ಕಾರ್ಕಳ(ಸೆ.೦೩): ತಾಲೂಕಿನ ಮಾಳ ಗ್ರಾಮದ ಇಂದಿರಾನಗರ ನಿವಾಸಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಾಟಿ ಪಂಡಿತರಾದ ಕುಂಜಿರ ಮೂಲ್ಯರು ಅಲ್ಪ ಕಾಲದ ಅಸೌಖ್ಯದಿಂದ ಸೆ. ರಂದು ಇಂದಿರಾನಗರದ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಆಯುರ್ವೇದ ಪಾಂಡಿತ್ಯದ ಅನರ್ಘ್ಯ ರತ್ನವೊಂದು ಹೊಳಪುಗುಂದಿ ಭೂಗರ್ಭದಲ್ಲಿ ಲೀನವಾಯಿತು. ತನ್ನ ಹಿರಿಯರಿಂದ ಬಳುವಳಿಯಾಗಿ ಬಂದಿದ್ದ ಗಿಡ ಮೂಲಿಕೆಯಿಂದ ತಯಾರಿಸಿದ ಔಷದೋಪಚಾರದಿಂದ ಪಶ್ಚಿಮ ಘಟ್ಟದ ಇಕ್ಕೆಲಗಳ ಘೊಂಢಾರಣ್ಯದ ಅಂಚಿನಲ್ಲಿ ಕಾಡನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಅದೆಷ್ಟೋ ಕುಟುಂಬಗಳ ಪಾಲಿಗೆ ಸಂಜೀವಿನಿಯಾಗಿದ್ದ ಕುಂಜಿರ ಮೂಲ್ಯರ ಅಗಲಿಕೆಯಿಂದ ಆಯುರ್ವೇದ ಪದ್ಧತಿಯ ವೈದ್ಯಕೀಯ ಲೋಕವು ಬಡವಾಯಿತು. ಹುಳ ಕಜ್ಜಿ , ತುರಿಕೆಯಿಂದ ಹಿಡಿದು ಘೋರ ವಿಷ ಜಂತುವಿನ ಬಾಧೆಯನ್ನು ಕೆಲವೇ ಘಂಟೆಗಳಲ್ಲಿ ಶಮನಗೊಳ್ಳುವಂತ ತಮ್ಮ ಅದ್ಭುತ ನಾಟಿ ಔಷಧಿಯ ಚಮತ್ಕಾರದಿಂದ ಕುಗ್ರಾಮವಾದ ಮಾಳದ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಪಸರಿಸಿದ ಕೀರ್ತಿ ಕುಂಜಿರ ಮೂಲ್ಯರದು.
ನಾಲ್ಕು ಗಂಡು ಎರಡು ಹೆಣ್ಣು ಮಕ್ಕಳ ಸಂತೃಪ್ತ ಬದುಕಿನ ಮುಸ್ಸಂಜೆಯಲ್ಲಿ ಕಾಡು ಮೇಡಳೆದು ಔಷಧಿಗಾಗಿ ಗೆಡ್ಡೆ , ಬೇರನ್ನು ಅಗೆಯಲಾರದ ಅಸಹಾಯಕತೆಯಲ್ಲಿ ತಮ್ಮ ವೃತ್ತಿಯನ್ನು ಮಾಹಿತಿ ನೀಡಲಷ್ಟೇ ಸೀಮಿತವಾಗಿಸಿ ವಿಶ್ರಾಂತ ಜೀವನ ನಡೆಸುತಿದ್ದರು.
ಒಲಿದು ಬಂದ ಪ್ರಶಸ್ತಿಗಳ ಸರಮಾಲೆ :
ಕುಂಜಿರ ಮೂಲ್ಯರಿಗೆ ನಾಟಿ ಔಷಧಿ ತನ್ನ ತಂದೆಯಿಂದ ಬಂದ ಬಳುವಳಿ. ಸುಮಾರು 500 ವಿವಿಧ ಔಷಧಿಗಳನ್ನು ತಯಾರಿಸುತ್ತಾರೆ. ಅದರಲ್ಲಿ 300 ಕ್ಕೂ ಮಿಕ್ಕಿ ಮಾನವರಿಗೆ, 200 ಕ್ಕೂ ಮಿಕ್ಕಿ ಜಾನುವಾರುಗಳಿಗೆ ನೀಡುವ ಔಷಧಿಗಳನ್ನು ನೀಡುತ್ತಿದ್ದರು. ಫಶ್ಚಿಮಘಟ್ಟದ ತಪ್ಪಲಲ್ಲಿ ಅವರು, ವಿವಿಧ ಔಷಧೀಯ ಸಸ್ಯಗಳ ಬೇರುಗಳನ್ನು ಮೂರು ಕಿ.ಮೀ ದೂರವಿರುವ ದಟ್ಟ ಕಾನನಕ್ಕೆ ಕ್ರಮಿಸಿ ತರುತ್ತಿದ್ದರು.
