ಕೆರ್ವಾಶೆ : ಕುಲಾಲ ಸುಧಾರಕ ಸಂಘ ಗ್ರಾಮ ಸಮಿತಿ ಕೆರ್ವಾಶೆಯು ಆಯೋಜಿಸಿದ್ದ ಸಂಘಟನಾ ಸಭೆ ಮತ್ತು ಮಾಹಿತಿ ಕಾರ್ಯಾಗಾರವು ಕೆರ್ವಾಶೆಯ ಸಾಗರ್ ಸಭಾಗೃಹದಲ್ಲಿ ಇತ್ತೀಚೆಗೆ ಜರುಗಿತು.
ಗ್ರಾಮೀಣ ಪ್ರದೇಶದ ಕುಲಾಲ ಸಮಾಜ ಬಾಂಧವರು ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಸಂತುಲಿತ ಸದೃಢ ಕುಲಾಲ ಸಮಾಜ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸಬೇಕು ಅನ್ನುವ ದೂರದೃಷ್ಟಿಯಿಂದ ಈ ಒಂದು ಕಾರ್ಯಕ್ರಮವನ್ನು ಕೆರ್ವಾಶೆಯ ಕುಲಾಲ ಗ್ರಾಮ ಸಮಿತಿಯು ಆಯೋಜಿಸಿತ್ತು.
ಕಾರ್ಯಕ್ರಮದ ವಿಶೇಷ ಆಹ್ವಾನಿತ ಸಂಪನ್ಮೂಲ ವ್ಯಕ್ತಿ ಪ್ರಸಾದ್ ಕುಲಾಲ್ ಸಿದ್ಧಕಟ್ಟೆಯವರು ಮಾಹಿತಿ ಕಾರ್ಯಾಗಾರದಲ್ಲಿ ಸಂಘಟನೆಯು ಸಂಘಜೀವಿಯಾದ ಮನುಷ್ಯನಿಗೆಷ್ಟು ಅನಿವಾರ್ಯ ಅನ್ನುದರ ಬಗ್ಗೆ ನಮ್ಮ ಸುತ್ತ ಮುತ್ತಲಿನ ವಿದ್ಯಾಮಾನವನ್ನು ಆದರಿಸಿ ಸಮಾಜದ ಆಗು ಹೋಗುಗಳ ಬಗ್ಗೆ ತಮ್ಮ ತಿಳಿಹಾಸ್ಯದ ಪ್ರಖರ ವಾಙ್ಮಯತೆಯಿಂದ ಕ್ರಿಯಾತ್ಮಕ ಚಟುವಟಿಕೆಯ ಮೂಲಕ ಅರ್ಥಪೂರ್ಣ ವಿವರಣೆ ನೀಡಿದರು.
ಯುವ ಪೀಳಿಗೆಯಲ್ಲಿ ಮೊಬೈಲ್ ವ್ಯಾಮೋಹದಿಂದ ಸಂಕೀರ್ಣಗೋಳ್ಳುತ್ತಿರುವ ಸಂಬಂಧಗಳು, ಗೌರವಾಧರದ ಮೌಲ್ಯಯುತ ಸಂಸ್ಕಾರಗಳು ಕಣ್ಮರೆಯಾಗುತಿದ್ದು ತಮ್ಮದೇ ಪರಿವಾರದಲ್ಲಿ ಒಬ್ಬರಿಗೊಬ್ಬರು ಅಪರಿಚಿತರಂತೆ ಬದುಕುವ ಈ ಬದಲಾವಣೆಯ ಉತ್ಕೃಷ್ಟ ಕಾಲಘಟ್ಟವು ಮನುಕುಲದ ಅಭ್ಯುದಯಕ್ಕೆ ಪೂರಕವಾಗಿಲ್ಲ ಅನ್ನುವ ಕಟುಸತ್ಯದ ವಾಸ್ತವತೆಯನ್ನು ತೆರೆದಿಡುದರೊಂದಿಗೆ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಹಗಲಿರುಳು ದುಡಿಯುವುದೇ ನಮ್ಮ ಜವಾಬ್ದಾರಿಯಲ್ಲ, ಮಕ್ಕಳ ನಿತ್ಯ ಚಟುವಟಿಕೆಗಳಲ್ಲಿ ಆಗುವ ಅಸಹಜ ಬದಲಾವಣೆಗಳತ್ತ ಗಮನವಿರಿಸಬೇಕೆಂದು ಪಾಲಕರಿಗೆ ಸೂಕ್ಷ್ಮ ಸಂದೇಶವನ್ನು ರವಾನಿಸಿದರು.
ಶ್ರೇಯಾರವರ ಪ್ರಾರ್ಥನೆಯೊಂದಿಗೆ ಕೆರ್ವಾಶೆಯ ಕುಲಾಲ ಗ್ರಾಮ ಸಮಿತಿಯ ಅಧ್ಯಕ್ಷರಾದ ಸುಧೀರ್ ಬಂಗೇರರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಈ ಕಾರ್ಯಕ್ರಮ ಸಂಯೋಜನೆಯ ಉದ್ದೇಶವನ್ನು ತಿಳಿಸಿದರು. ತದ ನಂತರ ಕಾರ್ಕಳ ತಾಲ್ಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾದ ಭೋಜ ಕುಲಾಲ್ ಬೇಳಿಂಜೆಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿ ಸ್ಥಾನದಿಂದ ತಮ್ಮ ಅನುಭವ ಅನಿಸಿಕೆಯನ್ನು ಹಂಚಿಕೊಂಡ ನಮ್ಮ ಕಾರ್ಯಕ್ರಮದ ವಿಶೇಷ ಆಹ್ವಾನಿತ ಅತಿಥಿ, ಕುಲಾಲ ವರ್ಲ್ಡ್ ಡಾಟ್ ಕಾಂ ನ ಸಂಪಾದಕರಾದ ದಿನೇಶ್ ಬಂಗೇರ ಇರ್ವತ್ತೂರುರವರು ಗ್ರಾಮೀಣ ಭಾಗದ ಜನರಿಗೆ ಸಾಮಾಜಿಕ ಜಾಲತಾಣದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡುತ್ತಾ ಕ್ಷಣಾರ್ಧದಲ್ಲಿ ಇಲ್ಲಿಯ ಕಾರ್ಯಕ್ರಮವು ೮೫ ದೇಶವನ್ನು ತಲುಪುವಷ್ಟು ಪರಿಣಾಮಕಾರಿ ವಿಜ್ಞಾನ ಮುಂದುವರಿದಿದೆ. ಅದರ ಸದುಪಯೋಗವನ್ನು ಸಕಾರಾತ್ಮಕವಾಗಿ ನಾವು ಪಡೆದುಕೊಂಡು ಗ್ರಾಮೀಣ ಪ್ರತಿಭೆಗಳ ಕಂಪು ರಾಷ್ಟ್ರ ಮಟ್ಟದಲ್ಲಿ ಪಸರಿಸಬೇಕು ಎಂದು ಆಶಿಸಿದರು.
ಕೆರ್ವಾಶೆಯ ಪೋಸ್ಟ್ ಮಾಸ್ಟರ್ ಮೋಹನ್ ಮೂಲ್ಯರು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಾ ಅಂಚೆ ಇಲಾಖೆಯಲ್ಲಿ ಶ್ರೀ ಸಾಮಾನ್ಯರಿಗಿರುವ ಹಲವಾರು ಆಕರ್ಷಕ ವಿಮಾ ಯೋಜನೆಗಳ ಮಾಹಿತಿ ನೀಡಿದರು. ಕಾರ್ಯಕ್ರಮದ ಸಂಘಟಕರನ್ನು ಮುಕ್ತ ಕಂಠದಿಂದ ಶ್ಲಾಘೀಸುದರೊಂದಿಗೆ ಇಂತಹ ಉತ್ತಮ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತಿರಲಿ ಎಂದು ಹಾರೈಸಿದರು.
ಮಕ್ಕಳ ಶಿಕ್ಷಣದಲ್ಲಿ ತಂದೆ ತಾಯಿಯ ಸಮಾನ ಪಾಲು, ಸಮಾನ ಮನಸ್ಕರಾಗಿ ತಮ್ಮ ಮಕ್ಕಳಿಗೆ ವಿದ್ಯಾಬ್ಯಾಸದ ನೀಡುವುದರ ಮೂಲಕ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ತಂದೆ ತಾಯಿಯ ಯೋಗದಾನ ಮಹತ್ತರವಾದದ್ದು ಎಂದು ಇನ್ನೊರ್ವ ಮುಖ್ಯ ಅತಿಥಿ ಸಂತೋಷ್ ಕುಲಾಲ್ ಪದವುರವರು ಅಭಿಪ್ರಾಯಪಟ್ಟರು. ಅವರು ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೂ ಉನ್ನತ ಶಿಕ್ಷಣದ ಅನಿವಾರ್ಯತೆಯನ್ನು ನೆರೆದ ಸಮುದಾಯ ಬಾಂಧವರಲ್ಲಿ ಮನದಟ್ಟು ಮಾಡುವ ಮೂಲಕ ಹೆಣ್ಣು ಮಕ್ಕಳ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಪುಟಾಣಿ ಪ್ರತಿಭೆ ಬೇಬಿ ಮನಸ್ವಿ ಸಂತೋಷ್ ಕುಲಾಲ್ ಪದವು ಅವರ ನೃತ್ಯ ಕಾರ್ಯಕ್ರಮವು ನೆರೆದವರೆಲ್ಲರ ಪ್ರಶಂಸೆಗೆ ಪಾತ್ರವಾಯಿತು. ಗ್ರಾಮ ಸಮಿತಿಯ ಕಾರ್ಯದರ್ಶಿಯವರಾದ ಶಶಿಧರ್ ಕುಲಾಲ್ ರವರು ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರವರಿಂದ ಆಗಮಿಸಿದ ಅತಿಥಿ ಗಣ್ಯರಿಗೆ ಧನ್ಯವಾದ ಸಮರ್ಪಣೆಯೊಂದಿಗೆ ಸಂಘಟನಾ ಸಭೆ ಮತ್ತು ಮಾಹಿತಿ ಕಾರ್ಯಾಗಾರದ ಕಾರ್ಯಕ್ರಮವು ಸಂಪನ್ನಗೊಂಡಿತು.
ವರದಿ:- ಸತೀಶ್ ಕಜ್ಜೋಡಿ.