ಬೆಳ್ತಂಗಡಿ(ಆ.೧೩): ಅನಾರೋಗ್ಯ ಮತ್ತು ಬಡತನದಿಂದ ಬಳಲುತ್ತ ಆರ್ಥಿಕವಾಗಿ ತೀವ್ರ ಕಂಗೆಟ್ಟಿದ್ದ ಬೆಳ್ತಂಗಡಿ ತಾಲ್ಲೂಕಿನ ಮೇಲಂತಬೇಟ್ಟು ಬರೆಮೇಲು ನಿವಾಸಿ ರವಿ ಪೂಜಾರಿ ಕುಟುಂಬಕ್ಕೆ `ಕುಲಾಲ್ ವರ್ಲ್ಡ್’ ವಾಟ್ಸ್ ಆಪ್ ಬಳಗದ ವತಿಯಿಂದ ಸಂಗ್ರಹಿಸಿದ ಆರ್ಥಿಕ ಮೊತ್ತ 42,800.00 ರೂಪಾಯಿಯನ್ನು ಹಸ್ತಾಂತರಿಸಲಾಯಿತು. ಆಗಸ್ಟ್ 13ರಂದು ರವಿ ಪೂಜಾರಿ ಅವರ ಮನೆಗೆ ತೆರಳಿದ `ಕುಲಾಲ್ ವರ್ಲ್ಡ್’ ಬಳಗದ ಸದಸ್ಯರು ಹಣವನ್ನು ನೀಡಿ, ಬಡ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ `ಕುಲಾಲ್ ವರ್ಲ್ಡ್’ ವಾಟ್ಸಾಪ್ ಗ್ರೂಪ್ ನಿರ್ವಾಹಕರಾದ ಹೇಮಂತ್ ಕುಮಾರ್ ಕಿನ್ನಿಗೋಳಿ, ರಂಜಿತ್ ಕುಮಾರ್ ಮೂಡಬಿದ್ರೆ ಹಾಗೂ ಸದಸ್ಯರಾದ ರಮೇಶ್ ಕುಮಾರ್ ವಗ್ಗ, ಹರೀಶ್ ಕಾರಿಂಜ ನಾವೂರು ಬೆಳ್ತಂಗಡಿ, ಲೋಕೇಶ್ ಕುಲಾಲ್ ಗುರುವಾಯನಕೆರೆ, ಸುರಾಜ್ ಕುಲಾಲ್ ಮಂಗಳೂರು, ದಯಾನಂದ್ ಕುಲಾಲ್ ಮೂಡಬಿದ್ರಿ ಮತ್ತು ತಿಮ್ಮಪ್ಪ ಮೂಲ್ಯ ಬೆಳ್ತಂಗಡಿ ಉಪಸ್ಥಿತರಿದ್ದರು. ಸಹಾಯಧನ ಸ್ವೀಕರಿಸಿ ಮಾತನಾಡಿದ ರವಿ ಪೂಜಾರಿ ಅವರು ಕುಲಾಲ್ ವರ್ಲ್ಡ್ ಪುರುಷ ಹಾಗೂ ಮಹಿಳಾ ವಿಭಾಗದ ಸದಸ್ಯರೆಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಮೂರ್ತೆದಾರರಾಗಿದ್ದ ಮೇಲಂತಬೆಟ್ಟು ಬರೆಮೇಲು ರವಿ ಪೂಜಾರಿ (57ವರ್ಷ ) ಅವರು ತೆಂಗಿನಮರದಿಂದ ಬಿದ್ದು ಸೊಂಟ, ಕೈ ಕಾಲು ಗಳಿಗೆ ತೀವೃ ಸ್ವರೂಪದ ಪೆಟ್ಟು ಮಾಡಿಕೊಂಡು ಹಾಸಿಗೆ ಹಿಡಿದಿದ್ದರೆ, ಭೀಕರ ಬೈಕ್ ಅಪಘಾತಕ್ಕೆ ಹಿರಿ ಮಗ ಚಂದ್ರಹಾಸ ಅವರು ಬಲಿಯಾಗಿದ್ದರು. ಫ್ಯಾನ್ಸಿ ಅಂಗಡಿ ಇಟ್ಟುಕೊಂಡಿದ್ದರೂ ಪರೋಪಕಾರಿಯಾಗಿದ್ದ ಚಂದ್ರಹಾಸ್ ಅವರು ನಮ್ಮ `ಕುಲಾಲ್ ವರ್ಲ್ಡ್’ನ ಜನಪರ ಕೆಲಸಕ್ಕೆ ಕೈಜೋಡಿಸಿ, ಆರ್ಥಿಕ ಸಹಾಯವನ್ನೂ ನೀಡಿ ಪ್ರೋತ್ಸಾಹಿಸಿದ್ದರು. ಇವರ ಅಕಾಲಿಕ ಮರಣದಿಂದ ಕುಟುಂಬ ಕಂಗೆಟ್ಟಿದ್ದು, ಸತತ ಕಷ್ಟ ಕಾರ್ಪಣ್ಯಕ್ಕೆ ಸಿಲುಕಿತ್ತು .ಈತನ ನಿಧನದಿಂದ ಮನೆಯ ಆಧಾರಸ್ತಂಭವೇ ಕುಸಿದುಬಿದ್ದಂತಾಯಿತು. ಮಗನ ದಾರುಣ ಸಾವಿನ ಆಘಾತದಿಂದ ಚೇತರಿಸಿಕೊಳ್ಳುತ್ತಿರುವಂತೆ ರವಿ ಪೂಜಾರಿ ಅವರ ಕಿರಿಮಗ ಜಗದೀಶ (26) ಅವರೂ ಅಪಘಾತದಿಂದ ನಡೆಯಲಾಗದೇ ಮಲಗಿರಬೇಕಾದ ಪರಿಸ್ಥಿತಿ ಎದುರಾಗಿತ್ತು. ದುಡಿದ ಹಣವನ್ನೆಲ್ಲಾ ಆಸ್ಪತ್ರೆಗೆ ಹಾಕಿ ಕೈ ಬರಿದು ಮಾಡಿಕೊಂಡಿರುವ ಸಂಸಾರದ ಪೂರ್ತಿ ಜವಾಬ್ದಾರಿ ಮದುವೆ ವಯಸ್ಸಿನ ಮಗಳು ಆಶಾ(22) ಅವರ ಹೆಗಲಿಗೆ ಬಿದ್ದಿದ್ದು, ದೈನಂದಿನ ಜೀವನ ನಿರ್ವಹಣೆ ಕಷ್ಟದಾಯಕವಾಗಿರುವುದನ್ನು ಮನಗಂಡ `ಕುಲಾಲ್ ವರ್ಲ್ಡ್’ ನ ನಿರ್ವಾಹಕರು ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡಿದ್ದರು. ಇದಕ್ಕೆ ಹಲವು ದಾನಿಗಳು ಸ್ಪಂದಿಸಿದ್ದು ಅಲ್ಪಸಮಯದಲ್ಲೇ 42,800 ರೂ. ಸಂಗ್ರಹವಾಗಿತ್ತು.