ವಿಷ ಜಂತು ಕಡಿತ, ಸರ್ಪಸುತ್ತು, ಮೂಲವ್ಯಾಧಿ, ಸಕ್ಕರೆ ಕಾಯಿಲೆ, ಹೊಟ್ಟೆನೋವು, ಸ್ತ್ರೀರೋಗ, ವಾತ ಹೀಗೆ ಹತ್ತಾರು ರೋಗಗಳಿಗೆ ಉಪಶಮನ ನೀಡಿದ ಕೀರ್ತಿ ಅವರದ್ದು. ಆಧುನಿಕ ಚಿಕಿತ್ಸೆಯಿಂದ ಗುಣಮುಖವಾಗದ ರೋಗಗಳಿಗೂ ಚಿಕಿತ್ಸೆ ನೀಡಿ ಯಶಸ್ಸು ಕಂಡವರು ಅವರು. ಚಿಕಿತ್ಸೆ ಪಡೆದವರು ಸ್ವಇಚ್ಛೆಯಿಂದ ನೀಡಿದ ಒಂದಿಷ್ಟು ಗೌರವಧನದಿಂದ ಕುಂಜಿರ ಮೂಲ್ಯರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದರು.
ವನೌಷಧಿ ಪಂಡಿತ:
ಕುಂಜಿರ ಮೂಲ್ಯರ ಸಾಧನೆಯನ್ನು ಪರಿಗಣಿಸಿ ನವದೆಹಲಿಯಲ್ಲಿ ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದರು. 2003ರಲ್ಲಿ ಚಿತ್ರದುರ್ಗದಲ್ಲಿ ನಡೆದ ಸಮಾರಂಭದಲ್ಲಿ ನವದೆಹಲಿ ರಾಷ್ಟ್ರೀಯ ಔಷಧಿ ಸಸ್ಯಗಳ ಮಂಡಳಿಯಿಂದ ಕೊಡ ಮಾಡುವ ಪ್ರಪ್ರಥಮ ಬಾರಿಯ “ವನೌಷಧಿ ಪಂಡಿತ-2003” ಪಾರಂಪರಿಕ ವೈದ್ಯ ಎಂಬ ರಾಜ್ಯ ಪ್ರಶಸ್ತಿಯನ್ನು ತರಳಬಾಳು ಬೃಹನ್ಮಠ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಂದ ಸ್ವೀಕರಿಸಿದ್ದಾರೆ.
ಅನೇಕ ಸಂಘ ಸಂಸ್ಥೆಗಳು ಕುಂಜಿರ ಮೂಲ್ಯರನ್ನು ಸನ್ಮಾನಿಸಿದ್ದು, ಒಟ್ಟು 30ಕ್ಕೂ ಮಿಕ್ಕಿದ ಸನ್ಮಾನಗಳು, ಪುರಸ್ಕಾರಗಳು ಅವರಿಗೆ ಲಭಿಸಿದೆ. ಅವರಿಂದ ಅನುಭವ ಪಡೆದುಕೊಳ್ಳಲು ಕಲ್ಕತ್ತಾ, ಗುಜರಾತ್ ಮತ್ತು ಕೊರಿಯಾದಂತಹ ವಿದೇಶೀ ಸಂಶೋಧಕರ ತಂಡಗಳು ಮಾಳಕ್ಕಾಗಮಿಸಿ, ಅವರಿಂದ ಗಿಡಮೂಲಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ಅವರೊಂದಿಗೆ ವಿವಿಧ ಗಿಡಮೂಲಿಕೆಗಳನ್ನು ಅರಸಿಕೊಂಡು ಪಶ್ಚಿಮಘಟ್ಟವನ್ನು ತಿರುಗಾಡಿದ್ದಾರೆ. ಉಚಿತ ವನೌಷಧಿ ನೀಡುವ ಕುರಿತು ಸರಕಾರದ ಪಿಯುಸಿ ಉಪಪಠ್ಯಪುಸ್ತಕದಲ್ಲಿ ಬಂದಿರುವ ಕುಂಜಿರ ಮೂಲ್ಯರ ಉಲ್ಲೇಖವು ನಾಟಿ ಔಷಧಿ ವೈದ್ಯನಾಗಿ ನಡೆಸಿದ ಸೇವೆಗೆ ಸಂದ ಗೌರವವಾಗಿದೆ.
ವರದಿ: ಸತೀಶ್ ಕಜ್ಜೋಡಿ