ಐಕ್ಯತೆಯಿಂದ ಒಮ್ಮನಸ್ಸಿನಿಂದ ಸಂಘಟನಾತ್ಮಕ ಶಕ್ತಿಯೊಂದಿಗೆ ಗುರುತಿಸಿಕೊಂಡು ಮುನ್ನಡೆದರೆ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಕಾರ್ಕಳ ಕುಲಾಲ ಸಂಘದ ಅಧ್ಯಕ್ಷರಾದ ಭೋಜು ಕುಲಾಲ್ ಬೇಳಂಜೆ ಅಭಿಪ್ರಾಯಪಟ್ಟರು.
ಇರ್ವತ್ತೂರು ಕುಲಾಲ ಸಂಘದ ಐದನೇ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ ಹಾಗೂ ಮಕ್ಕಳಿಗೆ ವಿದ್ಯಾರ್ಥಿ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ಬಾಂಧವರು ಯಾವುದೇ ವೈಮನಸ್ಸನ್ನು ಬೆಳೆಸಿಕೊಳ್ಳದೆ ಒಗ್ಗಟ್ಟಿನೊಂದಿಗೆ ಸಂಘದ ಮೂಲಕ ಸಮಾಜದ ಪ್ರಗತಿಯಲ್ಲಿ ಕಾರಣರಾಗಿ ಮಾದರಿಯಾಗಿದ್ದಾರೆ. ಇದೇ ರೀತಿ ಯಾವುದೇ ಭಿನ್ನಾಭಿಪ್ರಾಯಗಳನ್ನು ಬೆಳೆಸಿಕೊಳ್ಳದೆ ಒಂದೇ ಸಂಘಟನೆಯಲ್ಲಿ ತೊಡಗಿಸಿಕೊಂಡು ನಮ್ಮ ಸಮಾಜವನ್ನು ಬಲಿಷ್ಠಗೊಳಿಸಬೇಕಾಗಿದೆ. ಅದೇ ರೀತಿ ನಮ್ಮ ಭವ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಸಮಾಜದ ಹಿತಚಿಂತನೆಯೊಂದಿಗೆ ನಮ್ಮ ಸಂಘಟನೆಗಳು ತೊಡಗಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣುವಂತಾಗಬೇಕು ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಕಾರ್ಕಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಗೋಪಾಲ ಮೂಲ್ಯ, ಕರಾವಳಿ ಕುಲಾಲ/ಕುಂಬಾರರ ಯುವವೇದಿಕೆ ಕಾರ್ಕಳ ವಿಭಾಗದ ಅಧ್ಯಕ್ಷ ಕುಲಾಲ ದಿವಾಕರ ಬಂಗೇರ, ಯುವ ಉದ್ಯಮಿ ದಿನೇಶ್ ಕುಲಾಲ್ ಕಜೆ, ಕುಲಾಲ್ ವರ್ಲ್ಡ್ ಡಾಟ್ ಕಾಮ್ ಸಂಪಾದಕ ದಿನೇಶ್ ಬಂಗೇರ ಇರ್ವತ್ತೂರು,ಕಾರ್ಕಳ ಕುಲಾಲ ಮಹಿಳಾ ವಿಭಾದ ಅಧ್ಯಕ್ಷೆ ರೇವತಿ ಕುಲಾಲ್ ಭಾಗವಹಿಸಿ ಮಾತನಾಡಿದರು.
ಸಮಾರಂಭದ ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಪ್ರಮೀಳಾ ಮೂಲ್ಯ, ಸಂಘದ ಗೌರವಾಧ್ಯಕ್ಷ ಐತು ಮೂಲ್ಯ, ಮಹಿಳಾ ವಿಭಾಗದ ಅಧ್ಯಕ್ಷೆ ರೂಪಾ ಸತೀಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಆನಂದ ಮೂಲ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವಾಧ್ಯಕ್ಷ ಚಂದ್ರಶೇಖರ ಪಾಲಾಜೆ ಸ್ವಾಗಸಿದರೆ, ಕಾರ್ಯದರ್ಶಿ ಮೋಹನ್ ಮೂಲ್ಯ ವರದಿ ವಾಚಿಸಿ ವಂದಿಸಿದರು. ಜಯ ಕುಲಾಲ್ ಅವರು ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ- ಪುಸ್ತಕ ವಿತರಣೆ
ಸಮಾರಂಭದಲ್ಲಿ ತಾಲೂಕಿನ ಉತ್ತಮ ಕೃಷಿಕ ಪ್ರಶಸ್ತಿ ಪಡೆದ ಜಯ ಕುಲಾಲ್, ಕುಲಾಲ್ ವರ್ಲ್ಡ್ ಡಾಟ್ ಕಾಮ್ ಸ್ಥಾಪಕ ದಿನೇಶ್ ಬಂಗೇರ ಇರ್ವತ್ತೂರು ಅವರನ್ನುಮೈಸೂರು ಪೇಟ, ಫಲಪುಷ್ಪ ಹಾಗೂ ಕಿರು ಕಾಣಿಕೆಯೊಂದಿಗೆ ದಂಪತಿ ಸಹಿತ ಸನ್ಮಾನ ಮಾಡಿದರೆ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಗೋಪಾಲ ಮೂಲ್ಯ, ಇರ್ವತ್ತೂರು ಕುಲಾಲ ಸಂಘಕ್ಕೆ ಜಾಗ ದಾನ ಮಾಡಿದ ನಾಗೇಶ್ ಕುಲಾಲ್ ಪೊಸಲಾಯಿ ಮೊದಲಾದವರನ್ನು ಶಾಲು ಹೊದೆಸಿ ಕಿರು ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಬೆಳಿಗ್ಗೆ ನಡೆದ ವಿವಿಧ ಸ್ಪರ್ಧಾವಿಜೇತ ಮಕ್ಕಳಿಗೆ ಬಹುಮಾನ, ವಿದ್ಯಾರ್ಥಿವೇತನ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು. (ಇರ್ವತ್ತೂರು ಕುಲಾಲ ಸಂಘಕ್ಕೆ 10 ಸೆಂಟ್ಸ್ ನಿವೇಶನ ದಾನ ಮಾಡಿದ ನಾಗೇಶ್ ಕುಲಾಲ್ ಪೊಸಲಾಯಿ ಇವರನ್ನು ಸಂಘದ ಹೆಸರಿಗೆ ರಿಜಿಸ್ಟ್ರೇಶನ್ ಆದ ಕೂಡಲೇ ತಾಲೂಕಿನ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸುವುದೆಂದು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ )